ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಜೊತೆ ಕಾಣಿಸಿಕೊಂಡ ದರ್ಶನ್ ನಾಯಕಿ ನವ್ಯಾ ನಾಯರ್
ಕನ್ನಡದಲ್ಲಿ ದರ್ಶನ್ ನಟಿಸಿದ 'ಗಜ', ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ 'ದೃಶ್ಯ' ಹಾಗೂ 'ದೃಶ್ಯ 2' ಸಿನಿಮಾಗಳನ್ನು ವೀಕ್ಷಿಸಿದವರಿಗೆ ಈ ನಟಿಯ ಪರಿಚಯವಿದ್ದೇ ಇರುತ್ತೆ. ಮಲಯಾಳಂ ಚಿತ್ರರಂಗದ ನಟಿ ನವ್ಯಾ ನಾಯರ್ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕನ್ನಡವೂ ಕೂಡ ಒಂದು. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದ 'ಗಜ' ಇವರಿಗೆ ಬಹುದೊಡ್ಡ ಯಶಸ್ಸು ಕೊಟ್ಟ ಸಿನಿಮಾ. ಇಂದಿಗೂ ಈ ಸಿನಿಮಾದಿಂದಲೇ ಕನ್ನಡಿಗರು ಗುರುತಿಸುತ್ತಾರೆ.
ನವ್ಯಾ ನಾಯರ್ ಈಗ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಕ್ಲಾಸಿಕಲ್ ಡ್ಯಾನ್ಸರ್ ಆಗಿ ಹಲವು ಕಡೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇವರ ಕ್ಲಾಸಿಕ್ ಡ್ಯಾನ್ಸ್ ಕಣ್ತುಂಬಿಕೊಂಡವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುವಂತೆ ಒತ್ತಡವನ್ನು ಹಾಕುತ್ತಿದ್ದಾರೆ. ಸದ್ಯ ನವ್ಯಾ ನಾಯರ್ ಲಂಡನ್ ಪ್ರವಾಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರು ಬದುಕಿನ ಅತ್ಯದ್ಭುತ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಮಲಯಾಳಂ ಮಾಧ್ಯಮಗಳ ಪ್ರಕಾರ, ನವ್ಯಾ ನಾಯರ್ ಕಳೆದ ಕೆಲವು ದಿನಗಳಿಂದ ಲಂಡನ್‌ನಲ್ಲಿದ್ದಾರೆ. ಅಲ್ಲಿಗೆ ಕೆಲವು ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಫೋಟೊವನ್ನು ಅಷ್ಟೇ ಖುಷಿಯಿಂದ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನವ್ಯಾ ನಾಯರ್‌ಗೆ ಕ್ರೀಡೆಗಳಲ್ಲಿ ಕ್ರಿಕೆಟ್ ಅಂದರೆ ಬಲು ಇಷ್ಟ. ಬಾಲ್ಯದಿಂದಲೂ ಕ್ರಿಕೆಟ್ ನೋಡಿಕೊಂಡು ಬೆಳೆದು ಬಂದಿದ್ದಾರೆ. ಇವರಲ್ಲಿ ಅಚ್ಚು ಮೆಚ್ಚಿನ ಕ್ರಿಕೆಟರ್ ಸೌರವ್ ಗಂಗೂಲಿ. ಭಾರತದ ಮಾಜಿ ಕ್ರಿಕೆಟಿಗನ ಆಟವನ್ನು ಬಾಲ್ಯದಿಂದಲೂ ನೋಡಿ ಖುಷಿ ಪಟ್ಟಿದ್ದಾರೆ. ಸೌರವ್ ಗಂಗೂಲಿಯ ಕ್ರಿಕೆಟ್ ಆಟವನ್ನು ನೋಡಿ ಮೆಚ್ಚಿಕೊಂಡಿರುವ ನವ್ಯಾ ನಾಯರ್ ಅವರನ್ನೇ ಲೈವ್ ಆಗಿ ಭೇಟಿ ಮಾಡಿದ ಖುಷಿಯಲ್ಲಿ ಇದ್ದಾರೆ. ಅದೂ ಅಚಾನಕ್ ಆಗಿ ಸೌರವ್ ಗಂಗೂಲಿ ಸಿಕ್ಕಾಗ ಫೋಟೊ ತೆಗೆದುಕೊಂಡು ಸಂಭ್ರಮಿಸಿ ಹೀಗೆ ಬರೆದುಕೊಂಡಿದ್ದಾರೆ.
