10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳನ್ನು ಘೋಷಿಸಿದ್ದಾಯ್ತು.. ಈಗ ಮೋಹನ್‌ಲಾಲ್ ಕೇಸ್ ಕ್ಲೋಸ್ ಆಗುತ್ತಾ?
ಮಲಯಾಳಂ ನಟ ಮೋಹನ್‌ಲಾಲ್ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಕೇರಳದ ಅರಣ್ಯ ಇಲಾಖೆ ತನ್ನ ವನ್ಯಜೀವಿ ವಸ್ತುಗಳನ್ನು ಸ್ವಯಂಪ್ರೇರಿತರಾಗಿ ಘೋಷಿಸಲು ಕ್ಷಮಾದಾನ ಯೋಜನೆಯನ್ನು ಘೋಷಿಸಿತ್ತು. ಇದರ ಅಡಿಯಲ್ಲಿ ಮೋಹನ್‌ಲಾಲ್ ತಮ್ಮ ಬಳಿ ಇರುವ ಆನೆಯ ದಂತ ಹಾಗೂ ಅದರಿಂದ ಸೃಷ್ಟಿಸಿದ ಮೂರ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಮೋಹನ್‌ಲಾಲ್ 2011ರಿಂದ ಆನೆ ದಂತ ಹೊಂದಿದ್ದ ಆರೋಪದ ಮೇಲೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿದ್ದರೂ, ಅರಣ್ಯ ಇಲಾಖೆಗೆ ತಮ್ಮ ಬಳಿಕ 10 ಆನೆ ದಂತ ಹಾಗೂ 13 ದಂತದ ಮೂರ್ತಿಗಳು ಇವೆ ಎಂದು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಮಲಯಾತ್ತೂರು ವಿಭಾಗೀಯ ಅರಣ್ಯ ಕಚೇರಿಯ ಅಧಿಕಾರಿಗಳು ಈ ವಿಷಯವನ್ನು ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ.

ಹೆಚ್ಚುವರಿ ಆನೆ ದಂತಗಳು
2011ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಟ ಮೋಹನ್‌ಲಾಲ್ ಮನೆಯ ಮುಂದೆ ರೇಡ್ ಮಾಡಿದ್ದರು. ಈ ವೇಳೆ ಅವರ ಮನೆಯಲ್ಲಿ 4 ಆನೆ ದಂತಗಳು ಸಿಕ್ಕಿದ್ದವು. ಆ ವೇಳೆ ಕೇರಳದ ಅರಣ್ಯ ಇಲಾಖೆ ಪರವಾನಗಿ ಇಲ್ಲದೆ ನಾಲ್ಕು ಆನೆ ದಂತಗಳನ್ನು ಹೊಂದಿದ್ದಕ್ಕಾಗಿ ಮೋಹನ್‌ಲಾಲ್ ವಿರುದ್ಧ ಕೇಸ್ ದಾಖಲಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಈ ನಾಲ್ಕು ದಂತಗಳ ವಿರುದ್ಧದ ಕೇಸ್ ನಡೆಯುತ್ತಲೇ ಇದೆ.
ಮೋಹನ್‌ಲಾಲ್ ಬಳಿ ಆನೆ ದಂತಗಳು ಬಂದಿದ್ದೇಗೆ?
ಈಗಾಗಲೇ ನಾಲ್ಕು ಆನೆ ದಂತಗಳನ್ನು ಹೊಂದಿದ್ದಕ್ಕಾಗಿ ಕೇಸ್ ದಾಖಲಾಗಿದೆ. ಇದರ ಬೆನ್ನಲ್ಲೇ ಆ ನಾಲ್ಕಕ್ಕೆ ಇನ್ನೂ ಆರು ದಂತಗಳನ್ನು ಸೇರಿಸಿ ಒಟ್ಟು 10 ಎಂದು ಲೆಕ್ಕ ಕೊಟ್ಟಿದ್ದಾರೆ. 13 ದಂತದ ಮೂರ್ತಿಗಳಲ್ಲಿ ಶ್ರೀಕೃಷ್ಣ, ಶ್ರೀರಾಮ ಮತ್ತು ತಿರುಪತಿ ಬಾಲಾಜಿಯ ವಿಗ್ರಹಗಳು ಸೇರಿವೆ. ಇವುಗಳ ಒಟ್ಟು ತೂಕ 46 ಕೆ.ಜಿ ಇದೆ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಆನೆ ದಂತಗಳು ಹಾಗೂ ಮೂರ್ತಿಗಳು ಉಡುಗೊರೆಯಾಗಿ ಬಂದಿರೋದು ಎಂದು ಅರಣ್ಯ ಇಲಾಖೆಗೆ ಮೋಹನ್‌ಲಾಲ್ ಮಾಹಿತಿ ನೀಡಿದ್ದಾರೆ.
ಕೇಸ್ ಕ್ಲೋಸ್ ಆಗುತ್ತಾ?
2011ರಲ್ಲಿ ದಾಖಲಾಗಿದ್ದ ಆನೆ ದಂತದ ಕೇಸ್ ಇನ್ನೂ ಮೋಹನ್‌ಲಾಲ್ ಎದುರಿಸುತ್ತಿದ್ದಾರೆ. ಈಗ ಅರಣ್ಯ ಇಲಾಖೆಯ 'ಕ್ಷಮಾದಾನ ಯೋಜನೆ' ಮತ್ತೆ ಹೆಚ್ಚುವರಿಯಾಗಿ ಆನೆ ದಂತ ಹಾಗೂ ಮೂರ್ತಿಗಳನ್ನು ಘೋಷನೆ ಮಾಡಿಕೊಂಡಿರುವುದರಿಂದ ಕೇಸ್ ಕ್ಲೋಸ್ ಆಗುತ್ತಾ ಅನ್ನೋ ಗೊಂದಲ ಎದ್ದಿತ್ತು. ಆದರೆ, ಮೋಹನ್‌ಲಾಲ್ ಘೋಷಣೆ ಮಾಡಿಕೊಂಡಿರುವ ದಂತಗಳು ಹಾಗೂ ಮೂರ್ತಿಗಳ ಡಿಎನ್‌ಎ ಟೆಸ್ಟ್‌ಗೆ ಕಳಿಸುವುದಾಗಿ ತಿಳಿಸಿದಿದ್ದಾರೆ. ಅಲ್ಲದೇ ಈಗಾಗಲೇ ಇರುವ ಪ್ರಕರಣ ರದ್ದಾಗುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.

