'ದೃಶ್ಯಂ' ನಿರ್ದೇಶಕನ ಜೊತೆ 5ನೇ ಸಿನಿಮಾ ಘೋಷಿಸಿದ ಮೋಹನ್ ಲಾಲ್: 'ದೃಶ್ಯಂ 3'ನಾ? ಇಲ್ಲ ಬೇರೆನಾ?
ಮಲಯಾಲಂನಲ್ಲಿ ಅದ್ಭುತ ಸಿನಿಮಾಗಳನ್ನು ಕೊಟ್ಟ ಕಾಂಬಿನೇಷನ್ ಮತ್ತೆ ಒಟ್ಟಿಗೆ ಸೇರಿಕೊಂಡಿದೆ. ಮೋಹನ್ ಲಾಲ್ ಹಾಗೂ ದೃಶ್ಯಂ ಸಿನಿಮಾ ನಿರ್ದೇಶಕ ಜೀತು ಜೋಸೆಫ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ಪ್ರೇಮಿಗಳು ಕುತೂಹಲ ಗರಿಗೆದರಿದೆ.
ಅಷ್ಟಕ್ಕೂ ಕುತೂಹಲ ಹೆಚ್ಚಾಗಲು ಕಾರಣವಿದೆ. ಇದು ದೃಶ್ಯಂ ಸಿನಿಮಾ ಮೂರನೇ ಭಾಗನಾ? ಅನ್ನೋದು ಒಂದು ಪ್ರಶ್ನೆ. ಇದು ಬೇರೆ ಸಿನಿಮಾ ಅನ್ನೋದು ಇನ್ನೊಂದು. ಮೋಹನ್ ಲಾಲ್ ಹಾಗೂ ಜೀತು ಜೋಸೆಫ್ ಕಾಂಬಿನೇಷನ್‌ನಲ್ಲಿ ಬಂದ 'ದೃಶ್ಯಂ' ಹಾಗೂ 'ದೃಶ್ಯಂ 2' ಎರಡೂ ಸಿನಿಮಾಗಳೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಭಾಷೆಯ ಬೇಧವನ್ನು ಮರೆತು ಸಿನಿಮಾ ನೋಡಿದ್ದರು.

ಈಗ ಈ ಜೋಡಿಯ ಹೊಸ ಸಿನಿಮಾ ಪ್ರೊಡಕ್ಷನ್ ನಂ 33 ಅನೌನ್ಸ್ ಆಗಿದೆ. ವಿಶೇಷ ಅಂದರೆ, 'ದೃಶ್ಯಂ' ಸಿನಿಮಾ ನಿರ್ಮಿಸಿದ ಸಂಸ್ಥೆಯೇ ಈ ಸಿನಿಮಾ ಹಣ ಹೂಡುತ್ತಿದೆ. ಹೀಗಾಗಿ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಬ್ಲಾಕ್‌ಬಸ್ಟರ್ ಜೋಡಿಯಿಂದ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ಯಾವುದು? 'ದೃಶ್ಯಂ 3' ಇರಬಹುದಾ? ಇಲ್ಲಾ ಬೇರೆನಾ? ಅನ್ನೋದನ್ನು ನೋಡಲು ಮುಂದೆ ಓದಿ.
5ನೇ ಬಾರಿ ಜೊತೆಯಾದಾಗ 'ದೃಶ್ಯಂ' ಜೋಡಿ
ಮೋಹನ್ ಲಾಲ್ ಹಾಗೂ ಜೀತು ಜೋಸೆಫ್ ಜೋಡಿ ಜೊತೆಯಾಗಿ ಮಾಡಿದ ಸಿನಿಮಾಗಳೆಲ್ಲಾ ಜಾದು ಮಾಡಿವೆ. ಪ್ರೇಕ್ಷಕರಿಗೆ ಹೊಸ ಅನುಭವವನ್ನು ಕೊಟ್ಟಿವೆ. ಈಗ ಅನೌನ್ಸ್ ಆಗಿರುವ 'ಪ್ರೊಡಕ್ಷನ್ ನಂ 33' ಮೇಲೂ ಅದೇ ನಿರೀಕ್ಷೆಯಿದೆ. ಈ ಸಿನಿಮಾ ಇದೇ ಆಗಸ್ಟ್ 23ರಂದು ಶೂಟಿಂಗ್ ಆರಂಭ ಮಾಡಲಿದೆ ಎನ್ನಲಾಗುತ್ತಿದೆ. ಆದರೆ, ತಂಡ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.
