ನಾವಿನ್ನೂ 100 ಕೋಟಿನೂ ದಾಟಿಲ್ಲ.. ಮಲಯಾಳಂ ಚಿತ್ರರಂಗ 4 ತಿಂಗಳಲ್ಲಿ 600 ಕೋಟಿ ಲೂಟಿ ಮಾಡಿದ್ದೇಗೆ?
2024 ಶುರುವಾಗಿ ಇನ್ನೂ ಕೇವಲ ನಾಲ್ಕು ತಿಂಗಳು ಕಳೆದಿದೆ. ಅಷ್ಟರಲ್ಲೇ ದಕ್ಷಿಣ ಭಾರತದ ನಾಲ್ಕು ಚಿತ್ರರಂಗಳು ಸಾಕಷ್ಟು ಸಿನಿಮಾಗಳನ್ನು ರಿಲೀಸ್ ಮಾಡಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ಈ ನಾಲ್ಕು ತಿಂಗಳಲ್ಲಿ ಗೆದ್ದು ಬೀಗಿದ್ದು ಮಾತ್ರ ಮಲಯಾಳಂ ಚಿತ್ರರಂಗ.
2024ರ ಮೊದಲ ನಾಲ್ಕು ತಿಂಗಳಲ್ಲಿ ಮಲಯಾಳಂ ಚಿತ್ರರಂಗದ 8 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿವೆ. ನಿರೀಕ್ಷೆ ಮಾಡದ ಸಿನಿಮಾಗಳು 100 ಕೋಟಿ, 200 ಕೋಟಿ ರೂಪಾಯಿಯನ್ನು ಬಾಕ್ಸಾಫೀಸ್‌ನಲ್ಲಿ ಬಾಚಿಕೊಂಡಿವೆ. ಕೇವಲ ನಾಲ್ಕು ತಿಂಗಳಲ್ಲಿ ಈ 9 ಸಿನಿಮಾ 600 ಕೋಟಿ ರೂಪಾಯಿಗೂ ಅಧಿಕ ಬ್ಯುಸಿನೆಸ್ ಮಾಡಿವೆ. ಇದು ಮಲಯಾಳಂ ಸಿನಿಮಾ ಮಂದಿಗೆ ಅಚ್ಚರಿ ಮೂಡಿಸಿದೆ.

ಅದೇ 2023ರಲ್ಲಿ ಮಲಯಾಳಂ ಚಿತ್ರರಂಗದ ಪರಿಸ್ಥಿತಿ ಬೇರೆನೇ ಇತ್ತು. ಮೊದಲ ಆರು ತಿಂಗಳು ಮಲಯಾಳಂ ಸಿನಿಮಾಗಳು ಒಂದರ ಹಿಂದೊಂದು ಸೋಲು ಕಂಡಿದ್ದವು. ಕೆಲವು ತಂಡ ಪರಿಸ್ಥಿತಿಗೆ ಹೆದರಿ ನೇರವಾಗಿ ಓಟಿಟಿಗೆ ರಿಲೀಸ್ ಮಾಡಿದ್ದರು. 2023ರ ಒಂದೇ ವರ್ಷ ಮಲಯಾಳಂ ಚಿತ್ರರಂಗಕ್ಕೆ 700 ಕೋಟಿ ರೂಪಾಯಿಗೂ ಅಧಿಕ ನಷ್ಟ ಕಂಡಿತ್ತು. ಇಲ್ಲಿಗೆ ಮಾಲಿವುಡ್ ಕಥೆ ಮುಗೀತು ಅಂತ ಭವಿಷ್ಯ ನುಡಿದಿದ್ದರು.
2024 ದಕ್ಷಿಣ ಭಾರತ ಮೂರು ಚಿತ್ರರಂಗಕ್ಕೂ ಸಿಗದಷ್ಟು ಯಶಸ್ಸು ಮಲಯಾಳಂ ಚಿತ್ರರಂಗಕ್ಕೆ ಸಿಕ್ಕಿದೆ. 2023ರಲ್ಲಿ ಮಲಯಾಳಂ ಚಿತ್ರರಂಗಕ್ಕಿದ್ದ ಪರಿಸ್ಥಿತಿ ಕನ್ನಡ ಚಿತ್ರರಂಗಕ್ಕೆ ಬಂದಿದೆ. 2024ರ ಮೊದಲ ನಾಲ್ಕು ತಿಂಗಳ ಅಂತ್ಯದ ವೇಳೆ ಕನ್ನಡದಲ್ಲಿ ಸುಮಾರು 81 ಸಿನಿಮಾಗಳು ತೆರೆಕಂಡಿವೆ. ಅದರಲ್ಲಿ ಸಾಧಾರಣ ಕೆಲವು ಕಂಡಿದ್ದು ಎರಡೇ ಸಿನಿಮಾ. ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ'. ಇನ್ನೊಂದು ಯುವ ರಾಜ್‌ಕುಮಾರ್ ನಟನೆಯ 'ಯುವ'. ಈ ಎರಡೂ ಸಿನಿಮಾಗಳು ಬಿಟ್ಟರೆ, 'ಒಂದು ಸರಳ ಪ್ರೇಮಕಥೆ', 'ಬ್ಲಿಂಕ್' ಹಾಗೂ 'ಕೆರೆಬೇಟೆ' ಮೆಚ್ಚುಗೆ ಗಳಿಸಿತ್ತು. ಉಳಿದವೆಲ್ಲ ಮಖಾಡೆ ಮಲಗಿವೆ.