ಮನವಿ ತಿರಸ್ಕರಿಸಿದ ನ್ಯಾಯಾಲಯ
ನಟ ಮೋಹನ್‌ಲಾಲ್ ಪರವಾನಗಿ ಇಲ್ಲದೇ ನಾಲ್ಕು ದಂತಗಳನ್ನು ಹೊಂದಿರುವುದಕ್ಕಾಗಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಿಸಿದ ಬಳಿಕ ಕೇರಳ ಸರ್ಕಾರ ಈ ಪ್ರಕರಣವನ್ನು ಹಿಂಪಡೆಯುವುದಕ್ಕೆ ಮುಂದಾಗಿತ್ತು. ಆದರೆ, ನ್ಯಾಯಾಲಯವು ಆ ವೇಳೆ ಸರ್ಕಾರದ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಆದರೆ, ಹೈಕೋರ್ಟ್ ಕೂಡ ಹಿಂದಿನ ಆದೇಶವನ್ನು ಎತ್ತಿ ಹಿಡಿದಿತ್ತು. ಈ ಗ್ಯಾಪ್‌ನಲ್ಲಿ ಮೋಹನ್‌ಲಾಲ್‌ಗೆ ಆನೆ ದಂತಗಳನ್ನು ಇಟ್ಟುಕೊಳ್ಳುವುದಕ್ಕೆ ಅನುಮತಿಯನ್ನು ನೀಡಿತ್ತು. ಆದರೆ, ಇತ್ತೀಚೆಗೆ ಆನೆ ದಂತದ ಮಾಲೀಕತ್ವವನ್ನು ಮೋಹನ್‌ಲಾಲ್ ಅವರಿಂದ ರದ್ದುಗೊಳಿಸಿತ್ತು. ಸದ್ಯ ಮೋಹನ್‌ಲಾಲ್‌ಗೆ ಹಳೆಯ ಕೇಸ್ ಮುಂದುವರೆಯುತ್ತೆ. ಇತ್ತೀಚೆಗೆ ಘೋಷಣೆ ಮಾಡಿದ ವಸ್ತುಗಳ ವಿರುದ್ಧ ಪ್ರಕರಣ ದಾಖಲಾಗದೇ ಹೋಗಬಹುದು. ಸದ್ಯ ಆನೆ ದಂತ ಪ್ರಕರಣ ಮೋಹನ್‌ಲಾಲ್‌ಗೆ ಮುಂದಿನ ದಿನಗಳಲ್ಲಿ ಕಂಟಕ ಆದರೂ ಆಗಬಹುದು.


Click it and Unblock the Notifications