ಅಂದ್ಹಾಗೆ, ಮೋಹನ್ ಲಾಲ್ ಹಾಗೂ ಜೀತು ಜೋಸೆಫ್ ಜೊತೆಯಾದ ಐದನೇ ಸಿನಿಮಾವಿದು. 'ದೃಶ್ಯಂ' ಸೀರಿಸ್ ಮೂಲಕ ಜನಪ್ರಿಯತೆ ಗಳಿಸಿರುವ ಈ ಜೋಡಿಯ ಹೊಸ ಸಿನಿಮಾ ಬಗ್ಗೆ ಈ ಕಾರಣಕ್ಕೆ ನಿರೀಕ್ಷೆಯಿದೆ. ಆದರೆ, ಸಿನಿಮಾ ಹೆಚ್ಚಿನ ಮಾಹಿತಿ ಬಿಟ್ಟುಕೊಡದೆ ಇರೋದ್ರಿಂದ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.
ಈಗಾಗಲೇ ಎರಡು ಸಿನಿಮಾಗೆ ಗ್ರೀನ್ ಸಿಗ್ನಲ್
ಮೋಹನ್ ಲಾಲ್ ಹಾಗೂ ಜೀತು ಜೋಸೆಫ್ ಇಬ್ಬರೂ ಕಾಂಬಿನೇಷನ್‌ನಲ್ಲಿ ಎರಡು ಸಿನಿಮಾ ಸೆಟ್ಟೇರಿದೆ. ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ದೃಶ್ಯಂ 3' ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಹಾಗೇ ಮತ್ತೊಂದು ಸಿನಿಮಾ 'ರಾಮ್' ಚಿತ್ರೀಕರಣದ ಹಂತದಲ್ಲಿ ಇದೆ. ಈ ಎರಡು ಸಿನಿಮಾ ಜೊತೆ ಐದನೇ ಸಿನಿಮಾ ಅನೌನ್ಸ್ ಆಗಿದ್ದು, ಕುತೂಹಲ ಕೆರಳಿಸಿದೆ.
'ರಾಮ್' ಸಿನಿಮಾದ ಚಿತ್ರೀಕರಣ ಈಗಾಗಲೇ ಶೇ.50 ಮುಗಿಸಿದೆ. ಸಿನಿಮಾದ ಚಿತ್ರೀಕರಣ ಇನ್ನೂ ಚಾಕಿ ಉಳಿದಿದ್ದು, ತ್ರಿಶಾ ಕೃಷ್ಣನ್ ಈ ಸಿನಿಮಾದ ಹೀರೊಯಿನ್. ಎರಡು ಪಾರ್ಟ್‌ಗಳಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಎರಡು ಭಾಷೆಯಲ್ಲಿ 'ದೃಶ್ಯಂ 3' ಶೂಟ್
ಮಲಯಾಳಂ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ದೃಶ್ಯಂ'. ಈ ಸಿನಿಮಾದ ಮೂರನೇ ಭಾಗವನ್ನು ನೋಡುವುದಕ್ಕೆ ಸಿನಿಪ್ರೇಮಿಗಳೆಷ್ಟು ಕಾತುರರಾಗಿದ್ದಾರೆ ಅನ್ನೋದು ಗೊತ್ತೇ ಇದೆ. ಆದ್ರೀಗ ಈ ಬಾರಿ 'ದೃಶ್ಯಂ 3' ಸಿನಿಮಾವನ್ನು ಮಲಯಾಳಂ ಹಾಗೂ ಹಿಂದಿ ಎರಡೂ ಭಾಷೆಯಲ್ಲೂ ಏಕಕಾಲಕ್ಕೆ ಸೆಟ್ಟೇರಲಿದೆ ಎಂದು ವರದಿಯಾಗಿದೆ.
'ದೃಶ್ಯಂ 3' ಮಲಯಾಳಂ ಹಾಗೂ ಹಿಂದಿಯಲ್ಲಿ ಒಟ್ಟಿಗೆ ಸೆಟ್ಟೇರಿದರೆ, ರಿಲೀಸ್ ಕೂಡ ಏಕಕಾಲಕ್ಕೆ ಆಗುತ್ತೆ. ಹೀಗಾಗಿ ತೆಲುಗು ಹಾಗೂ ಕನ್ನಡದ ಅವತರಣಿಕೆಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಇತ್ತ ತೆಲುಗು ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ಮಲಯಾಳಂ ಹಾಗೂ ಹಿಂದಿ ಜೊತೆನೇ ರಿಲೀಸ್ ಮಾಡುವ ಸಾಧ್ಯತೆಯಿದೆ.


Click it and Unblock the Notifications











