ಗುರುವಾಯೂರು ಸನ್ನಿಧಿಯ ಕೊಳದಲ್ಲಿ ಕಾಲಿಟ್ಟು ರೀಲ್ಸ್ ಮಾಡಿದ ಮುಸ್ಲಿಂ ಮಹಿಳೆ; ದೇವಸ್ಥಾನದ ಶುದ್ಧೀಕರಣ..ದೂರು ದಾಖಲು
ಕೇರಳದ ಸುಪ್ರಸಿದ್ಧ ದೇವಸ್ಥಾನ ಗುರುವಾಯೂರು ಕೊಳದಲ್ಲಿ ಪಾದ ತೊಳೆದು ರೀಲ್ಸ್ ಮಾಡಿ ಅಪಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಮುಸ್ಲಿಂ ವ್ಲಾಗರ್ ಒಬ್ಬರು ದೇವಸ್ಥಾನಕ್ಕೆ ಪ್ರವೇಶಿಸಿ, ಕೊಳದಲ್ಲಿ ರೀಲ್ಸ್ ಮಾಡಿದ್ದು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಜಾಸ್ಮಿನ್ ಜಾಫರ್ ಎಂಬ ಮಹಿಳೆ ವ್ಲಾಗರ್ ಹಾಗೂ ಮಲಯಾಳಂನ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಯಾಗಿದ್ದು, ಸದ್ಯ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಜಾಸ್ಮಿನ್ ಜಾಫರ್ ಗುರುವಾಯೂರು ದೇವಸ್ಥಾನದ ಕೊಳದಲ್ಲಿ ಪಾದ ತೊಳೆದುಕೊಂಡು ರೀಲ್ಸ್ ಮಾಡಿದ್ದರು. ಇದು ಇದೀಗ ವಿವಾದ ಸೃಷ್ಟಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜಾಸ್ಮಿನ್ ಜಾಫರ್ ವಿರುದ್ಧ ಆಕ್ರೋಶ ಹೊರ ಹಾಕಿತ್ತಿದ್ದಾರೆ. ಕೇರಳದ ಹಿಂದೂ ಧಾರ್ಮಿಕ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದು, ದೇವಸ್ಥಾನದ ನಿಯಮಗಳನ್ನು ಮೀರಿದ್ದಕ್ಕಾಗಿ ದೂರನ್ನು ದಾಖಲಿಸಲಾಗಿದೆ.

ಮಾಜಿ ಬಿಗ್‌ಬಾಸ್ ಸ್ಪರ್ಧಿ ಜಾಸ್ಮಿನ್ ಜಾಫರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೇರಳದ ಸುಪ್ರಸಿದ್ಧ ದೇವಸ್ಥಾನ ಗುರುವಾಯೂರು ದೇವಸ್ಥಾನದಲ್ಲಿ ಇಂದು (ಆಗಸ್ಟ್ 26) ಶುದ್ಧೀಕರಣದ ವಿಧಿ ವಿಧಾನಗಳು ನೆರವೇರಿವೆ. ವ್ಲಾಗರ್ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಜಸ್ಮಿನ್ ಜಾಫರ್ ದೇವಸ್ಥಾನದ ಕೊಳದಲ್ಲಿ ಪಾದ ತೊಳೆದಿದ್ದ ಹಿನ್ನಲೆಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ದೇವಸ್ಥಾನದ ಆಡಳಿತ ಮಂಡಳಿ ಜಾಫರ್ ವಿರುದ್ಧ ಪೊಲೀಸರಿಗೆ ದೂರು ನೀಡಿತ್ತು. ಜಾಸ್ಮಿನ್ ಜಾಫರ್ ಮಾಡಿದ ಕೆಲಸಕ್ಕೆ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಇಷ್ಟೇ ಅಲ್ಲದೆ ದೇವಸ್ಥಾನದ ಹೊರಾಂಗಣದಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಈ ಸಂಬಂಧ ಹೈಕೋರ್ಟ್ ನೀಡಿದ ನಿರ್ದೇಶನದ ಉಲ್ಲಂಘನೆಯಾಗಿದೆ ಎಂದು ಜಾಸ್ಮಿನ್ ವಿರುದ್ಧ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.
ದೇವಸ್ಥಾನದ ಹೊರಾಂಗಣದಲ್ಲಿ ಅನ್ಯ ಧರ್ಮೀಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗಿದ್ದರೂ ಜಾಸ್ಮಿನ್ ಜಾಫರ್ ದೇವಸ್ಥಾನದ ಕೊಳದಲ್ಲಿ ಪಾದ ತೊಳೆದುಕೊಂಡು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಗುರುವಾಯೂರು ದೇವಸ್ಥಾನ ಕೇರಳದ ಹಿಂದೂಗಳ ಪವಿತ್ರ ಸ್ಥಳ. ಈ ಕೊಳದಲ್ಲಿ ಪ್ರತಿ ವರ್ಷದ ಉತ್ಸವ ನಡೆಯುತ್ತೆ. ಹೀಗಾಗಿ ಹಿಂದೂ ಮುಖಂಡರು ರೊಚ್ಚಿಗೆದ್ದಿದ್ದಾರೆ.

ಜಾಸ್ಮಿನ್ ಜಾಫರ್ ಕೊಳದಲ್ಲಿ ಪಾದ ತೊಳೆದ ರೀಲ್ಸ್ ಅನ್ನು ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೂಡ ಕೇಳಿದ್ದರು. ಕೊಳೆದಲ್ಲಿ ಪಾದ ತೊಳೆದು ರೀಲ್ಸ್ ಮಾಡಿ, ಯಾರಿಗೂ ನೋವುಂಟು ಮಾಡುವ ಉದ್ದೇಶ ತನಗೆ ಇರಲಿಲ್ಲವೆಂದು ಅವರು ಹೇಳಿದ್ದರು. ಇದಾದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಶುದ್ಧೀಕರಣಕ್ಕೆ ಮುಂದಾಗಿದ್ದರು. ಅದರಂತೆ ಇಂದು (ಆಗಸ್ಟ್ 26) ದೇವಸ್ಥಾನದ ಪ್ರಧಾನ ಅರ್ಚಕರ ನಿರ್ದೇಶನದಂತೆ ಶುದ್ಧೀಕರಣ ಮಾಡಲಾಗಿದೆ. ಹೀಗಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧವನ್ನು ವಿಧಿಸಲಾಗಿತ್ತು.
ಗುರುವಾಯೂರು ದೇವಸ್ಥಾನದ ಹೊರಾಂಗಣದಲ್ಲಿ ವಿಡಿಯೋ ಚಿತ್ರೀಕರಣ ಮಾಡದಂತೆ ಕೇರಳ ಹೈಕೋರ್ಟ್ 2024ರಲ್ಲಿ ನಿರ್ಬಂಧ ಹೇರಿತ್ತು. ಕೇವಲ ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಿಗೆ ಮಾತ್ರ ಅನುಮತಿಯನ್ನು ನೀಡಲಾಗಿತ್ತು. ಗುರುವಾಯೂರು ದೇವಸ್ಥಾನವನ್ನು ಕೇರಳ ಪೊಲೀಸ್ ಕಾಯ್ದೆ 2011ರ ಸೆಕ್ಷನ್ 83(1)ರ ಅಡಿಯಲ್ಲಿ ವಿಶೇಷ ಭದ್ರತಾ ವಲಯವೆಂದು ಅಧಿಸೂಚಿಸಲಾಗಿದೆ.


Click it and Unblock the Notifications











