ಭಾರತದಲ್ಲಷ್ಟೇ ಅಲ್ಲ 'ದೃಶ್ಯಂ' ಹವಾ: ಹಾಲಿವುಡ್‌ಗೂ ಮೋಹನ್‌ಲಾಲ್ ಸಿನಿಮಾ ರಿಮೇಕ್
'ದೃಶ್ಯಂ' ಇಡೀ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ಸಿನಿಮಾ. ಮಲಯಾಳಂ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆಗಿದ್ದರೂ, ದಕ್ಷಿಣದ ಎಲ್ಲಾ ಪ್ರಮುಖ ಭಾಷೆಗಳು ಹಾಗೂ ಹಿಂದಿಗೆ ರಿಮೇಕ್ ಆಗಿತ್ತು.
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ 'ದೃಶ್ಯಂ' ಸಿನಿಮಾದಲ್ಲಿ ಜಾರ್ಜ್ ಕುಟ್ಟಿಯಾಗಿ ಸಿನಿಪ್ರಿಯರ ಮನಗೆದ್ದಿದ್ದರು. 'ದೃಶ್ಯಂ' ಹಾಗೂ 'ದೃಶ್ಯಂ 2' ಎರಡೂ ಚಾಪ್ಟರ್‌ಗಳೂ ಹಲವು ಭಾಷೆಗಳಿಗೆ ರಿಮೇಕ್ ಆಗಿದೆ. ಈಗ ವಿದೇಶಿ ಭಾಷೆಗಳಿಗೂ ರಿಮೇಕ್ ಆಗುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
'ದೃಶ್ಯಂ 2' ಹಿಂದಿ ಚಾಪ್ಟರ್‌ನಲ್ಲಿ ಅಜಯ್ ದೇವಗನ್, ಶ್ರಿಯಾ ಸರಣ್, ಟಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ಕೇವಲ ಭಾರತದಲ್ಲಿ ಸುಮಾರು ₹250 ಕೋಟಿ ಕಲೆಕ್ಷನ್ ಮಾಡಿತ್ತು. ಇಷ್ಟೊಂದು ಹೆಸರು ಮಾಡಿದ್ದ ಸಿನಿಮಾವೀಗ ಹಾಲಿವುಡ್‌ಗೆ ರಿಮೇಕ್ ಆಗುತ್ತಿದೆ ಎನ್ನಲಾಗಿದೆ.

ಹಾಲಿವುಡ್‌ಗೆ 'ದೃಶ್ಯಂ' ಸಿರೀಸ್ ರಿಮೇಕ್
ಭಾರತದಾದ್ಯಂತ ಸದ್ದು ಮಾಡಿರೋ 'ದೃಶ್ಯಂ' ಹಾಲಿವುಡ್‌ಗೆ ರಿಮೇಕ್ ಮಾಡುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇತ್ತೀಚೆಗೆ ಪನೊರಮ ಸ್ಟುಡಿಯೋಸ್ ಇಂಟರ್‌ನ್ಯಾಷನಲ್ ವಿದೇಶ ಭಾಷೆಯ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ. ಹೀಗಾಗಿ ಹಾಲಿವುಡ್‌ನಲ್ಲೂ 'ದೃಶ್ಯಂ' ಹಾಗೂ 'ದೃಶ್ಯಂ 2' ಸಿರೀಸ್ ನಿರ್ಮಾಣ ಆಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಯಾವ್ಯಾವ ಭಾಷೆಯಲ್ಲಿದೆ 'ದೃಶ್ಯಂ' ರೈಟ್ಸ್
ಪನೋರಮ ಸ್ಟುಡಿಯೋಸ್ ಇಂಟರ್‌ನ್ಯಾಷನಲ್ ಹಲವು ವಿದೇಶಿ ಭಾಷೆಗಳಿಗೆ ರಿಮೇಕ್ ಆಗಿದೆ. ಫಿಲಿಪಿನೋ,ಸಿಂಹಳೀಯ ಹಾಗೂ ಇಂಡೋನೇಷ್ಯಾ ಭಾಷೆಯಲ್ಲಿ ಹಕ್ಕುಗಳನ್ನು ಖರೀದಿ ಮಾಡಲಾಗಿದೆ. ಅಲ್ಲದೆ ಚೀನಾ ಭಾಷೆಯಲ್ಲಿ 'ದೃಶ್ಯಂ' ಸಿರೀಸ್ ನಿರ್ಮಾಣ ಮಾಡುವ ಹಕ್ಕು ಕೂಡ ಇದ್ದು, ಕೊರಿಯಾ, ಜಪಾನ್ ಭಾಷೆಗಳಲ್ಲೂ ರಿಮೇಕ್ ಆಗುತ್ತಿದೆ.

ಐದು ಭಾಷೆಗಳಲ್ಲೂ ಸಕ್ಸಸ್
'ದೃಶ್ಯಂ' ಮಲಯಾಳಂನಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ದಕ್ಷಿಣದ ಉಳಿದ ಮೂರು ಭಾಷೆಗಳಿಗೂ ರಿಮೇಕ್ ಆಗಿತ್ತು. ತೆಲುಗಿನಲ್ಲಿ ವೆಂಕಟೇಶ್, ತಮಿಳಿನಲ್ಲಿ ಕಮಲ್ ಹಾಸನ್ ಹಾಗೂ ಕನ್ನಡದಲ್ಲಿ ರವಿಚಂದ್ರನ್ ನಟಿಸಿದ್ದರು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಸೂಪರ್‌ಹಿಟ್ ಆಗಿತ್ತು. ಅಲ್ಲದೆ 'ದೃಶ್ಯಂ' ಎರಡೂ ಚಾಪ್ಟರ್‌ಗಳು ಬಾಲಿವುಡ್‌ನಲ್ಲಿ ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿವೆ.

ಲಾಲೆಟ್ಟನ್–ಜೀತು ಮೋಡಿ
ನಿರ್ದೇಶಕ ಜೀತು ಜೋಸೆಫ್ ಕಥೆ ಹೇಳುವ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೊತೆಗೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯವಂತೂ ಕೇಳುವುದೇ ಬೇಡ. ಈಗ 'ದೃಶ್ಯಂ 3' ಮೂರನೇ ಚಾಪ್ಟರ್‌ಗೆ ಕಥೆ ಹೆಣೆಯಲಾಗುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಸಿಕ್ಕಿದ್ದು, ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆಯಿದೆ.


Click it and Unblock the Notifications