"ನನಗೆ ಇನ್ನೂ ಇದು ಅವಾಸ್ತವಿಕ ಎನಿಸುತ್ತಿದೆ. ನನ್ನ ಲಂಡನ್ ಪ್ರವಾಸದಲ್ಲಿ ನಾನು ಸೌರವ್ ಗಂಗೂಲಿಯನ್ನು ಭೇಟಿ ಮಾಡಿದೆ. ಶಾಲಾ ವಿದ್ಯಾರ್ಥಿನಿಯಾಗಿದ್ದ ದಿನಗಳಿಂದ ಟಿವಿಯಲ್ಲಿ ದಾದಾಗೆ ಹುರಿದುಂಬಿಸಿದೆ. ಅಲ್ಲಿಂದ ಹಿಡಿದು ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡಿ ಆ ಕ್ಷಣವನ್ನು ಹಂಚಿಕೊಳ್ಳುವವರೆಗೆ ಅದ್ಭುತ. ಕೆಲವು ನೆನಪುಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ಲೆಜೆಂಡ್" ಎಂದು ನಟಿ ನವ್ಯಾ ನಾಯರ್ ಹೇಳಿಕೊಂಡಿದ್ದಾರೆ.
ಬಹುಭಾಷಾ ನಟಿ ನವ್ಯಾ ನಾಯರ್ ಈಗ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅವರು ನೃತ್ಯದ ಕಡೆಗೆ ಹೆಚ್ಚು ಗಮನವನ್ನು ಹರಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಅವರದ್ದೇ ಮಾತಂಗಿ ಸ್ಕೂಲ್ ಆಫ್ ಡ್ಯಾನ್ ಎನ್ನುವ ನೃತ್ಯ ಶಾಲೆಯನ್ನು ಆರಂಭಿಸಿದ್ದಾರೆ. ಇಲ್ಲಿ ನವ್ಯಾ ನಾಯರ್ ವಿದ್ಯಾರ್ಥಿಗಳಿಗೆ ಡ್ಯಾನ್ಸ್ ಅನ್ನು ಕಲಿಸಿಕೊಡುತ್ತಾರೆ. ಹೀಗಾಗಿ ಸಿನಿಮಾಗಳಿಗಿಂತ ಹೆಚ್ಚಾಗಿ ಡ್ಯಾನ್ಸ್ ಕಡೆಗೆ ಗಮನ ಹರಿಸಿದ್ದಾರೆ. ಇತ್ತೀಚೆಗೆ ದೇವಸ್ಥಾನದಲ್ಲಿ ನವ್ಯಾ ನೀಡಿದ ಡ್ಯಾನ್ಸ್ ಕಂಡು ವೃದ್ಧೆಯೊಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.
2014 ರಿಂದ ನವ್ಯಾ ನಾಯರ್ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದರು. ಕನ್ನಡದ 'ದೃಶ್ಯ' ಬಳಿಕ ಸುಮಾರು ಏಳು ವರ್ಷಗಳ ಕಾಲ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಮತ್ತೆ 'ದೃಶ್ಯ 2' ಬಳಿಕವೇ ಕಮ್ ಬ್ಯಾಕ್ ಮಾಡಿದ್ದರು. ಇಲ್ಲಿಂದ ವರ್ಷಕ್ಕೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಜಾನಕಿ ಜಾನೆ' ನವ್ಯಾ ನಾಯರ್ ನಟಿಸಿದ ಚಿತ್ರ 2023ರಲ್ಲಿ ರಿಲೀಸ್ ಆಗಿತ್ತು. 'ವರಾಹಂ' ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಇನ್ನೂ ಬಿಡುಗಡೆಯಾಗಬೇಕಿದೆ. ಈ ಮಧ್ಯೆ ನವ್ಯಾ ನಾಯರ್ ಆಗಾಗ ಪ್ರವಾಸಕ್ಕೆ ಅಂತ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಸದ್ಯಕ್ಕೀಗ ಲಂಡನ್‌ನಲ್ಲಿ ಇದ್ದಾರೆ.


Click it and Unblock the Notifications











