The Kerala Story 2: ವಿವಾದಾತ್ಮಕ ಸಿನಿಮಾಗೆ ಹೈಕೋರ್ಟ್ ತಡೆ; ಕೌಂಟರ್ ಅಫಿಡವಿಟ್ ಸಲ್ಲಿಸಿದ ನಿರ್ಮಾಪಕ
'ದಿ ಕೇರಳ ಸ್ಟೋರಿ 2' ಸಿನಿಮಾ ವಿವಾದಕ್ಕೆ ಸಿಲುಕಿದೆ. ಮೊದಲ ಪಾರ್ಟ್ ಕೂಡ ಹೀಗೆ ವಿವಾದವನ್ನು ಸೃಷ್ಟಿಸಿತ್ತು. ಇತ್ತೀಚೆಗೆ ಈ ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಅದು ಹೊರ ಬೀಳುತ್ತಿದ್ದಂತೆ ಕೇರಳದಲ್ಲಿ ವಿವಾದ ಭುಗಿಲೆದ್ದಿದೆ. ಈ ಸಿನಿಮಾ ರಿಲೀಸ್ ಆಗಲೇ ಬಾರದು ಎಂದು ಕೆಲ ಸಂಘ-ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ. ಇದು ಸಿನಿಮಾ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
'ದಿ ಕೇರಳ ಸ್ಟೋರಿ 2' ಸಿನಿಮಾ ವಿವಾದವನ್ನು ಕೈಗೆತ್ತಿಕೊಂಡಿದ್ದ ಕೇರಳ ಹೈ ಕೋರ್ಟ್ ಸಿನಿಮಾ ರಿಲೀಸ್ ಮಾಡುವುದನ್ನು ಮುಂದಕ್ಕೆ ಹಾಕುವಂತೆ ನಿರ್ಮಾಪಕರಿಗೆ ಸೂಚನೆಯನ್ನು ನೀಡಿದೆ. ಇದೇ ತಿಂಗಳ 27ರಂದು ಸಿನಿಮಾವನ್ನು ಅದ್ಧೂರಿಯಾಗಿ ರಿಲೀಸ್ ಮಾಡುವುದಕ್ಕೆ ನಿರ್ಮಾಪಕರು ಮುಂದಾಗಿದ್ದರು. ಆದ್ರೀಗ ಅನಿವಾರ್ಯವಾಗಿ ಸಿನಿಮಾವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಸಿನಿಮಾ ಬಿಡುಗಡೆಗೆ ಇನ್ನು ಎರಡು ಇರುವಾಗ ಕೇರಳ ಹೈ ಕೋರ್ಟ್ ನೀಡಿದ ಈ ತೀರ್ಪು ಚಿತ್ರತಂಡಕ್ಕೆ ಆಘಾತ ತಂದೊಡ್ಡಿದೆ. ಹೀಗಾಗಿ ಸಿನಿಮಾದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಷಾ ಕೇರಳ ಹೈ ಕೋರ್ಟ್ ನೀಡಿದ ಸೂಚನೆಗೆ ಕೌಂಟರ್ ಅಫಿಡವಿಟ್ ಅನ್ನು ದಾಖಲಿಸಿದ್ದಾರೆ. ಹೇಗಾದರೂ ಮಾಡಿ ಫೆಬ್ರವರಿ 27ಕ್ಕೆ ರಿಲೀಸ್ ಮಾಡಲೇಬೇಕು ಅಂತ ಪಣತೊಟ್ಟಿದ್ದಾರೆ.
'ದಿ ಕೇರಳ ಸ್ಟೋರಿ 2' ಸಿನಿಮಾಗೆ ಈಗಾಗಲೇ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರವನ್ನು ನೀಡಿದೆ. ಟೀಸರ್ ರಿಲೀಸ್ ಬಳಿಕ ಸೆನ್ಸಾರ್ ಮಂಡಳಿ ನೀಡಿದ ಪ್ರಮಾಣ ಪತ್ರವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲಾಗಿತ್ತು. ಅದರ ವಿಚಾರಣೆ ಇನ್ನೂ ನಡೆಯುತ್ತಿದ್ದು, ಸಿನಿಮಾದ ಬಿಡುಗಡೆ ದಿನವನ್ನು ಮುಂದೂಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಆದರೆ, ಸಿನಿಮಾ ಮುಂದೂಡಿದರೆ, ನಷ್ಟ ಅನುಭವಿಸಬೇಕಾಗುತ್ತೆ ಎಂದು ನಿರ್ಮಾಪಕರು ಕೌಂಟರ್ ಅಫಿಡವಿಟ್ ಸಲ್ಲಿಸಿದ್ದಾರೆ.
