ಮೊನ್ನೆ ಕಾಜೋಲ್.. ಇಂದು ನವ್ಯಾ ನಾಯರ್; 'ಗಜ' ನಾಯಕಿಯ ಹೆಗಲಿಗೆ ಕೈ ಹಾಕಲು ಯತ್ನ..ತಡೆದ ಕೂಲಿ ನಟ
ಸಿನಿಮಾ ನಟಿಯರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದು ಸಹಜ. ಆದರೆ, ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿಬಿಡುತ್ತಾರೆ. ನಾಯಕಿ ಮುಟ್ಟಿ ಮಾತಾಡಿಸುವುದರಿಂದ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕೆಟ್ಟದಾಗಿ ವರ್ತಿಸುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಪ್ತರೇ ಅನುಚಿತವಾಗಿ ನಡೆದುಕೊಂಡ ಉದಾಹರಣೆಗಳು ಕೂಡ ಇವೆ.
ಇತ್ತೀಚೆಗೆ ಬಾಲಿವುಡ್ ನಟಿ ಕಾಜೋಲ್ ಬಾಡಿಗಾರ್ಡ್ ಕೆಟ್ಟದಾಗಿ ವರ್ತಿಸಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ದುರ್ಗಾಪೂಜೆಗೆ ತೆರಳಿದ್ದ ಕಾಜೋಲ್ ಪೂಜೆ ಮುಗಿಸಿ ಹಿಂತಿರುಗುವಾಗ ಅವರ ಖಾಸಗಿ ಅಂಗಕ್ಕೆ ಕೈ ಹಾಕಿದ್ದ. ಇದು ಬಾಲಿವುಡ್ ನಟಿ ಕಾಜೋಲ್‌ರನ್ನು ಬೆಚ್ಚಿಬೀಳಿಸಿತ್ತು. ಈ ಘಟನೆ ನಡೆದು ಕೆಲವು ದಿನಗಳಲ್ಲೇ ಮತ್ತೊಂದು ಘಟನೆ ನಡೆದಿದೆ. ದರ್ಶನ್ ನಟಿಸಿದ 'ಗಜ' ಸಿನಿಮಾದ ನಾಯಕಿ ನವ್ಯಾ ನಾಯರ್ ಸಿನಿಮಾದ ಪ್ರಚಾರಕ್ಕೆ ಹೋಗಿದ್ದಾಗ ವ್ಯಕ್ತಿಯೊಬ್ಬ ಕೆಟ್ಟದಾಗಿ ವರ್ತಿಸಿದ್ದಾನೆ.

ಮಲಯಾಳಂ ನಟಿ ನವ್ಯಾ ನಾಯರ್ ಅನುಮತಿಯಿಲ್ಲದೆ ಅವರನ್ನು ಸ್ಪರ್ಶಿಸುವುದಕ್ಕೆ ವ್ಯಕ್ತಿಯೊಬ್ಬ ಮುಂದಾಗಿದ್ದ. ಇದನ್ನು ನೋಡುತ್ತಿದ್ದಂತೆ ಇತ್ತೀಚೆಗೆ 'ಕೂಲಿ' ಸಿನಿಮಾ ಮೂಲಕ ಗಮನ ಸೆಳೆದಿರುವ ನಟ ಶೌಬಿನ್ ಶಾಹಿರ್ ತಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಪರ-ವಿರೋಧ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಸಲಿಗೆ ಈ ವಿಡಿಯೋದಲ್ಲಿ ಏನಿದೆ? ಅಲ್ಲಿ ನಡೆದ ಘಟನೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಕೇರಳದ ಕೋಳಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಮಲಯಾಳಂ ಸಿನಿಮಾ 'ಪಾತಿರಾತ್ರಿ' ಇವೆಂಟ್ ನಡೆಯುತ್ತಿತ್ತು. ಈ ಸಿನಿಮಾದ ಪ್ರಚಾರದಲ್ಲಿ ನಾವ್ಯಾ ನಾಯರ್ ಸೇರಿದಂತೆ ಮಲಯಾಳಂ ಚಿತ್ರರಂಗ ಜನಪ್ರಿಯರ ನಟರು ಭಾಗವಹಿಸಿದ್ದರು. ಸಿನಿಮಾದ ಪ್ರಚಾರ ಮುಗಿಯುತ್ತಿದ್ದಂತೆ ಶೌಬಿನ್ ಶಾಹಿರ್ ಹಾಗೂ ಆನ್ ಅಗಸ್ಟೀನ್ ಹೊರಡುವುದಕ್ಕೆ ಮುಂದಾದರು. ಅಲ್ಲಿ ಮೊದಲೇ ಜನಸಂದಣಿ ಹೆಚ್ಚಿತ್ತು. ಹೀಗಾಗಿ ಸೆಲೆಬ್ರೆಟಿಗಳನ್ನು ರಕ್ಷಣೆಗೆಂದು ಬೌನ್ಸರ್‌ಗಳನ್ನು ನೇಮಿಸಲಾಗಿತ್ತು.
