ಮೋಹನ್‌ಲಾಲ್ 'ವೃಷಭ' ಸಿನಿಮಾದಲ್ಲಿ ರಾಗಿಣಿ: ಮೈಸೂರಿನಲ್ಲಿ ಶೂಟಿಂಗ್ ಶುರು!
ಸ್ಯಾಂಡಲ್‌ವುಡ್ ನಟಿ ರಾಗಿಣಿ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿಯೇ ಆರಂಭ ಆಗಿದೆ. ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ರಾಗಿಣಿ ಈ ಹಿಂದೆಯೇ ಹೇಳಿಕೊಂಡಿದ್ದರು. ಈಗ ಸೆಟ್ಟಿನಲ್ಲಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈಗಾಗಲೇ ರಾಗಿಣಿ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಾಗಿ ಇದು ಮೊದಲ ಸಿನಿಮಾವೇನು ಅಲ್ಲ. ಆದರೆ, ಮೋಹನ್‌ಲಾಲ್ ಅಂತಹ ಸೂಪರ್‌ಸ್ಟಾರ್ ಜೊತೆನೂ ಈಗಾಗಲೇ ನಟಿಸಿದ್ದಾರೆ. ಅಂದ್ಹಾಗೆ ಮತ್ತೆ ನಟಿಸುತ್ತಿರುವ ಈ ಸಿನಿಮಾದ ಹೆಸರು 'ವೃಷಭ'.

'ವೃಷಭ' ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್, ಉಪೇಂದ್ರ ಬಳಿಕ ಮತ್ತೊಬ್ಬ ಸೂಪರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ನಂದಕಿಶೋರ್ ವೃತ್ತಿ ಬದುಕಿನಲ್ಲೇ ಬಿಗ್ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ.
ಮೋಹನ್‌ಲಾಲ್ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಕೂಡ ಕೈ ಜೋಡಿಸಿದ್ದಾರೆ. ಸಿನಿಮಾ ಕಥೆ ಇಷ್ಟಪಟ್ಟಿರೋ ನಿರ್ಮಾಪಕಿ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ದೊಡ್ಡ ಸ್ಟಾರ್‌ಕಾಸ್ಟ್ ಇರುವ ಈ ಸಿನಿಮಾದ ಬಜೆಟ್ 200 ಕೋಟಿ ರೂಪಾಯಿಯನ್ನು ಮೀರಲಿದೆ ಎಂದು ಹೇಳಲಾಗುತ್ತಿದೆ.

ಮೋಹನ್‌ಲಾಲ್ ಹಾಗೂ ರಾಗಿಣಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ 'ವೃಷಭ' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಕಳೆದ ಭಾನುವಾರದಿಂದ ಮೈಸೂರಿನಲ್ಲಿ ಮೋಹನ್‌ಲಾಲ್, ರಾಗಿಣಿ ವೃಷಭ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಂದ್ಹಾಗೆ, ರಾಗಿಣಿ ಈಗಾಗಲೇ ಮೋಹನ್‌ಲಾಲ್ ನಟಿಸಿದ 'ಕಾಂದಹಾರ್' ಸಿನಿಮಾದಲ್ಲಿ ನಟಸಿದ್ದರು.
ನಟಿ ರಾಗಿಣಿ ಸೆಕೆಂಡ್ ಇನ್ನಿಂಗ್ಸ್ ಅದ್ಧೂರಿಯಾಗಿ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಈಗಾಗಲೇ 8ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಗಿಣಿ ನಟಿಸುತ್ತಿದ್ದು, ಕನ್ನಡ, ಮಲಯಾಳಂ ಸೇರಿದಂತೆ ಬಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
'ವೃಷಭ' ಸಿನಿಮಾದಲ್ಲಿ ನಟ ಮೋಹನ್ ಲಾಲ್ ಜೊತೆ ದೊಡ್ಡ ತಾರಾಬಳಗವೇ ಇದೆ. ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಮೋಹನ್‌ಲಾಲ್ ಜೊತೆ ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಮೇಕಿಂಗ್ ಸ್ಟಿಲ್‌ಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