ಸಿನಿಮಾ ನೋಡಿ ಪ್ರಮಾಣ ಪತ್ರ ನೀಡುವುದರಲ್ಲಿ ಸೆನ್ಸಾರ್ ಮಂಡಳಿಗೆ ಏಕೈಕ ಅಧಿಕಾರವಿದೆ ಎಂದು ನಿರ್ಮಾಪಕ ವಿಪುಲ್ ಶಾ ಹೇಳಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯ ಹಾಗೂ ಎಕ್ಸ್‌ಪರ್ಟ್‌ಗಳ ಸಮ್ಮುಖದಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಲಾಗಿದೆ. ಅದಾದ ಬಳಿಕ ಅವರಿಗೆ ತೃಪ್ತಿ ಕೊಟ್ಟಿದೆ. ಸಂವಿಧಾನದ ಎಲ್ಲಾ ಪ್ರಕ್ರಿಯೆಯನ್ನು ಅನುಸರಿದ ಬಳಿಕವೇ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ಕೊಟ್ಟಿದೆ ಎಂದು ನಿರ್ಮಾಪಕ ಹೇಳಿದ್ದಾರೆ.

ಅಲ್ಲದೇ ಸೆನ್ಸಾರ್ ಮಂಡಳಿ ನೀಡಿದ ಪ್ರಮಾಣಪತ್ರದಲ್ಲಿ ಅಗತ್ಯ ತಪ್ಪುಗಳನ್ನು ಇರದೆ 'ಕೇರಳ ಸ್ಟೋರಿ 2' ಸಿನಿಮಾವನ್ನು ತಡೆಯುವಂತಿಲ್ಲ ಎಂದು ಕೋರ್ಟ್‌ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ಹಾಗೇನಾದರೂ ಸಿನಿಮಾದ ಬಿಡುಗಡೆಯನ್ನು ತಡೆದರೆ, ತಮಗೆ ಸಿಕ್ಕಾಪಟ್ಟೆ ನಷ್ಟ ಆಗುತ್ತೆ ಎಂದು ನಿರ್ಮಾಪಕ ವಿಪುಲ್ ಶಾ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದೇ ವೇಳೆ ಕೇರಳ ಹೈ ಕೋರ್ಟ್ 'ದಿ ಕೇರಳ ಸ್ಟೋರಿ 2' ಹಿಂದಿ ವರ್ಷನ್ ಅನ್ನು ಕೊಚ್ಚಿಯಲ್ಲಿ ರಿಲೀಸ್‌ಗೂ ಮುನ್ನ ಸಿನಿಮಾವನ್ನು ನ್ಯಾಯಾಲಯಕ್ಕೆ ತೋರಿಸುವಂತೆ ಆದೇಶಿಸಿದೆ. ಇದೇ ವೇಳೆ ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಕೋರ್ಟ್ ಆದೇಶಿಸಿದೆ ಎಂದು ಸುದ್ದಿಯಾಗಿತ್ತು. ಅದನ್ನು ನಿರ್ಮಾಣ ಸಂಸ್ಥೆ ತಳ್ಳಿ ಹಾಕಿದೆ. ಕೇರಳ ಹೈಕೋರ್ಟ್ ಅಂತಹ ಯಾವುದೇ ಆದೇಶವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. 'ದಿ ಕೇರಳ ಸ್ಟೋರಿ 2' ಇದು 2023ರಲ್ಲಿ ತೆರೆಕಂಡ 'ದಿ ಕೇರಳ ಸ್ಟೋರಿ' ಸಿನಿಮಾದ ಎರಡನೇ ಸೆಗ್ಮೆಂಟ್.


Click it and Unblock the Notifications











