ದುಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ 'ಜೋಶ್', '100' ಸಿನಿಮಾದ ನಟಿ ಪೂರ್ಣಾ: ಫೋಟೊ ವೈರಲ್
2009ರಲ್ಲಿ ಬಿಡುಗಡೆಯಾಗಿದ್ದ ಕನ್ನಡದ 'ಜೋಶ್' ಹಾಗೂ 2021ನಲ್ಲಿ ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿದ್ದ '100' ಸಿನಿಮಾ ನಾಯಕಿ ಪೂರ್ಣಾ. ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದ ಪೂರ್ಣಾ ದುಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸಿನಿಮಾರಂಗಕ್ಕೆ ಪೂರ್ಣಾ ಅನ್ನೋ ಹೆಸರಿನಿಂದ ಗುರುತಿಸಿಕೊಂಡಿದ್ದ ನಟಿಯ ಮೂಲ ಹೆಸರು ಶಾನ್ಮಾ ಕಾಸಿಮ್. ಕೇರಳ ಮೂಲದವರಾಗಿದ್ದರೂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ತೆಲುಗಿನ ಸೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ.

ಪೂರ್ಣ ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ವೃತ್ತಿ ಬದುಕನ್ನು ಆರಂಭ ಮಾಡಿದ್ರು. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 'ಶ್ರೀ ಮಹಾಲಕ್ಷ್ಮಿ' ಅನ್ನೋ ಸಿನಿಮಾದ ಮೂಲಕ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ತಾಯಿಯಾಗುತ್ತಿರುವುದಾಗಿ ಪೂರ್ಣಾ ಹೇಳಿದ್ದರು. ಇತ್ತೀಚೆಗೆ ನಟಿ ದುಬೈಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಸಂಪೂರ್ಣ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪೂರ್ಣ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ತೆಲುಗಿನ 'ಲೆಜೆಂಡ್' ಬಾಲಕೃಷ್ಣ ನಟಿಸಿದ್ದ 'ಅಖಂಡ' ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾಗಿರೋ ನಾನಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ'ದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಗೆ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ರವಿಬಾಬು ನಿರ್ದೇಶನದಲ್ಲಿ OTTಗೂ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ಕಳೆದ ವರ್ಷ ಪೂರ್ಣಾ ಉರ್ಫ್ ಶಾಮ್ನಾ ಕಾಸಿಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೆಬಿಎಸ್ ಗ್ರೂಪ್ ಕಂಪನಿಯ ಮಾಲೀಕ ಮತ್ತು ಸಿಇಒ ಆಗಿರುವ ಶನೀದ್ ಆಸಿಫ್ ಅಲಿಯನ್ನು ದುಬೈನಲ್ಲಿ ಮದುವೆಯಾಗಿದ್ದರು. ಈಗ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಫೋಟೊಗಳನ್ನು ಶೇರ್ ಮಾಡಿದ ಬಳಿಕ ನೆಟ್ಟಿಗರು ನಟಿ ಪೂರ್ಣಾಗೆ ಶುಭಾಶಗಳನ್ನು ತಿಳಿಸುತ್ತಿದ್ದಾರೆ. ಇದರೊಂದಿಗೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅನ್ನೋ ಎಂದು ವರದಿಯಾಗಿದೆ. 'ಪದಮ್ ಪಯ್ಸುಮ್', 'ಬ್ಯಾಕ್ ಡೋರ್', 'ವೃತ್ತಂ', 'ನಾತಿರಾ', 'ಪಿಸಾಸು 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











