"ಮೋಹನ್‌ಲಾಲ್ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ"; ಶಮ್ಮಿ ತಿಲಕನ್ ಆಕ್ರೋಶ
ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ನಟಿಯರು ಒಬ್ಬೊಬ್ಬರೇ ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಜನಪ್ರಿಯರ ನಟರ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ಈ ವರ್ಷ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಚಿತ್ರರಂಗಕ್ಕೆ ತೀವ್ರ ಮುಜುಗರ ಆಗಿದೆ.
ಹೇಮ ಕಮಿಟಿ ವರದಿಯಲ್ಲಿ ಕೆಲವು ಗಂಭೀರ ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಇಲ್ಲಿ ಕೆಲಸ ಮಾಡುವ ಮಹಿಳೆಯರು ಸುಮಾರು 17 ಪ್ರಕಾರದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ಹೇಳಲಾಗಿದೆ. ಮಲಯಾಳಂ ಜನಪ್ರಿಯರ ನಟರ ವಿರುದ್ಧ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲೇ ಸೂಪರ್‌ಸ್ಟಾರ್ ಮೋಹನ್ ವಿರುದ್ಧ ಮಲಯಾಳಂ ನಟ ಶಮ್ಮಿ ತಿಲಕನ್ ತಿರುಗಿಬಿದ್ದಿದ್ದಾರೆ.

ಸೂಪರ್‌ಸ್ಟಾರ್ ಮೋಹನ್‌ಲಾಲ್ ಮಲಯಾಳಂ ಸಿನಿಮಾ ಕಲಾವಿದರ ಸಂಘದ (AMMA) ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲಿ ಎದ್ದಿರುವ ಕಾಸ್ಟಿಂಗ್ ಕೌಚ್ ಪ್ರಕರಣದ ಬಗ್ಗೆ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈ ಕಾರಣಕ್ಕೆ ಮತ್ತೊಬ್ಬ ಮಲಯಾಳಂ ನಟ ಶಮ್ಮಿ ತಿಲಕನ್ ಸೂಪರ್‌ಸ್ಟಾರ್ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತಾಡುವಾಗ ಮೋಹನ್‌ಲಾಲ್ ವಿರುದ್ಧ ಶಮ್ಮಿ ತಿಲಕನ್ ತಿರುಗಿಬಿದ್ದಿದ್ದಾರೆ. " ಮಲಯಾಳಂ ಕಲಾವಿದರ ಸಂಘದ ಅಧ್ಯಕ್ಷ ಮೋಹನ್‌ಲಾಲ್ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ" ಎಂದು ಹೇಳಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮೀಟೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೂಪರ್‌ಸ್ಟಾರ್ ಇನ್ನೂ ಮುನ್ನೆಲೆಗೆ ಬಂದು ಪ್ರತಿಕ್ರಿಯೆ ನೀಡಿಲ್ಲ.
ಮಲಯಾಳಂ ಮೀಟೂ ಪ್ರಕರಣದ ಬಗ್ಗೆ ಶಮ್ಮಿ ತಿಲಕನ್ ಖಡಕ್ ಕೊಟ್ಟ ಹೇಳಿಕೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. "ಉಪ್ಪಿ ತಿಂದ ಮೇಲೆ ನೀರು ಕುಡಿಯಬೇಕು" ಅಂತ ಹೇಳುವ ಮೂಲಕ ಶಮ್ಮಿ ತಿಲಕನ್ ಮಲಯಾಳಂ ಚಿತ್ರರಂಗದಲ್ಲಿ ಇರುವ ಸಮಸ್ಯೆಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಯಾರು ಏನೇನು ಮಾಡಿದ್ದಾರೋ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತೆ ಎಂದೂ ಹೇಳಿದ್ದಾರೆ.

ಇತ್ತೀಚೆಗೆ ಮಲಯಾಳಂ ಕಲಾವಿದರ ಸಂಘದ ಕಾರ್ಯದರ್ಶಿ ಸಿದ್ಧಿಕಿ ಮೇಲೂ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅಮ್ಮಾ (AMMA)ದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಈ ಬಗ್ಗೆನೂ ಶಮ್ಮಿ ತಿಲಕನ್ ಪ್ರತಿಕ್ರಿಯಿಸಿದ್ದಾರೆ. " ಸಿದ್ಧಿಕಿ ರಾಜೀನಾಮೆ ನೀಡಿದ್ದು ನನಗೆ ನ್ಯಾಯ ಅಂತ ಅನಿಸುವುದಿಲ್ಲ. ಆದರೆ, ನನ್ನ ತಂದೆಗೆ ಹಾಗೆ ಅನ್ನಿಸಬಹುದು" ಎಂದು ಪ್ರತಿಕ್ರಿಯಿಸಿದ್ದಾರೆ.
ಶಮ್ಮಿ ತಿಲಕನ್ ಮಲಯಾಳಂ ಚಿತ್ರರಂಗದ ದಿಗ್ಗಜ ದಿವಂಗತ ತಿಲಕನ್ ಅವರ ಪುತ್ರ. ಮಲಯಾಳಂ ಚಿತ್ರರಂಗದಲ್ಲಿ ಇವರೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸರ್ಗವಸಂತಂ', 'ಸ್ಟ್ರೀಟ್', 'ಭೂಪತಿ', 'ಮಾಣಿಕ್ಯಕೂಡರಂ' ಇತ್ತೀಚೆಗೆ ಬಂದ 'ಕಿಂಗ್ ಆಫ್ ಕೋತಾ'ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟನಷ್ಟೇ ಅಲ್ಲ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು.


Click it and Unblock the Notifications










