ಬಾರ್‌ನಲ್ಲಿ ಐಟಿ ಉದ್ಯೋಗಿ ಅಪಹರಣ ಮಾಡಿದ್ರಾ 27 ವರ್ಷದ ನಟಿ? ಅಸಲಿಗೆ ಅಲ್ಲಾಗಿದ್ದೇನು?
ಸಿನಿಮಾ ಮಂದಿ ಸುಮ್ಮನೆ ಇರಲಾರದೆ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಈ ವಿವಾದಗಳೇ ಕೆಲವೊಮ್ಮೆ ಅವರ ವೃತ್ತಿ ಬದುಕಿಗೆ ಮುಳುವಾಗುತ್ತೆ. ತೆರೆಮೇಲೆ ಸದಾ ಒಳ್ಳೆಯವರಾಗಿ ಕಾಣುವ ಹೀರೋ-ಹೀರೋಯಿನ್ ತೆರೆ ಹಿಂದೆ ವಿವಾದದಲ್ಲಿ ಸಿಕ್ಕಿಕೊಂಡರೆ, ಜನರಿಗೆ ಅವರ ಮೇಲಿನ ಅಭಿಪ್ರಾಯ ದಿಢೀರನೇ ಬದಲಾಗಿಬಿಡುತ್ತೆ. ಇಂತಹ ಹಲವು ಉದಾಹರಣೆಗಳು ಕಣ್ಮುಂದೆ ಇವೆ.
ಕಳೆದೆರಡು ದಿನಗಳಿಂದ 27 ವರ್ಷದ ಈ ನಟಿ ಐಟಿ ಉದ್ಯೋಗಿಯನ್ನು ಅಪಹರಣ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಆ ನಟಿ ಮತ್ಯಾರೂ ಅಲ್ಲ. ಮಲಯಾಳಂ ಹಾಗೂ ತಮಿಳು ಸಿನಿಮಾಗಳ ಜನಪ್ರಿಯ ನಟಿ ಲಕ್ಷ್ಮಿ ಮೆನನ್. ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಕೊಂಡಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲೀಗ ಮಲಯಾಳಂ ನಟಿಯ ಹೆಸರು ಕೂಡ ಸೇರಿಕೊಂಡಿದೆ. ಲಕ್ಷ್ಮಿ ಮೆನನ್ ಈ ದೂರು ಸುಳ್ಳು ಎಂದು ಹೇಳುತ್ತಿದ್ದರೂ, ಈಕೆಯ ಮೇಲೆ ಕೇಸ್ ಅಂತೂ ದಾಖಲಾಗಿದೆ.

ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಕೇರಳ ಮೂಲದ ಲಕ್ಷ್ಮಿ ಮೆನನ್ 2011 ರಲ್ಲಿ ಮಲಯಾಳಂ ನಿರ್ದೇಶಕ ವಿನಯನ್ ನಿರ್ದೇಶಿಸಿದ 'ರಘುವಿಂಟೆ ಸ್ವಂತಂ ರಾಸ್ಯ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಭರತನಾಟ್ಯ ಕೂಡ ಕಲಿತಿರುವ ಲಕ್ಷ್ಮಿ ಮೆನನ್, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸುಂದರ ಪಾಂಡಿಯನ್', 'ಕುಂಕಿ', 'ಕುಟ್ಟಿ ಪುಲಿ', 'ಪಾಂಡಿಯನಾಡು', 'ವೇದಾಳಂ', 'ರೆಕ್ಕಾ', 'ಪುಲಿಕುಕ್ಕತ್ತಿ ಪಂಡಿ', 'ಚಂದ್ರಮುಖಿ 2', 'ಶಬ್ದಂ' ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಲಕ್ಷ್ಮಿ ಮೆನನ್ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಹೊಸ ಮುಖವೇನಲ್ಲ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವುದರಿಂದ ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಇವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲದೆ ತಮಿಳಿನ ಸ್ಟಾರ್ ನಟ ವಿಶಾಲ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ, ವಿಶಾಲ್ ಈ ವದಂತಿಗಳನ್ನು ತಳ್ಳಿ ಹಾಕಿದ್ದರು.

ದಕ್ಷಿಣ ಭಾರತದ ಈ ಜನಪ್ರಿಯ ನಟಿ ಲಕ್ಷ್ಮಿ ಮೆನನ್ ವಿರುದ್ಧ ಅಪಹರಣದ ಆರೋಪ ಕೇಳಿ ಬಂದಿದೆ. ಭಾನುವಾರ ತಡ ರಾತ್ರಿ ಸುಮಾರು 11 ಗಂಟೆಗೆ ಕೇರಳದ ಕೊಚ್ಚಿಯಲ್ಲಿರುವ ಬಾರ್‌ಗೆ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಲಕ್ಷ್ಮಿ ಮೆನನ್ ಹಾಗೂ ಅವರ ಸ್ನೇಹಿತರು ಕುಡಿದು ಕಂಟ್ರೋಲ್ ತಪ್ಪಿ ಕೂಗಾಡುವುದಕ್ಕೆ ಶುರು ಮಾಡಿದ್ದರು. ಈ ವೇಳೆ ಒಬ್ಬ ಐಟಿ ಉದ್ಯೋಗಿ ಅವರನ್ನು ತಡೆಯಲು ಯತ್ನಿಸಿದ್ದನು. ಆಗ ಲಕ್ಷ್ಮಿ ಮೆನನ್ ಹಾಗೂ ಅವರ ಸ್ನೇಹಿತರು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅಷ್ಟೇ ಅಲ್ಲದೆ ಆತನ ಕಾರನ್ನು ಅಡ್ಡಗಟ್ಟಿ ತಮ್ಮ ಕಾರಿನಲ್ಲಿ ಕರೆದೊಯ್ದು ಹಲ್ಲೆ ಮಾಡಿದ್ದಾರೆಂದು ಆ ವ್ಯಕ್ತಿ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದಾನೆ.
ಸಾಫ್ಟ್‌ವೇರ್ ಇಂಜಿನಿಯರ್‌ಗೆ ಹಿಂಸೆ, ಅಪಹರಣ ನೀಡಿದ ಆರೋಪದ ಮೇಲೆ ನಟಿ ಲಕ್ಷ್ಮಿ ಮೆನನ್ ಹಾಗೂ ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಮೆನನ್‌ರನ್ನು ಬಂಧಿಸುವುದಕ್ಕೂ ಮುನ್ನ ಬಂಧಿಸದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಆ ಸಂಬಂಧ ನ್ಯಾಯಾಲಯ ಕೂಡ ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಮೆನನ್ ವಾದವೇ ಬೇರೆಯಿದೆ. ದೂರು ನೀಡಿರುವ ವ್ಯಕ್ತಿ, ತನ್ನನ್ನು ಹಾಗೂ ಸ್ನೇಹಿತರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ. ಇದರಿಂದ ಬಾರ್‌ನಿಂದ ಹೊರಟು ಬಂದ ಮೇಲೂ ತಮ್ಮನ್ನು ಫಾಲೋ ಮಾಡಲು ಶುರು ಮಾಡಿದ್ದ. ಅಲ್ಲದೇ ಆಕೆಯ ಸ್ನೇಹಿತರ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆಗೂ ಮುಂದಾಗಿದ್ದ. ಆತ ನೀಡಿರುವ ದೂರು ಶುದ್ಧ ಸುಳ್ಳು ಎಂದು ಲಕ್ಷ್ಮಿ ಮೆನನ್ ಹೇಳಿಕೆ ನೀಡಿದ್ದಾಗಿ ವರದಿಯಾಗಿದೆ.


Click it and Unblock the Notifications











