ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರ್ 'ಲೂಸಿಫರ್ 2'ಗೆ ಸಾಥ್ ಕೊಟ್ಟ ಹೊಂಬಾಳೆ ಫಿಲ್ಮ್ಸ್; ಐಪಿಎಲ್‌ಗೆ ಸೆಡ್ಡೆ ಹೊಡೆದ 'L2'
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಲೂಸಿಫರ್ 2' ಅಥವಾ 'ಎಲ್ 2' ಅಥವಾ ಎಲ್ 2: ಎಂಪೂರನ್ (L2: Empuraan). ಇದು ಈ ಹಿಂದೆ ರಿಲೀಸ್ ಆಗಿದ್ದ 'ಲೂಸಿಫರ್' ಸೀರಿಸ್‌ನ ಎರಡನೇ ಚಾಪ್ಟರ್. ಈ ಥ್ರಿಲ್ಲಿಂಗ್ ಸಿನಿಮಾ ಇದೇ ತಿಂಗಳು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಾರ್ಚ್ 17ರಂದು ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಲೂಸಿಫರ್'. ಈ ಸಿನಿಮಾದಲ್ಲಿ ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಅದೇ ಚಿತ್ರರಂಗ ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಕಟ್ ಹೇಳಿದ್ದರು. ಇದೊಂದು ಅಪರೂಪದ ಘಟನೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಡೆದಿತ್ತು. ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು. ಅದೇ ಜೋಷ್‌ನಲ್ಲಿ ಮತ್ತೊಂದು ಪಾರ್ಟ್ 2 ರಿಲೀಸ್‌ಗೆ ರೆಡಿಯಾಗುತ್ತಿದೆ.

'ಲೂಸಿಫರ್' ಫಸ್ಟ್ ಪಾರ್ಟ್ ಸೂಪರ್ ಸಕ್ಸಸ್ ಹಾಗಿದ್ದರಿಂದ 2ನೇ ಚಾಪ್ಟರ್ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಈ ಕಾರಣಕ್ಕೆ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದಕ್ಕೆ 'ಎಲ್ 2' ಟೀಮ್ ತುದಿಗಾಲಲ್ಲಿ ನಿಂತಿದೆ. ಈ ಸಿನಿಮಾ ಮಲಯಾಳಂ ಭಾಷೆಯಲ್ಲಿ ನಿರ್ಮಾಣಗೊಂಡಿದ್ದರೂ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಆಯಾ ಭಾಷೆಯ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಗಳು ಅಖಾಡಕ್ಕೆ ಇಳಿದಿವೆ.
ಮೋಹನ್‌ಲಾಲ್ ಜೊತೆ ಕೈ ಜೋಡಿಸಿದ ಹೊಂಬಾಳೆ
ತಮಿಳಿನ ಲೈಕಾ ಪ್ರೊಡಕ್ಷನ್ಸ್, ಮಲಯಾಳಂನ ಆಶೀರ್ವಾದ್ ಸಿನಿಮಾಸ್ ಹಾಗೂ ಗೋಕುಲಂ ಮೂವೀಸ್ ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ 'ಲೂಸಿಫರ್ 2' ಸಿನಿಮಾವನ್ನು ನಿರ್ಮಾಣ ಮಾಡಿದೆ. ಈ ಮೂರು ನಿರ್ಮಾಣ ಸಂಸ್ಥೆಗಳು ಬಿಗ್ ಬಜೆಟ್‌ನಲ್ಲಿ ಮೋಹನ್‌ಲಾಲ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಮೂರು ನಿರ್ಮಾಣ ಸಂಸ್ಥೆಗಳಿಗೀಗ ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೈ ಜೋಡಿಸಿದೆ.
ಕರ್ನಾಟಕದಲ್ಲಿ ಮೋಹನ್‌ಲಾಲ್ ಸಿನಿಮಾ ರಿಲೀಸ್
ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರ್ ಕಾಂಬಿನೇಷನ್ ಸಿನಿಮಾ 'ಲೂಸಿಫರ್ 2' ಈಗಾಗಲೇ ಕ್ರೇಜ್ ಹುಟ್ಟಾಕಿದೆ. ಅಲ್ಲದೆ ಮಲಯಾಳಂ ಸಿನಿಮಾಗಳು ಕಳೆದೊಂದು ವರ್ಷದಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ್ನು ನೀಡುತ್ತಲೇ ಬಂದಿದೆ. ಇನ್ನು ಮೋಹನ್‌ಲಾಲ್ ಸಿನಿಮಾಗೆ ಕರ್ನಾಟಕದಲ್ಲೂ ಅಭಿಮಾನಿಗಳು ಇದ್ದಾರೆ. ಜೊತೆಗೆ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ 'ಕೆಜಿಎಫ್' ಮತ್ತು 'ಕಾಂತಾರ' ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಕರ್ನಾಟಕದ ಏರಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಡಿಸ್ಟ್ರಿಬ್ಯೂಟ್ ಮಾಡುವುದಕ್ಕೆ ಹೊರಟಿದೆ.
ಒಂದೊಂದು ರಾಜ್ಯದಲ್ಲಿ ಒಬ್ಬೊಬ್ಬರು
ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹೇಗೆ 'ಲೂಸಿಫರ್ 2' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆಯೋ ಹಾಗೇ ಆಂಧ್ರ-ತೆಲಂಗಾಣದಲ್ಲಿ ದಿಲ್ ರಾಜು ವಿತರಣೆ ಮಾಡುತ್ತಿದ್ದಾರೆ. ಇನ್ನು ಉತ್ತರ ಭಾರತದಲ್ಲಿ ರವೀನಾ ಟಂಡನ್ ಪತಿ ಅನಿಲ್ ತಡಾನಿ ಈ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ಹೀಗಾಗಿ ಮಾರ್ಚ್ 27ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಲಯಾಳಂ ಸಿನಿಮಾವೊಂದು ಸದ್ದು ಮಾಡಲಿದೆ. ಮೋಹನ್‌ಲಾಲ್ ಸಿನಿಮಾಗಾಗಿ ದಿಗ್ಗಜರೇ ಅಖಾಡಕ್ಕೆ ಇಳಿದಿದ್ದು, 'ಲೂಸಿಫರ್ 2' ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತೋ ನೋಡಬೇಕಿದೆ.
ಪೃಥ್ವಿರಾಜ್‌ಗೆ ಹೊಂಬಾಳೆ ನಂಟು
ಹೊಂಬಾಳೆ ಫಿಲ್ಮ್ಸ್ ಜೊತೆ 'ಲೂಸಿಫರ್ 2' ಸಿನಿಮಾದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಒಳ್ಳೆಯ ನಂಟು ಇಟ್ಟುಕೊಂಡಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದ 'ಸಲಾರ್' ಸಿನಿಮಾದಲ್ಲಿ ಪೃಥ್ವಿ ರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ 'ಸಲಾರ್ 2' ಕೂಡ ಚಾಲ್ತಿಯಲ್ಲಿದೆ. ಇದೇ ನಂಟು ಈಗ ಎಲ್ 2 ವರೆಗೂ ಬಂದಿದೆ.


Click it and Unblock the Notifications











