'ಜವಾನ್' ಬಳಿಕ ಡೈರೆಕ್ಷನ್ ಕಡೆ ಮುಖ ಮಾಡಿದ್ರಾ ನಯನತಾರಾ? 40ನೇ ವಯಸ್ಸಿಗೆ ಹೊಸ ಹೆಜ್ಜೆ?
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮದುವೆ ಬಳಿಕ ಫುಲ್ ಆಕ್ಟಿವ್ ಆಗಿದ್ದಾರೆ. ಒಂದ್ಕಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬ್ಯುಸಿನೆಸ್‌ಗೆ ಕೈ ಹಾಕಿದ್ದಾರೆ. 39 ವರ್ಷದ ನಟಿ ದಿನದಿಂದ ದಿನಕ್ಕೆ ಹೊಸ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಕಳೆದ ನಾಲ್ಕೈದು ದಶಕಗಳಿಂದ ಬೇರೆ ಯಾವುದೇ ನಟಿಗೂ ನಯನತಾರಾಗೆ ಸಿಕ್ಕಷ್ಟು ಯಶಸ್ಸು ಸಿಕ್ಕಿಲ್ಲ. ಯಾರೂ ಲೇಡಿ ಸೂಪರ್‌ಸ್ಟಾರ್ ಅಂತ ಅನಿಸಿಕೊಳ್ಳಲಿಲ್ಲ. ಈಗ ನಯನತಾರಾಗೆ ಆ ಪಟ್ಟ ಸಿಕ್ಕಿದೆ. ಅದನ್ನು ಅಷ್ಟೇ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಮದುವೆ ಬಳಿಕವೂ ಅದೇ ಕ್ರೇಜ್ ಉಳಿಸಿಕೊಂಡಿರುವುದು ಕೂಡ ಅಷ್ಟೇ ದೊಡ್ಡ ಸಂಗತಿ.

ಇತ್ತೀಚೆಗೆ ನಯನತಾರಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಫೋಟೊವನ್ನು ಹಂಚಿಕೊಂಡಿದ್ದಾರೆ. ಆ ಫೋಟೊ ಈಗ ಅವರ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಾಕಿದೆ. ನಯನಾತಾರಾ ನಿರ್ದೇಶನದ ಕಡೆಗೆ ಮುಖ ಮಾಡಿದ್ರಾ? 40 ವರ್ಷಕ್ಕೆ ಹೊಸ ಹೆಚ್ಚು ಇಡುತ್ತಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಫ್ಯಾನ್ಸ್ ಮುಂದಿದೆ.
ನಯನತಾರಾ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ತ್ರಿಶಾ, ಅನುಷ್ಕಾ ಶೆಟ್ಟಿ, ಸಮಂತಾಗೂ ಕೂಡ ನಯನತಾರಾ ಸಂಭಾವನೆಯನ್ನು ಹಿಂದಿಕ್ಕುವುದಕ್ಕೆ ಸಾಧ್ಯವಾಗಲೇ ಇಲ್ಲ. ಸಿನಿಮಾ, ಸಂಭಾವನೆ ವಿಚಾರದಲ್ಲಿ ಕಟ್ಟು ನಿಟ್ಟಾಗಿರೋ ನಯನತಾರಾ ಅದೆಷ್ಟೇ ದೊಡ್ಡ ನಿರ್ದೇಶಕರಾಗಿದ್ದರೂ ಸಂಭಾವನೆ ವಿಚಾರದಲ್ಲಿ ಮಾತ್ರ ರಾಜಿಯಾಗುವುದಿಲ್ಲ ಅನ್ನೋ ಸುದ್ದಿಯಿದೆ.
ನಯನತಾರಾ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆ ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಎನ್ನಲಾಗಿದೆ. ನಿರ್ಮಾಣ ಸಂಸ್ಥೆ ಅದನ್ನು ಒಪ್ಪದೇ ಇದ್ದಾಗ, ಮಣಿರತ್ನಂ ಸಿನಿಮಾಗೆ ಗುಡ್ ಬೈ ಹೇಳಿದ್ದಾರೆನ್ನುವುದು ತಮಿಳು ಚಿತ್ರರಂಗದಲ್ಲಿ ಓಡಾಡುತ್ತಿರುವ ಸುದ್ದಿ.
ಈ ಬೆನ್ನಲ್ಲೇ ನಯನತಾರಾ ಕ್ಯಾಮರಾ ಹಿಂದೆ ನಿಂತಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಯನತಾರಾ ಶೀಘ್ರದಲ್ಲಿಯೇ ಡೈರೆಕ್ಷನ್ ತೊಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. 40 ವಯಸ್ಸಿನ ಆಸುಪಾಸಿನಲ್ಲಿರುವ ನಟಿ ಶೀಘ್ರದಲ್ಲೇ ನಿರ್ದೇಶನಕ್ಕೆ ಕೈ ಹಾಕಲಿದ್ದಾರೆಂದು ಬಲವಾಗಿ ನಂಬಿಕೊಂಡಿದ್ದಾರೆ.
ಮದುವೆ ನಂತರ ನಯನತಾರಾ ನಟಿಸುವುದರಲ್ಲಷ್ಟೇ ಅಲ್ಲ, ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಬ್ಯೂಟಿ ಬ್ರ್ಯಾಂಡ್ 9 ಸ್ಕಿನ್ ನಡೆಸುತ್ತಿದ್ದಾರೆ. ಇದೀಗ ನಯನತಾರಾ ನಿರ್ದೇಶನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ. ನಯನತಾರಾ ಕೂಡ "ಹೊಸ ಆರಂಭದ ಮ್ಯಾಜಿಕ್ ಅನ್ನು ನಂಬಿ" ಎಂದು ಬರೆದುಕೊಂಡಿರೋದು ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ.
ಈ ಫೋಟೊ ವೈರಲ್ ಆಗುತ್ತಿದ್ದಂತೆ ನೂರಾರು ಕಮೆಂಟ್‌ಗಳು ಬಂದಿವೆ. "ನೀವು ನಿರ್ದೇಶನ ಮಾಡುತ್ತೀರಾ", "ಯಾವಾಗ ನಿರ್ದೇಶನ ಮಾಡುತ್ತೀರಾ?" ಎಂಬೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.


Click it and Unblock the Notifications











