ಮೋಹನ್‌ಲಾಲ್ ಜೊತೆ ಕೈ ಜೋಡಿಸಿದ ಏಕ್ತಾ ಕಪೂರ್: ನಂದ ಕಿಶೋರ್ ನಿರ್ದೇಶನ.. ₹200 ಕೋಟಿ ಬಜೆಟ್?
ಮಲಯಾಳಂ ಮೆಗಾಸ್ಟಾರ್ ಮೋಹನ್‌ಲಾಲ್ ಪ್ಯಾನ್ ಇಂಡಿಯಾ ಸಿನಿಮಾಗೆ ಕೈ ಹಾಕಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಕಳೆದ ವರ್ಷ ಆಗಸ್ಟ್‌ನಲ್ಲೇ ಅನೌನ್ಸ್ ಆಗಿತ್ತು. ಕನ್ನಡದ ಪೊಗರು ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡುತ್ತಿರೋ ವಿಷಯ ರಿವೀಲ್ ಆಗಿತ್ತು.
ಸುಮಾರು ಒಂದು ವರ್ಷಗಳ ಬಳಿಕ ಈ ಸಿನಿಮಾ ಬಗ್ಗೆ ಸಿಹಿ ಸುದ್ದಿಯೊಂದಿಗೆ ಸಿಕ್ಕಿದೆ. ಮೋಹನ್ ಲಾಲ್ ಸದ್ಯ ಮುಂಬೈನಲ್ಲಿದ್ದು, ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಅನ್ನು ಭೇಟಿ ಮಾಡಿದ್ದಾರೆ. ಸದ್ಯಕ್ಕೀಗ ಈ ಸಿನಿಮಾ ಬಗ್ಗೆ ಮೆಗಾ ಸುದ್ದಿಯೊಂದು ಹೊರಬಿದ್ದಿದೆ.

ಏಕ್ತಾ ಕಪೂರ್ ಬಾಲಿವುಡ್‌ನಲ್ಲಿ ಹೊಸ ಕಾಂತ್ರಿಯನ್ನೇ ಸೃಷ್ಟಿಸಿದ ನಿರ್ಮಾಪಕಿ. ಅದರಲ್ಲೂ ಕಿರುತೆರೆಯಲ್ಲಿ ಏಕ್ತಾ ಕಪೂರ್ ನಿರ್ಮಿಸಿದ್ದ ಧಾರಾವಾಹಿಗಳು ಸೂಪರ್ ಹಿಟ್ ಆಗಿದ್ದವು. ಈ ಮಧ್ಯೆ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಗಳಿಸಿದ್ದಾರೆ. ಇದೇ ನಿರ್ಮಾಪಕಿ ಜೊತೆ ಮೋಹನ್ ಲಾಲ್ ಒಡಂಬಡಿಕೆ ಮಾಡಿಕೊಂಡಿದ್ದು, ನಂದ ಕಿಶೋರ್ ಸಿನಿಮಾಗೆ ಆನೆಬಲ ಬಂದಂತಾಗಿದೆ.
ಮೋಹನ್‌ಲಾಲ್ ಸಿನಿಮಾ ಪ್ಯಾನ್ ಇಂಡಿಯಾ
ಮೋಹನ್‌ಲಾಲ್ ಹಾಗೂ ಕನ್ನಡದ ನಿರ್ದೇಶಕ ನಂದ ಕಿಶೋರ್ ಕಾಂಬಿನೇಷನ್ ಸಿನಿಮಾ 'ವೃಷಭ'. ಈ ಸಿನಿಮಾ ಅನೌನ್ಸ್ ಆಗಿದ್ದು ನಿಜ. ಆದರೆ, ಕಳೆದ ಕೆಲವು ತಿಂಗಳಿಂದ ಸುದ್ದಿಯಲ್ಲಿ ಇರಲಿಲ್ಲ. ಈಗ 'ವೃಷಭ' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಮೋಹನ್‌ಲಾಲ್ ನಿರ್ಧರಿಸಿದ್ದಾರೆ.
ಈ ಸಂಬಂಧ ಮೋಹನ್‌ಲಾಲ್ ಹಾಗೂ ಏಕ್ತಾ ಕಪೂರ್ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಮಾತಕತೆ ನಡೆಸಿದ್ದಾರೆ. ಇಲ್ಲಿ 'ವೃಷಭ' ಸಿನಿಮಾವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಏಕ್ತಾ ಕಪೂರ್‌ಗೆ ಹಿಂದಿ ಬೆಲ್ಟ್‌ನಲ್ಲಿ ಹಿಡಿತವಿದ್ದು, ಹಿಂದಿ ಅವತರಣಿಕೆ ರಿಲೀಸ್‌ಗೆ ಅನುಕೂಲ ಆಗಿದೆ. ಹೀಗಾಗಿ ಈ ಸಿನಿಮಾ ನಿರ್ಮಿಸುತ್ತಿರುವ ಎವಿಎಸ್ ಸ್ಟುಡಿಯೋಸ್ ಜೊತೆ ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲ್ಮ್ಸ್ ಕೈ ಜೋಡಿಸಲಿದೆ.

