Dileep Case: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ನಟ ದಿಲೀಪ್‌ಗೆ ಮುಕ್ತಿ.. "ವಾಹ್, ಜಸ್ಟ್ ವಾಹ್!" ಎಂದ ಗಾಯಕಿ ಚಿನ್ಮಯಿ
ದಕ್ಷಿಣ ಭಾರತದ ಜನಪ್ರಿಯ ನಟಿಯ ಮೇಲೆ 8 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಪ್ರಕರಣದ ತನಿಖೆ ವೇಳೆ ನಟ ದಿಲೀಪ್ ಹೆಸರು ಕೇಳಿ ಬಂದಿತ್ತು. ಈ ಪ್ರಕರಣದ ಮಾಸ್ಟರ್ ಮೈಂಡ್ ದಿಲೀಪ್ ಎಂದು ಹೇಳಲಾಗಿತ್ತು. 2017ರಿಂದ ಸುಮಾರು 8 ವರ್ಷಗಳ ಕಾಲ ನಡೆದ ಈ ಕೇಸ್ ಬಗ್ಗೆ ತನಿಖೆ, ವಿಚಾರಣೆ ನಡೆಯುತ್ತಲೇ ಇತ್ತು. ಆದ್ರೀಗ ಕೊಚ್ಚಿಯ ನ್ಯಾಯಾಲಯ ಈ ಪ್ರಕರಣದಲ್ಲಿ ದಿಲೀಪ್ ಅನ್ನು ಖುಲಾಸೆಗೊಳಿಸಿದೆ.
ಜನಪ್ರಿಯ ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಹೆಸರು ಕೇಳಿ ಬರುತ್ತಿದ್ದಂತೆ ಮಲಯಾಳಂ ಚಿತ್ರರಂಗ ಶಾಕ್ ಆಗಿತ್ತು. ಇಲ್ಲಿವರೆಗೂ ದಿಲೀಪ್ ವಿರುದ್ಧವೇ ಎಲ್ಲರೂ ಬೆರಳು ತೋರುತ್ತಿದ್ದರು. ಆದರೆ, ಈ ಕೇಸ್ ದಿಲೀಪ್ ಪಾತ್ರವಿದೆ ಎಂದು ಸಾಬೀತು ಪಡೆಸುವಲ್ಲಿ ಪ್ರಾಸಿಕ್ಯೂಟರ್ ವಿಫಲರಾಗಿದ್ದಾರೆಂದು ಕಾರಣ ನೀಡಿ ನ್ಯಾಯಾಧೀಶರು ಖುಲಾಸೆ ಮಾಡಿದ್ದಾರೆ. ಈ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆ ಗಾಯಕಿ ಚಿನ್ಮಯಿ ಶ್ರೀಪಾದಾ ವಿಡಂಬನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದ ನಟಿಯನ್ನು ಕಿಡಿಗೇಡಿಗಳು ಕಾರಿನಲ್ಲಿ ಅಪಹರಿಸಿದ್ದರು. 2017ರ ಫೆಬ್ರವರಿ 17ರಂದು ನಡೆದ ಈ ಘಟನೆಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆ ನಡೆದ ಬಳಿಕ ತನಿಖೆ ನಡೆಸಿದ ಪೊಲೀಸರು ಹಲವು ಮಂದಿಯನ್ನು ಬಂಧಿಸಿದ್ದರು. ಬಳಿಕ ನಡೆದ ತನಿಖೆಯಲ್ಲಿ ಮಲಯಾಳಂನ ಸ್ಟಾರ್ ನಟ ದಿಲೀಪ್ ಹೆಸರು ಕೇಳಿ ಬಂದಿತ್ತು.
ಈ ಘಟನೆ ನಡೆದ ಐದು ತಿಂಗಳ ಬಳಿಕ ನಟ ದಿಲೀಪ್ ಅವರನ್ನು ಬಂಧಿಸಲಾಗಿತ್ತು. ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಿಲೀಪ್ ಅವರನ್ನು 8ನೇ ಆರೋಪಿಯಾಗಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ಈ ಕೇಸ್‌ಗೆ ಸಂಬಂಧಿಸಿದಂತೆ ಟ್ರಯಲ್ ಶುರುವಾಗಿತ್ತು. ಬಂಧನದ ಬಳಿಕ ದಿಲೀಪ್ ಹಲವು ಬಾರಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದರೂ, ನಿರಾಕರಣೆ ಮಾಡಲಾಗಿತ್ತು. ಸುಮಾರು 85 ದಿನಗಳು ಜೈಲಿನಲ್ಲಿ ಕಳೆದ ಬಳಿಕ ಜಾಮೀನು ಮಂಜೂರಾಗಿತ್ತು.
