ವಕೀಲನಾಗಿದ್ದ ಮಮ್ಮುಟ್ಟಿಗೆ ಅದೊಂದು ವಿಚ್ಚೇದನ ಕೇಸ್ ಮದುವೆ ಬಗ್ಗೆ ಇದ್ದ ಅಭಿಪ್ರಾಯವನ್ನೇ ಬದಲಿಸಿದ್ದೇಗೆ?
ಮಲಯಾಳಂ ಚಿತ್ರರಂಗದ ದಿಗ್ಗಜ ಮಮ್ಮುಟ್ಟಿ ಕೆಲವು ತಿಂಗಳು ಸಿನಿಮಾಗಳಿಂದ ದೂರ ಉಳಿದಿದ್ದರು. ಅನಾರೋಗ್ಯ ಕಾರಣದಿಂದ ಮಮ್ಮುಟ್ಟಿ ಕ್ಯಾಮರಾ ಕಣ್ಣುಗಳಿಗೆ ಕಾಣಿಸಿಕೊಂಡಿರಲಿಲ್ಲ ಎಂದು ವರದಿಯಾಗಿದ್ದವು. ಈಗ ಮಮ್ಮುಟ್ಟಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಲಯಾಳಂ ಜೊತೆ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲೂ ನಟಿಸಿರುವುದರಿಂದ ದಕ್ಷಿಣ ಭಾರತದಲ್ಲಿ ಈ ನಟನಿಗೆ ವಿಶೇಷವಾದ ಗೌರವವಿದೆ.
ಸುಮಾರು ಐದು ದಶಕಗಳ ಕಾಲ ಮಮ್ಮುಟ್ಟಿ ಸಿನಿಮಾ ಸೇವೆ ಮಾಡಿದ್ದಾರೆ. 1971ರಲ್ಲಿ 'ಅನುಭವಂಗಲ್ ಪಾಲಿಚಕಲ್' ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸಿನಿಮಾರಂಗ ಮಮ್ಮುಟ್ಟಿಯನ್ನು ಕೈ ಬಿಡಲಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಆಗಿದ್ದರೂ, ಅವರು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ಇಟ್ಟಿದ್ದಾರೆ.

ಮಮ್ಮುಟ್ಟಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ಅವರು ಸುಲ್ಫತ್ ಎಂಬುವವರನ್ನು ವಿವಾಹವಾದರು. 1979ರಲ್ಲಿ ಮಮ್ಮುಟ್ಟಿ ಹಾಗೂ ಸುಲ್ಪತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಅವರಿಗೆ ಸುರಮಿ ಹಾಗೂ ದುಲ್ಕರ್ ಸಲ್ಮಾನ್ ಎಂಬ ಇಬ್ಬರು ಮಕ್ಕಳು ಇದ್ದಾರೆ. ಇವರ ವೃತ್ತಿ ಬದುಕು ಎಷ್ಟು ಅದ್ಭುತವಾಗಿದೆಯೋ? ಅಷ್ಟೇ ವೈವಾಹಿಕ ಜೀವನ ಕೂಡ ಅದ್ಭುತವಾಗಿದೆ. ಇದಕ್ಕೆ ಕಾರಣ ಒಂದು ಘಟನೆ ಅಂದರೆ ನೀವು ನಂಬುತ್ತೀರಾ?
ಮಮ್ಮುಟ್ಟಿ ಸಿನಿಮಾರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಅವರ ಜೀವನದಲ್ಲಿ ನಡೆದ ಒಂದು ಘಟನೆ ಮದುವೆ ಬಗೆಗಿನ ಅಭಿಪ್ರಾಯವನ್ನು ಶಾಶ್ವತವಾಗಿ ಬದಲಿಸಿತ್ತು. ಮಮ್ಮುಟ್ಟಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು ಅನ್ನೋದು ಬಹುತೇಕ ಮಂದಿಗೆ ತಿಳಿದಿಲ್ಲ. ಮಮ್ಮುಟ್ಟಿ ಎರ್ನಾಕುಳಂನ ಮಹಾರಾಜಾ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ, ಅಲ್ಲೇ ಎರ್ನಾಕುಳಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ LLB ಮಾಡಿದರು. ಬಳಿಕ ಎರಡು ವರ್ಷ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದರು.