ನವ್ಯಾ ನಾಯರ್ ಸೇರಿದಂತೆ ಮಲಯಾಳಂ ಚಿತ್ರರಂಗದ ನಟರ ಹಿಂದೆ ಮುಂದೆ ಬೌನ್ಸರ್ಸ್ ಇದ್ದರು. ಆದರೂ ಗ್ಯಾಪ್‌ನಲ್ಲಿ ಒಬ್ಬ ವ್ಯಕ್ತಿ ನವ್ಯಾ ನಾಯರ್ ಅವರನ್ನು ಮುಟ್ಟುವುದಕ್ಕೆ ಯತ್ನಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ, ನವ್ಯಾ ನಾಯರ್ ಹೆಗಲ ಮೇಲೆ ಕೈ ಹಾಕುವುದಕ್ಕೆ ಯತ್ನಿಸಿದಂತೆ ತೋರುತ್ತದೆ. ತಕ್ಷಣವೇ ಮಲಯಾಳಂ ನಟ ಶೌಬಿನ್ ನವ್ಯಾ ಬಳಿಗೆ ಬಂದು ಆ ಕೈಯನ್ನು ತಡೆದಿದ್ದಾರೆ. ಈ ಘಟನೆಯನ್ನು ಮನಗಂಡ ನವ್ಯಾ ನಾಯರ್ ಆ ವ್ಯಕ್ತಿಯನ್ನು ಗುರಾಯಿಸಿ ಮುನ್ನೆಡೆದಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಘಟನೆಯನ್ನು ಕುರಿತು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. "ನವ್ಯಾ ನಾಯರ್ ದಿಟ್ಟಿಸಿ ನೋಡಿದರೆ ಸಾಲದು. ಸರಿಯಾಗಿ ತಿರುಗೇಟು ಕೊಡಬೇಕಿತ್ತು" ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು "ಶೌಬಿನ್ ತಕ್ಷಣವೇ ನವ್ಯಾ ಅವರನ್ನು ರಕ್ಷಣೆ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದು ಒಳ್ಳೆಯ ನಡೆ" ಎಂದು ಹೊಗಳಿದ್ದಾರೆ. ಮತ್ತೊಬ್ಬರು "ಯಾರೇ ಆಗಿರಲಿ ಅನುಮತಿಯಿಲ್ಲದೆ ತಮ್ಮ ದೇಹವನ್ನು ಸ್ಪರ್ಶಿಸಿದರೆ ಯಾವುದೇ ಮಹಿಳೆ ಆಗಿದ್ದರೂ ಕೋಪಗೊಳ್ಳುವುದು ಸಹಜ." ಎಂದು ಹೇಳಿದ್ದಾರೆ.
ಇನ್ನು ಕೆಲವರು ವ್ಯತಿರಿಕ್ತವಾದ ಹೇಳಿಕೆಯನ್ನು ಕೊಟ್ಟಿದ್ದಾರೆ. "ನವ್ಯಾ ಆಗಿದ್ದರಿಂದ ಕೇರಳದಲ್ಲಿ ಅಷ್ಟು ದೊಡ್ಡ ವಿವಾದವಾಗಲಿಲ್ಲ. ಯೂಟ್ಯೂಬ್ ಸೆಲೆಬ್ರಿಟಿ ಆಗಿದ್ದರೆ ಏನಾಗುತ್ತಿತ್ತೋ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ನವ್ಯಾ ನಾಯರ್ ಅವರನ್ನು ಸ್ಪರ್ಶಿಸಿದ್ದು ಒಂದು ಸಣ್ಣ ಮಗು ಅದರಲ್ಲಿ ದುರುದ್ದೇಶವಿರಲಿಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬರು " ನವ್ಯಾ ನಾಯರ್, ನಟಿ ಮಂಜು ವಾರಿಯರ್ ಆಗುವುದಕ್ಕೆ ಯತ್ನಿಸಿದ್ದಾರೆ. ಇವರು ಫೀಲ್ಡ್‌ನಲ್ಲೇ ಇಲ್ಲದ ನಟಿಯಲ್ಲವೇ?" ಕಮೆಂಟ್ ಮಾಡಿದ್ದಾರೆ.


Click it and Unblock the Notifications











