ಹುಚ್ಚಾಟ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್
ಕೇರಳದ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಲಾಕ್ ಡೌನ್ ಸಂದರ್ಭದಲ್ಲಿ ಹುಚ್ಚಾಟ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ವೈರಸ್‌ನಿಂದ ಮೊದಲೇ ಎಲ್ಲರೂ ತತ್ತರಿಸಿರುವ ಸಂದರ್ಭದಲ್ಲಿ ಈ ನಟಧ್ವಯರು ಮೋಜು ಮಾಡಲು ಹೋದ ಆರೋಪಕ್ಕೆ ಒಳಗಾಗಿದ್ದಾರೆ.
Recommended Video
ಪೃಥ್ವಿರಾಜ್ ಮತ್ತು ದುಲ್ಕರ್ ಸಲ್ಮಾನ್ ಮಾಲೀಕರಾಗಿರುವ ಎರಡು ಕಾರುಗಳು ರೇಸ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಕುರಿತು ತನಿಖೆ ನಡೆಸಲು ಕೇರಳ ಮೋಟಾರು ವಾಹನ ಇಲಾಖೆ ಮುಂದಾಗಿದೆ. ಕೊಟ್ಟಾಯಂ-ಕೊಚ್ಚಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಮಿತಿಯನ್ನೂ ಮೀರಿ ಅತಿ ವೇಗದಿಂದ ಕಾರು ಚಲಾಯಿಸುವುದು ಈ ವಿಡಿಯೋದಲ್ಲಿ ದಾಖಲಾಗಿದ್ದು, ಇದರ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಲಾಗಿದೆ. ಮುಂದೆ ಓದಿ..

ವಿಡಿಯೋ ಮಾಡಿದ ಯುವಕರು
ಹೈವೇಯಲ್ಲಿ ಎರಡು ಕಾರುಗಳು ರೇಸ್ ಮಾಡುತ್ತಿರುವುದನ್ನು ಕಂಡ ಇಬ್ಬರು ಯುವಕರು ಬೈಕ್‌ನಲ್ಲಿ ಚೇಸ್ ಮಾಡಿದ್ದಾರೆ. ಅವರ ಈ ಹುಚ್ಚಾಟಗಳನ್ನು ಸಂಪೂರ್ಣವಾಗಿ ವಿಡಿಯೋ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಸ್ಟಾರ್ ನಟರಿಬ್ಬರ ಮೋಜಿನ ಆಟ ಬೆಳಕಿಗೆ ಬಂದಿದೆ.

ನಟರ ಮುಖ ಕಾಣಿಸುವುದಿಲ್ಲ
ಈ ವಿಡಿಯೋ ಯಾವಾಗ ಮಾಡಿರಬಹುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಲಾಕ್ ಡೌನ್ ನಡುವೆ ಕಳೆದ ವಾರಾಂತ್ಯದಲ್ಲಿ ಈ ರೇಸ್ ನಡೆದಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಇಬ್ಬರೂ ನಟರ ಮುಖ ಕಾಣಿಸಿಕೊಳ್ಳುವುದಿಲ್ಲ. ಆದರೆ ಬೈಕ್‌ನಲ್ಲಿರುವ ಯುವಕರು ಆ ನಟರ ಹೆಸರನ್ನು ಕರೆಯುವುದು ಕೇಳಿಸುತ್ತದೆ.

ಕ್ಯಾಮೆರಾ ಪರಿಶೀಲನೆ
ಈ ಅತಿವೇಗದ ಕಾರು ಚಾಲನೆಯಲ್ಲಿ ನಟರು ಭಾಗಿಯಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ತನಿಖೆ ಆರಂಭಿಸಿದ್ದೇವೆ. ಕೊಟ್ಟಾಯಂ-ಕೊಚ್ಚಿ ಮಾರ್ಗದಲ್ಲಿ ಅಳವಡಿಸಿರುವ ವೇಗ ಪತ್ತೆಹಚ್ಚುವ ಕ್ಯಾಮೆರಾಗಳನ್ನು ಪರಿಶೀಲಿಸಿ ಅವುಗಳ ವೇಗವನ್ನು ತಿಳಿಯುವಂತೆ ಎಂವಿಡಿಯ ಆಟೋಮೇಟೆಡ್ ಎನ್‌ಫೋರ್ಸ್‌ಮೆಂಟ್ ಘಟಕಕ್ಕೆ (ಎಇಡಬ್ಲ್ಯೂ) ಸೂಚಿಸಲಾಗಿದೆ ಎಂದು ಎಂವಿಡಿ ಜಂಟಿ ಸಾರಿಗೆ ಆಯುಕ್ತ ರಾಜೀವ್ ಪುತಲಾಥ್ ತಿಳಿಸಿದ್ದಾರೆ.

ನೋಟಿಸ್ ನೀಡಲಾಗುವುದು
ನಟರು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ತೀರ್ಮಾನಕ್ಕೆ ನಾವು ಈಗಲೇ ಬರಲು ಸಾಧ್ಯವಿಲ್ಲ. ಆ ವಾಹನಗಳ ನೋಂದಣಿ ಇರುವ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಶಿಕ್ಷೆ ವಿಧಿಸಬಹುದು
ಕಾರಿನ ಮಾಲೀಕರು ತಪ್ಪಿತಸ್ಥ ಎಂದು ಎಂವಿಡಿ ಕಂಡುಕೊಂಡರೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184ರ ಅಡಿ ಅವರಿಗೆ 1,500 ರೂ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅಪರಾಧ ಪುನರಾವರ್ತನೆಯಾದರೆ 3,000 ರೂ. ದಂಡ ತೆರಬೇಕಾಗುತ್ತದೆ.

ಕ್ಯಾಮೆರಾ ಕೆಲಸ ಮಾಡುತ್ತಿಲ್ಲ
ಈ ರೇಸ್‌ನಲ್ಲಿ ಪೋರ್ಷ್ ಮತ್ತು ಲ್ಯಾಂಬೋರ್ಗಿನಿ ಮಾಡೆಲ್ ಕಾರುಗಳು ಭಾಗಿಯಾಗಿದ್ದು, ಇದರೊಂದಿಗೆ ಮತ್ತೊಂದು ಕಾರು ಕೂಡ ಇದೆ. ಇದು ಯಾವುದೆಂದು ಗೊತ್ತಾಗಿಲ್ಲ. ಕಳೆದ ಪ್ರವಾಹದ ಸಮಸ್ಯೆಗಳು ಉಂಟಾದಾಗಿನಿಂದ ಈ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎಂದು ಸಹ ವರದಿಯಾಗಿದೆ.


Click it and Unblock the Notifications