ಮಮ್ಮುಟ್ಟಿ ವಕೀಲರಾಗಿದ್ದಾಗ ಅವರಿಗೆ ಒಂದು ವಿಚ್ಚೇದನದ ಪ್ರಕರಣ ಬಂದಿತ್ತು. ಇದೇ ಪ್ರಕರಣ ಮದುವೆ ಬಗೆಗಿನ ಅವರ ಅಭಿಪ್ರಾಯವನ್ನೇ ಬದಲಾಯಿಸಿತು. ಮನೋರಮಾ ನಡೆಸಿದ 'ನೆರೆ ಚೋವೆ' ಎಂಬ ಕಾರ್ಯಕ್ರಮದಲ್ಲಿ ಈ ಡಿವೋರ್ಸ್ ಕೇಸ್ ಮದುವೆ ಬಗೆಗಿನ ಅವರ ದೃಷ್ಟಿಕೋನವನ್ನು ಹೇಗೆ ಬದಲಿಸಿತು ಅನ್ನೋದನ್ನು ವಿವರಿಸಿದ್ದಾರೆ. ಈ ವಿಚ್ಛೇದನ ಪ್ರಕರಣವನ್ನು ಮಮ್ಮುಟ್ಟಿ ಇಂದಿಗೂ ನೆನಪಿಟ್ಟುಕೊಂಡಿರುವುದಕ್ಕೆ ಕಾರಣವಿದೆ. ಸದ್ಯ ಆ ಪ್ರಕರಣ ಏನು ಅಂತ ನೋಡುವುದಾರೇ,

ಮಮ್ಮುಟ್ಟಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುವಾಗ ಒಂದು ಇಳಿ ವಯಸ್ಸಿನ ದಂಪತಿಯೊಂದರ ವಿಚ್ಚೇದನ ಪ್ರಕರಣ ಸಿಕ್ಕಿತ್ತು. ಅವರಿಬ್ಬರು ಬೇರೆಯಾಗಿದ್ದರು. ಆದರೆ, ಇಬ್ಬರ ವಿಚಾರಣೆ ನಡೆಯುತ್ತಿತ್ತು. ಒಮ್ಮೆ ಕೋರ್ಟ್ ಅಂಗಳದಲ್ಲಿ ವಿಚಾರಣೆ ನಡೆಯುವಾಗ ಮಹಿಳೆ ಪ್ರಜ್ಞೆತಪ್ಪಿಬಿದ್ದರು. ತಕ್ಷಣವೇ ಪತಿ ಆಕೆಯ ಒಳಿ ಓಡಿ ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಪ್ರಜ್ಞೆ ತಪ್ಪಿ ಬಿದ್ದ ಪತ್ನಿಗೆ 75 ವರ್ಷ, ಹಾಗೇ ಪತಿಗೆ 80 ವರ್ಷ ವಯಸ್ಸಾಗಿತ್ತು. ಇಬ್ಬರೂ ಹಲವು ವರ್ಷಗಳ ಕಾಲ ಒಟ್ಟಿಗೆ ಬದುಕಿದ್ದರು. ಆದರೆ, ಕೌಟುಂಬಿಕ ಕಾರಣಗಳಿಗೆ ಬೇರೆಯಾಗುವುದಕ್ಕೆ ನಿರ್ಧರಿಸಿದ್ದರು. ವಿಚಾರಣೆ ಸಮಯದಲ್ಲಿ ಅವರ ನಿಜವಾದ ಕಾಳಜಿ ನೋಡಿ, ಮಮ್ಮುಟ್ಟಿಗೆ ನಿಜವಾದ ಪ್ರೀತಿಯ ಮೇಲೆ ನಂಬಿಕೆ ಬಂದಿತ್ತು.
ಈ ಪ್ರಕರಣದ ಬಳಿಕ ಮಮ್ಮುಟ್ಟಿ ಒಂದು ಪ್ರತಿಜ್ಞೆ ಮಾಡಿದ್ದರು. ಆ ಅಜ್ಜ-ಅಜ್ಜಿ ನಡುವಿನ ಸಮಸ್ಯೆ ಕುಟುಂಬಕ್ಕೆ ಸಂಬಂಧಿಸಿತ್ತು. ಇಬ್ಬರೂ ನೋವಿನಿಂದಲೇ ಬೇರೆಯಾಗಿದ್ದರು. ಇಬ್ಬರೂ ದೂರವಿದ್ದರೂ, ಒಬ್ಬರ ಮೇಲೊಬ್ಬರು ಕಾಳಜಿ,ಪ್ರೀತಿ ಇಟ್ಟುಕೊಂಡಿದ್ದರು. ಈ ಕೇಸ್ ನಡೆಯುವಾಗ ಮಮ್ಮುಟ್ಟಿ ಇನ್ನೂ ಮದುವೆ ಆಗಿರಲಿಲ್ಲ. ಅಂದೇ ಅವರು ಒಂದು ನಿರ್ಧಾರಕ್ಕೆ ಬಂದಿದ್ದರು. ನಾನು ಮದುವೆಯಾದರೆ, ಆ ದಂಪತಿಗಳು ಒಬ್ಬರಿಗೊಬ್ಬರು ಪ್ರೀತಿಸಿದಂತೆ ನಾನು ನನ್ನ ಹೆಂಡ್ತಿಯನ್ನು ಪ್ರೀತಿಸುತ್ತೇನೆ ಎಂದು ಅಂದೇ ಪ್ರತಿಜ್ಞೆ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











