ಕಾಸರಗೋಡಿನ ಯುವಕನೊಂದಿಗೆ ಹಸೆಮಣೆ ಏರಿದ ಬೃಂದಾನವನ ನಟಿ: ರಾಧಾ ಪುತ್ರಿ ಮದ್ವೆಗೆ ತಾರೆಯರ ದಂಡು
ದಕ್ಷಿಣ ಭಾರತದ ನಟಿ ಕಾರ್ತಿಕಾ ನಾಯರ್ ಅನ್ನು ಕನ್ನಡಿಗರು ಮರೆತಿರಬಹುದು. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದ 'ಬೃಂದಾವನ' ಸಿನಿಮಾ ನೋಡಿದವರು ಈ ನಟಿಯನ್ನು ಮರೆತಿರಲು ಸಾಧ್ಯವಿಲ್ಲ. ಇದೇ ನಟಿ ಇಂದು (ನವೆಂಬರ್ 19) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಾರ್ತಿಕಾ ನಾಯರ್ ದಕ್ಷಿಣ ಭಾರತದ ಹಿರಿಯ ನಟಿ ರಾಧಾ ಅವರ ಪುತ್ರಿ. ರಾಧಾ ಸಹೋದರಿ ದಕ್ಷಿಣ ಭಾರತದ ಮತ್ತೊಬ್ಬ ಸ್ಟಾರ್ ನಟಿ ಅಂಬಿಕಾ. ಕೆಲವು ದಿನಗಳ ಹಿಂದೆ ಕಾರ್ತಿಕಾ ನಾಯರ್ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಸಾಂಕೇತಿಕವಾಗಿ ಹೇಳಿಕೊಂಡಿದ್ದರು. ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಕೈಗೆ ಉಂಗುರ ಹಾಕಿರುವ ಫೋಟೊವನ್ನು ಹೈಲೈಟ್ ಮಾಡಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಅಂದ್ಹಾಗೆ, ನಟಿ ಕಾರ್ತಿಕಾ ನಾಯರ್ ಕೈ ಹಿಡಿದಿರುವ ವರ ಕಾಸರಗೋಡು ಮೂಲದ ರೋಹಿತ್ ಮೆನನ್. ರವೀಂದ್ರ ಮೆನನ್ ಹಾಗೂ ಶರ್ಮಿಳಾ ದಂಪತಿ ಪುತ್ರ ರೋಹಿತ್ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ಇಂದು (ನವೆಂಬರ್ 19) ತಿರುವನಂತಪುರಂನ ಕವಡಿಯಾರ್ ಉದಯಪಾಲಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದೆ.
ಕಾರ್ತಿಕಾ ನಾಯರ್ ಹಾಗೂ ರೋಹಿತ್ ಮೆನನ್ ಮದುವೆಗೆ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಹಾಗೇ ದಕ್ಷಿಣ ಭಾರತದ ಹಿರಿಯ ನಟಿಯರಾದ ಸುಹಾಸಿನಿ, ಅಂಬಿಕಾ, ರೇವತಿ ಸೇರಿದಂತೆ ನಟಿಯರು ಆಗಮಿಸಿದ್ದರು. ಇವರೊಂದಿಗೆ ಸ್ನೇಹಿತರು ಹಾಗೂ ಸಂಬಂಧಿಕರು, ರಾಜಕೀಯ ಮುಖಂಡರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.
ಈ ಹಿಂದೆ ಕಾರ್ತಿಕಾ ನಾಯರ್ ಅಕ್ಟೋಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಹೇಳಿಕೊಂಡಿದ್ದರು. ಕೊನೆಗೆ ಅದು ನವೆಂಬರ್ 16ಕ್ಕೆ ಫಿಕ್ಸ್ ಆಗಿತ್ತು. ಕೇವಲ ಮೂರು ದಿನಗಳ ಹಿಂದಷ್ಟೇ ರೋಹಿತ್ ಅವರನ್ನು ಪರಿಚಯಿಸಿ ಪೋಸ್ಟ್ ಹಾಕಿದ್ದರು. "ನಿಮ್ಮನ್ನು ಭೇಟಿಯಾಗುವುದು ಅದೃಷ್ಟ. ನಿಮ್ಮ ಪ್ರೀತಿಯಲ್ಲಿ ಕರಗಿ ಹೋಗುವುದು ಕೇವಲ ಮ್ಯಾಜಿಕ್ ಆಗಿತ್ತು. ನಮ್ಮ ಕೌಂಟ್‌ಡೌನ್ ಈಗ ಶುರುವಾಗಿದೆ" ಎಂದು ಬರೆದುಕೊಂಡಿದ್ದರು ಕಾರ್ತಿಕಾ.

ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು ಕಾರ್ತಿಕಾ ನಾಯರ್ ಹಾಗೂ ರೋಹಿತ್ ಮೆನನ್ ಜೋಡಿಗೆ ಶುಭ ಕೋರಿದ್ದಾರೆ. ಈ ನವ ಜೋಡಿಯ ಮದುವೆಯ ಫೋಟೊಗಳು ಹಾಗೂ ಯಾರೆಲ್ಲ ಗಣ್ಯರು ಮದುವೆಗೆ ಬಂದಿದ್ದರೋ ಅವರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
2009ರಲ್ಲಿ ನಾಗಾರ್ಜುನಾ ಪುತ್ರ ನಾಗಚೈತನ್ಯ ನಟಿಸಿದ ಮೊದಲ ಸಿನಿಮಾ 'ಜೋಶ್' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ, ಈ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ತಮಿಳು ಸಿನಿಮಾ 'ಕೋ' ಚಿಕ್ಕದೊಂದು ಸಕ್ಸಸ್ ಕೊಟ್ಟಿತ್ತು. ಜೂ. ಎನ್‌ಟಿಆರ್ ಜೊತೆ 'ದಮ್ಮು' ಕಾರ್ತಿಕಾ ನಾಯರ್‌ಗೆ ತಕ್ಕ ಮಟ್ಟಿಗಿನ ಯಶಸ್ಸು ತಂದುಕೊಟ್ಟಿತ್ತು.
ಕನ್ನಡದ 'ಬೃಂದಾವನ' ಸಿನಿಮಾದಲ್ಲೂ ಕಾರ್ತಿಕಾ ನಾಯರ್ ನಟಿಸಿದ್ದರು. ಆದರೆ, ಈ ಸಿನಿಮಾ ಕೂಡ ನಟಿ ವೃತ್ತಿ ಬದುಕಿಗೆ ದೊಡ್ಡ ಸಕ್ಸಸ್ ಕೊಡಲಿಲ್ಲ. ಆ ಬಳಿಕ 'ಬ್ರದರ್ ಆಫ್ ಬೊಮ್ಮಾಲಿ', 'ಪುರಂಪೊಕು ಎಂಗಿರ ಪೊದ್ದುವುಡಮೈ' ಸಿನಿಮಾಗಳಲ್ಲಿ ನಟಿಸಿದ್ದರು. ಕಾರ್ತಿಕಾಗೆ ಅಂದುಕೊಂಡಿದ್ದಕ್ಕಿಂತ ದೊಡ್ಡ ಸಕ್ಸಸ್ ಸಿನಿಮಾದಲ್ಲಿ ಸಿಗಲಿಲ್ಲ. ಹೀಗಾಗಿ ಒಂದಷ್ಟು ದಿನ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಮದುವೆ ಮೂಲಕ ಸುದ್ದಿಯಲ್ಲಿದ್ದಾರೆ.


Click it and Unblock the Notifications