ಸುಮಾರು 8 ವರ್ಷಗಳ ಕಾಲ ನಡೆದ ಈ ಪ್ರಕರಣದಲ್ಲಿ ಇಂದು (ಡಿಸೆಂಬರ್ 8) ದಿಲೀಪ್ ಅವರನ್ನು ಖುಲಾಸೆಗೊಳಿಸಲಾಗಿದೆ. ತೀರ್ಪು ಪ್ರಕಟ ಆಗುವುದಕ್ಕೂ ಮುನ್ನ ವಿವಾದಾತ್ಮಕ ಗಾಯಕಿ ಚಿನ್ಮಯಿ ಶ್ರೀಪಾದ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇಂದಿನ ತೀರ್ಪು ಏನೇ ಬಂದರೂ ತಾನು ಸಂತ್ರಸ್ತೆಯ ಪರವಾಗಿ ನಿಲ್ಲುತ್ತೇನೆಂದು ಪೋಸ್ಟ್ ಮಾಡಿದ್ದರು.
ಗಾಯಕಿ ಚಿನ್ಮಯಿ ಶ್ರೀಪಾದ ಮೊದಲು ಮಾಡಿದ ಪೋಸ್ಟ್ ಹೀಗಿದೆ. "ಇಂದು ಬರುವ ತೀರ್ಪು ಏನೇ ಇದ್ದರೂ ನಾನು ಸಂತ್ರಸ್ತೆಯ ಪರವಾಗಿಯೇ ನಿಲ್ಲುತ್ತೇನೆ. ನೀನೊಬ್ಬ ಹೀರೋ ಆಗಿದ್ದೆ, ಯಾವಾಗಲೂ ಹಾಗೇ ಇರುತ್ತೀಯ. ನಿನ್ನ ಬೆಂಬಲಕ್ಕೆ ನಿಂತಂತೆ ನಟಿಸಿ, ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ಬದಲಾಯಿಸಿದ ಎಲ್ಲರಿಗೂ ಅರ್ಹವಾದ ಶಿಕ್ಷೆ ಸಿಗುತ್ತದೆಂಬುದನ್ನು ನಾನು ನಂಬುತ್ತೇನೆ." ಎಂದು ಬರೆದು ಪೋಸ್ಟ್ ಮಾಡಿದ್ದರು. ಆದರೆ, ತೀರ್ಪು ಹೊರಬಿದ್ದು, ದಿಲೀಪ್ ಖುಲಾಸೆಯಾದ ಬಳಿಕ "ವಾವ್ಹ್.. ಜಸ್ಟ್ ವಾವ್ಹ್" ಎಂದು ಗಾಯಕಿ ಚಿನ್ಮಯಿ ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣದ ವಿಚಾರಣೆಯು ಇಂದು ಕೇರಳದ ನ್ಯಾಯಾಲಯ ಮಹತ್ವದ ತೀರ್ಪಿ ನೀಡುವ ಮೂಲಕ ಅಂತ್ಯಗೊಳಿಸಿದೆ. ನಟ ದಿಲೀಪ್ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ. ಪ್ರಾಸಿಕ್ಯೂಟರ್ ಇವರ ಮೇಲೆ ಆರೋಪಗಳನ್ನು ಸಾಬೀತು ಮಾಡುವಲ್ಲಿ ಸಾಧ್ಯವಾಗಿಲ್ಲವೆಂದು ಹೇಳಿ ನ್ಯಾಯಾಲಯ ಅವರನ್ನು ಆರೋಪಮುಕ್ತಗೊಳಿಸಿದೆ. ಸದ್ಯ ಪ್ರಮುಖ ಆರೋಪಿಗಳಲ್ಲಿ ಆರು ಮಂದಿಯನ್ನು ಲೈಂಗಿಕ ದೌರ್ಜನ್ಯ, ಕ್ರಿಮಿನಲ್ ಪಿತೂರಿ, ಅಪಹರಣ ಮತ್ತು ಇತರ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ.


Click it and Unblock the Notifications











