ಮಲಯಾಳಂ ಚಿತ್ರರಂಗದ ಅತಿ ಹಿರಿಯ ನಟ ಭಾಗವತರ್ ನಿಧನ
ಮಲಯಾಳಂ ಚಿತ್ರರಂಗದ ಅತ್ಯಂತ ಹಿರಿಯ ನಟ ಪಪ್ಪುಕುಟ್ಟಿ ಭಾಗವತರ್ (107) ಸೋಮವಾರ ಕೊಚ್ಚಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
Recommended Video
ಮೋಹನ್ ಲಾಲ್, ಮಮ್ಮೂಟಿ ಸೇರಿದಂತೆ ಮಲಯಾಳಂ ಚಿತ್ರರಂಗದ ಅನೇಕ ಗಣ್ಯರು ಭಾಗವತರ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾಗವತರ್ ಅವರು 'ಕೇರಳ ಸೈಗಲ್' ಎಂದೇ ಖ್ಯಾತರಾಗಿದ್ದರು. 1913ರ ಮಾರ್ಚ್ 29ರಂದು ವ್ಯಪ್ಪಿನ್ ಮಾಲಿಪ್ಪುರಂ ಚಕ್ಕಲಕ್ಕಳ್ ಮೈಕಲ್ ಮತ್ತು ಅನ್ನಮ್ಮಾ ಅವರ ಮಗನಾಗಿ ಜನಿಸಿದ್ದ ಭಾಗವತರ್ ಅವರ ಮೂಲ ಹೆಸರು ಎಂ.ಸಿ. ಜೋಸೆಫ್.

ರಂಗಭೂಮಿಯಲ್ಲಿದ್ದಾಗ ಅವರು ತಮ್ಮ ಹೆಸರನ್ನು ಪಪ್ಪುಕುಟ್ಟಿ ಭಾಗವತರ್ ಎಂದು ಬದಲಿಸಿಕೊಂಡಿದ್ದರು. ಏಳನೇ ವಯಸ್ಸಿನಲ್ಲಿಯೇ ಅವರು ರಂಗಭೂಮಿ ಪ್ರವೇಶಿಸಿದ್ದರು. ತಮ್ಮ ಇಡೀ ರಂಗಭೂಮಿ ವೃತ್ತಿ ಜೀವನದಲ್ಲಿ ಸುಮಾರು ಸುಮಾರು 15 ಸಾವಿರ ಪ್ರದರ್ಶನಗಳನ್ನು ನೀಡಿದ್ದಾರೆ. 1950ರಲ್ಲಿ ತೆರೆಕಂಡ 'ಪ್ರಸನ್ನ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಸುಮಾರು 25 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಗಾಯಕರಾಗಿಯೂ ಭಾಗವತರ್ ದೊಡ್ಡ ಹೆಸರು ಗಳಿಸಿದ್ದರು. ತಮ್ಮ 100ನೇ ವಯಸ್ಸಿನಲ್ಲಿ ಕೊಚ್ಚಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಗಳಿಸಿದ್ದಾರೆ. ಅವರ ಪತ್ನಿ ಬೇಬಿ 2017ರಲ್ಲಿ ಮೃತಪಟ್ಟಿದ್ದರು. ಐವರು ಮಕ್ಕಳನ್ನು ಅವರು ಅಗಲಿದ್ದಾರೆ.


Click it and Unblock the Notifications