2023ರಲ್ಲಿ 700 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದ ಮಲಯಾಳಂ ಚಿತ್ರರಂಗ ಫೀನಿಕ್ಸ್‌ನಂತೆ ಎದ್ದು ಬಂದಿದೆ. ಒಂದು ಕಾಲದಲ್ಲಿ ಕಂಟೆಂಟ್ ಸಿನಿಮಾಗಳಲ್ಲೇ ಗೆದ್ದು ಬೀಗುತ್ತಿದ್ದ ಚಿತ್ರರಂಗ ಮತ್ತೆ ಎದ್ದು ನಿಂತಿದೆ. 8 ಸಿನಿಮಾಗಳು ಕೇರಳ ಬಾಕ್ಸಾಫೀಸ್ ಅಷ್ಟೇ ಅಲ್ಲ, ಅಕ್ಕ ಪಕ್ಕದ ರಾಜ್ಯಗಳಲ್ಲೂ ಒಳ್ಳೆ ದುಡಿಮೆ ಮಾಡಿದೆ.
ಈ ವರ್ಷ ಮಲಯಾಳಂ ಚಿತ್ರರಂಗ ಮೊದಲ ಸಿನಿಮಾದಿಂದಲೇ ಶುಭಾರಂಭ ಮಾಡಿತ್ತು. 'ಅಟ್ಟಂ' ಅನ್ನೋ ಸಿನಿಮಾ ಸಿನಿಪ್ರಿಯರಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟಾಕಿತ್ತು. ಬಾಕ್ಸಾಫೀಸ್‌ನಲ್ಲಿ ಹೆಚ್ಚು ಲಾಭ ಮಾಡದೇ ಹೋದರೂ, ಸಿನಿ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಜನವರಿ ತಿಂಗಳಲ್ಲಿ ಹಿರಿಯ ನಟ ಜಯರಾಂ ನಟಿಸಿದ 'ಅಬ್ರಾಹಂ ಓಜ್ಲರ್' ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಈ ಸ್ಮಾಲ್ ಬಜಟ್ ಸಿನಿಮಾ ಸುಮಾರು 42 ಕೋಟಿ ರೂಪಾಯಿ ಕಲೆ ಹಾಕಿತ್ತು.
ಇಲ್ಲಿಂದ ಮಲಯಾಳಂ ಚಿತ್ರರಂಗದ ಗೆಲುವಿನ ಪಯಣ ಶುರುವಾಯ್ತು. 'ಪ್ರೇಮಲು', 'ಬ್ರಮಯುಗಂ', 'ಮಂಜುಮ್ಮಲ್ ಬಾಯ್ಸ್', ,'ಅನ್ವೇಷಿಪ್ಪಿನ್ ಕಂಡೇತುಮ್', 'ಫ್ಯಾಮಿಲಿ' ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹಣ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ 'ಪ್ರೇಮಲು' ಮತ್ತು 'ಮಂಜುಮ್ಮಲ್ ಬಾಯ್ಸ್' ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಆ 8 ಸಿನಿಮಾಗಳ ಬಾಕ್ಸಾಫೀಸ್ ಲೆಕ್ಕ ಹೀಗೆ ನೋಡಿ.
ಮಲಯಾಳಂ 8 ಸಿನಿಮಾಗಳ ಬಾಕ್ಸಾಫೀಸ್ ರಿಪೋರ್ಟ್
ಮಂಜುಮ್ಮೆಲ್ ಬಾಯ್ಸ್ 236 ಕೋಟಿ ರೂ
ದಿ ಗೋಟ್ ಲೈಫ್ 144 ಕೋಟಿ ರೂ. (ಪ್ರದರ್ಶನವಾಗುತ್ತಿದೆ)
ಪ್ರೇಮಲು 136 ಕೋಟಿ ರೂ.
ಬ್ರಮಯುಗಂ 85 ಕೋಟಿ ರೂ.
ಆವೇಶಂ 60 ಕೋಟಿ ರೂ. (ಪ್ರದರ್ಶನವಾಗುತ್ತಿದೆ)
ಅಬ್ರಾಹಂ ಓಜ್ಲರ್ 42 ಕೋಟಿ ರೂ.
ಅನ್ವೇಶಿಪ್ಪಿನ್ ಕಂಡೇತುಮ್ 40 ಕೋಟಿ ರೂ.
ವರ್ಷಂಗಲ್‌ಕ್ಕು ಶೇಷಮ್ 40 ಕೋಟಿ ರೂ (ಪ್ರದರ್ಶನವಾಗುತ್ತಿದೆ)
ಮಲಯಾಳಂ ಚಿತ್ರರಂಗ ಮತ್ತೆ ಗೆದ್ದು ಬೀಗುತ್ತಿದೆ. ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಆದರೆ, 'ಕೆಜಿಎಫ್', 'ಕಾಂತಾರ'ದಂತಹ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೊಟ್ಟ ಕನ್ನಡ ಚಿತ್ರರಂಗ ಮಾತ್ರ ಸತತ ಒಂದೂವರೆ ವರ್ಷದಿಂದ ಬ್ಲಾಕ್ ಬಸ್ಟರ್ ಸಿನಿಮಾ ಕೊಡುವುದಕ್ಕೆ ಪರದಾಡುತ್ತಿದೆ. ದೊಡ್ಡ ಮಾರ್ಕೆಟ್ ಹುಟ್ಟಾಕಿದ್ದರೂ, ಅದನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತಿದೆ. ಸದ್ಯಕ್ಕಿದು ಆತಂಕದ ವಿಷಯ. ಈ ವರ್ಷವಾದರೂ ಕನ್ನಡ ಚಿತ್ರರಂಗ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ.


Click it and Unblock the Notifications