ಮಲಯಾಳಂನ ಖ್ಯಾತ ನಿರ್ದೇಶಕ ವಾಸುದೇವನ್ ನಾಯರ್ ನಿಧನ; ಮೋಹನ್‌ಲಾಲ್ ಸಂತಾಪ
ಮಲಯಾಳಂನ ಖ್ಯಾತ ಬರಹಗಾರ ಹಾಗೂ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್. ಇವರು ಬರೆದು ಕಾದಂಬರಿ, ಸಣ್ಣ ಕತೆಗಳು ಮಲಯಾಳಂನಲ್ಲಿ ತುಂಬಾನೇ ಜನಪ್ರಿಯವಾಗಿವೆ. ಮಲಯಾಳಂನ ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ. ಇತ್ತೀಚೆಗೆ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ (ಡಿಸೆಂಬರ್ 25) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಲೇಖಕ ಅಷ್ಟೇ ಅಲ್ಲದೆ ಮಲಯಾಳಂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ಸಿನಿಮಾಗಳಿಗೆ ಸ್ಕ್ರೀನ್ ಪ್ಲೇ ಹಾಗೂ ಸಾಹಿತ್ಯವನ್ನೂ ಬರೆದಿದ್ದಾರೆ. ಹೀಗಾಗಿ ಸಾಹಿತ್ಯ ಲೋಕ ಅಷ್ಟೇ ಅಲ್ಲ. ಎಂಟಿ ವಾಸುದೇವನ್ ಅವರನ್ನು ಕಳೆದುಕೊಂಡು ಸಿನಿಮಾ ಲೋಕ ಕೂಡ ಶೋಕಸಾಗರದಲ್ಲಿ ಮುಳುಗಿದೆ. ಇವರ ನಿಧನದ ಸುದ್ದಿಯನ್ನು ತಿಳಿದು ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಂತಿಮ ದರ್ಶನವನ್ನು ಪಡೆದಿದ್ದಾರೆ.

ಎಂಟಿ ವಾಸುದೇವನ್ ನಾಯರ್ ಹಾಗೂ ಮೋಹನ್‌ಲಾಲ್ ಇಬ್ಬರೂ ಸಿನಿಮಾ ಲೋಕದಲ್ಲಿ ಉತ್ತಮ ಒಡನಾಟವನ್ನು ಹೊಂದಿದ್ದರು. ಹೀಗಾಗಿ ಹಿರಿಯ ಸಾಹಿತಿ, ನಿರ್ದೇಶಕ ಎಂಟಿ ವಾಸುದೇವನ್ ನಿಧನದ ಸುದ್ದಿ ತಿಳಿದು ಅವರ ಮನೆಗೆ ಬೆಳ್ಳಂಬೆಳಗ್ಗೆನೇ ದೌಡಾಯಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಇವರೊಂದಿಗೆ ಸಿನಿಮಾ ಲೋಕದ ಗಣ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಂಟಿ ವಾಸುದೇವನ್ ಅವರ ಅಂತಿಮ ದರ್ಶನ ಪಡೆಯಲು ಮೋಹನ್‌ಲಾಲ್ ಬೆಳಗ್ಗೆ 5 ಗಂಟೆಗೆ ಅವರ ಮನೆಗೆ ಬಂದಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು "ಎಂಟಿ ಅವರೊಂದಿಗೆ ನನ್ನ ಸಂಬಂಧ ಗಾಢವಾಗಿತ್ತು. ಅವರು ನನಗೆ ವೃತ್ತಿ ಬದುಕಿನಲ್ಲೇ ಅತ್ಯಂತ ಅತ್ಯದ್ಭುತ ಪಾತ್ರಗಳನ್ನು ನೀಡಿದ್ದಾರೆ. ಅವರು ನಿರ್ದೇಶಿಸಿದ ಅಮೃತಂ ಗಮಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ನನ್ನ ಸಿನಿಮಾ ಒಲವುಂ ತೀರವುಂ ಸಿನಿಮಾದ ಸೆಟ್ಟಿಗೆ ಬಂದಿದ್ದರು. ನನ್ನ ಸಂಸ್ಕೃತದ ನಾಟಕಗಳನ್ನು ನೋಡುವುದಕ್ಕೆ ಮುಂಬೈಗೂ ಬಂದಿದ್ದರು." ಎಂದು ಪ್ರತಿಕ್ರಿಯಿಸಿದ್ದಾರೆ. ಇವರೊಂದಿಗೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಟಿಕೆ ರಾಜೀವ್ ಕುಮಾರ್ ಸೇರಿದಂತೆ ಹಲವರ ಉಪಸ್ಥಿತಿಯಿತ್ತು.
ಎಂಟಿ ವಾಸುದೇವನ್ ನಾಯರ್ 9 ಆಗಸ್ಟ್ 1933 ರಂದು ಜನಿಸಿದ್ದರು. ಬಾಲ್ಯದಿಂದಲೂ ಬರವಣಿಗೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದರೂ, ಸಾಹಿತ್ಯ ಕಡೆಗೆ ಅವರ ಒಲವು ಕಡಿಮೆ ಆಗಿರಲಿಲ್ಲ. ಸಣ್ಣ ಕತೆಗಳಿಂದ ಆರಂಭಿಸಿದವರು ಸಿನಿಮಾ ನಿರ್ದೇಶನದ ವರೆಗೂ ಸಾಗಿತ್ತು. ಇವರ ಸಾಹಿತ್ಯ ಕೃಷಿಗಾಗಿ 1995ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಬರೆದ ಕಾದಂಬರಿಗಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹ ಲಭಿಸಿದೆ.
ಇವರು ಸುಮಾರು ಏಳು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 54 ಸಿನಿಮಾಗಳಿಗೆ ಸ್ಕ್ರೀನ್ ಪ್ಲೇ ರಚಿಸಿದ್ದಾರೆ. 'ಊರು ವಡಕನ್ ವೀರ ಕಥಾ', 'ಕಡವು', 'ಸದಯಂ' ಹಾಗೂ 'ಪರಿಣಯಂ' ಎಂಬ ನಾಲ್ಕು ಸಿನಿಮಾಗಳಿಗೆ ಅತ್ಯುತ್ತಮ ಚಿತ್ರಕಥೆ ರಚಿಸಿದ್ದಕ್ಕಾಗಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಹಾಗೇ 2005 ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.
ಕೆಲವು ದಿನಗಳ ಹಿಂದೆ ಎಂಟಿ ವಾಸುದೇವನ್ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಡಿಸೆಂಬರ್ 25) ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಕಮಲ್ ಹಾಸನ್ ಸಂತಾಪ ಸೂಚಿಸಿದ್ದು, "ನಾವು ಒಬ್ಬ ಶ್ರೇಷ್ಠ ಬರಹಗಾರನನ್ನು ಕಳೆದುಕೊಂಡಿದ್ದೇವೆ. ಅವರು ಮಲಯಾಳಂ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ" ಎಂದು ಕಮಲ್ ಹಾಸನ್ ಹೇಳಿದ್ದಾರೆ.


Click it and Unblock the Notifications