₹200 ಕೋಟಿ ಬಜೆಟ್.. ನಂದ ಕಿಶೋರ ನಿರ್ದೇಶಕ
ಮೋಹನ್‌ಲಾಲ್ ಅಂತ ಮಲಯಾಳಂ ಮೆಗಾಸ್ಟಾರ್‌ಗೆ 'ಪೊಗರು' ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಪ್ರಾಜೆಕ್ಟ್ ಅನೌನ್ಸ್ ಆದಾಗ, "5 ವರ್ಷಗಳಿಂದ ರೆಡಿ ಮಾಡಿಕೊಂಡಿದ್ದ ಕಥೆ" ಎಂದು ಹೇಳಿದ್ದರು. ಇದೊಂದು ತಂದೆ ಹಾಗೂ ಮಗನ ನಡುವಿನ ರಿವೇಂಜ್ ಸ್ಟೋರಿ.
ಮೋಹನ್‌ಲಾಲ್ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದು, ಮಗನ ಪಾತ್ರಕ್ಕೆ ತೆಲುಗು ಸ್ಟಾರ್ ನಟನಿಗೆ ಅಪ್ರೋಚ್ ಮಾಡಲಾಗಿದೆ ಎನ್ನಲಾಗುತ್ತಿದೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಹೀಗಾಗಿ ಈ ಸಿನಿಮಾ ನಂದ ಕಿಶೋರ್ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದರೆ, ನಂದ ಕಿಶೋರ್ ರೇಂಜ್ ಪ್ಯಾನ್ ಇಂಡಿಯಾ ಲೆವೆಲ್‌ಗೆ ಮುಟ್ಟುತ್ತೆ.
ಏನಿದು ಬ್ಯುಸಿನೆಸ್ ಸ್ಟ್ರಾಟಜಿ?
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಾಲಿವುಡ್‌ನ ಖ್ಯಾತ ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. 'ಬಾಹುಬಲಿ'ಗೆ ಕರಣ್ ಜೋಹರ್, 'ಕೆಜಿಎಫ್'ಗೆ ಅನಿಲ್ ತಡಾನಿ ಜೊತೆಯಾದಂತೆ ಮೋಹನ್ ಲಾಲ್ 'ವೃಷಭ'ಗೆ ಏಕ್ತಾ ಕಪೂರ್ ಬೆಂಬಲ ನೀಡುತ್ತಿದ್ದಾರೆ. ಇದು ಅತೀ ಹೆಚ್ಚು ಗಳಿಕೆ ಮಾಡುವ ಹಿಂದಿ ಬೆಲ್ಟ್ ಏರಿಯಾಗಳಿಗೆ ಅನುಕೂಲ ಆಗಲಿದೆ.
ಸದ್ಯ 'ವೃಷಭ' ಸಿನಿಮಾ ಮಲಯಾಳಂ, ಹಿಂದಿ ಅಷ್ಟೇ ಅಲ್ಲ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಹೀಗಾಗಿ ಮೋಹನ್‌ಲಾಲ್ ಸಿನಿಮಾದ ಬಜೆಟ್ 200 ಕೋಟಿ ರೂ. ದಾಟಲಿದೆ ಎನ್ನಲಾಗಿದೆ. ಅಲ್ಲದೆ 'ದೃಶ್ಯಂ' ಫೇಮ್ ಇರೋದ್ರಿಂದ ಮೋಹನ್ ಲಾಲ್ ಸಿನಿಮಾ ಹಿಂದಿಯಲ್ಲಿ ಬ್ಲಾಕ್‌ಬಸ್ಟರ್ ಆಗುವ ನಿರೀಕ್ಷೆಯಿದೆ.


Click it and Unblock the Notifications











