ಕನ್ನಡದ ಬಳಿಕ ಮಲಯಾಳಂನಲ್ಲೂ ರಿಲೀಸ್ ಆಗುತ್ತಿಲ್ಲ ಅಲ್ಲು ಅರ್ಜುನ್ 'ಪುಷ್ಪ'
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಸಿನಿಮಾ 'ಪುಷ್ಪ' ಇಂದು (ಡಿಸೆಂಬರ್ 17) ವಿಶ್ವದಾದ್ಯಂತ ತೆರೆಕಂಡಿದೆ. ಕಷ್ಟ ಪಟ್ಟು ರಿಲೀಸ್ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಹೇಗಿರುತ್ತೋ ಅಂತ ಅಲ್ಲು ಅರ್ಜುನ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ದಕ್ಷಿಣ ಭಾರತದಲ್ಲಿ 'ಪುಷ್ಪ' ವಿರುದ್ಧ ಅಪಸ್ವರಗಳು ಎದ್ದಿವೆ. ಈಗಾಗಲೇ ಕರ್ನಾಟಕದಲ್ಲಿ ಬಾಯ್‌ಕಾಟ್ 'ಪುಷ್ಪ' ಅಭಿಯಾನವನ್ನು ಕನ್ನಡಿಗರು ಆರಂಭಿಸಿದ್ದಾರೆ. ಇದರೊಂದಿಗೆ ಮಲಯಾಳಂನಲ್ಲೂ 'ಪುಷ್ಪ' ಸಿನಿಮಾ ಬಿಡುಗಡೆಯಾಗುತ್ತಿಲ್ಲ.
ಪ್ಯಾನ್ ಇಂಡಿಯಾ ಸಿನಿಮಾ ಆಗಿ ಗ್ರ್ಯಾಂಡ್ ರಿಲೀಸ್ ಮಾಡುವುದಕ್ಕೆ 'ಪುಷ್ಪ' ಸೋತಿದೆ. ಅಲ್ಲು ಅರ್ಜುನ್ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರೂ ಬಿಡುಗಡೆಯಾಗುತ್ತಿರುವುದು ಮಾತ್ರ ತೆಲುಗು ಅವತರಣೆಕೆ. ಇನ್ನೊಂದು ಕಡೆ ಮಲಯಾಳಂ ಭಾಷೆಯಲ್ಲೂ 'ಪುಷ್ಪ' ಸಿನಿಮಾ ಸಮಯಕ್ಕೆ ಸರಿಯಾಗಿ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಎರಡು ರಾಜ್ಯಗಳಲ್ಲಿ 'ಪುಷ್ಪ' ಬಿಡುಗಡೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದೆ.

ಕೇರಳದಲ್ಲಿ ತಮಿಳು 'ಪುಷ್ಪ' ರಿಲೀಸ್
ಬಿಡುಗಡೆ ಹೊಸ್ತಿಲಲ್ಲಿ 'ಪುಷ್ಪ' ಸಿನಿಮಾ ಎಡವಟ್ಟು ಮೇಲೆ ಎಡವಟ್ಟು ಮಾಡಿಕೊಂಡಿದೆ. ಕೊನೆ ಕ್ಷಣದಲ್ಲಿ ಮಲಯಾಳಂನಲ್ಲಿ ಡಬ್ ಆದ 'ಪುಷ್ಪ' ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸೋತಿದೆ. ಹೀಗಾಗಿ ಮೊದಲ ದಿನವೇ 'ಪುಷ್ಪ' ಮಲಯಾಳಂನಲ್ಲಿ ರಿಲೀಸ್ ಆಗುತ್ತಿಲ್ಲ. ಬದಲಾಗಿ, ತಮಿಳು ಭಾಷೆಯಲ್ಲಿ 'ಪುಷ್ಪ' ಸಿನಿಮಾವನ್ನು ರಿಲೀಸ್ ಮಾಡಿದೆ ಚಿತ್ರತಂಡ. ಕನ್ನಡದ ಬಳಿಕ ಮಲಯಾಳಂನಲ್ಲೂ ಕೂಡ ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿಲ್ಲ.

ಡಿಸೆಂಬರ್ 18ರಂದು 'ಪುಷ್ಪ' ರಿಲೀಸ್
ಕೇರಳದಲ್ಲಿ 'ಪುಷ್ಪ'ದ ಮಲಯಾಳಂ ಅವತರಣಿಕೆ ಬಿಡುಗಡೆ ತಡವಾಗುತ್ತಿದೆ. ಸರಿಯಾದ ಸಮಯಕ್ಕೆ ಮಲಯಾಳಂಗೆ ಡಬ್ ಆದ 'ಪುಷ್ಪ'ವನ್ನು ತಲುಪಿಸಲು ಚಿತ್ರತಂಡದಿಂದ ಸಾಧ್ಯವಾಗಿಲ್ಲ. ಹೀಗಾಗಿ ಡಿಸೆಂಬರ್ 17ರಂದು ಕೇವಲ ತಮಿಳು ವರ್ಷನ್ ರಿಲೀಸ್ ಮಾಡಿದೆ. ಒಂದು ದಿನ ತಡವಾಗಿ ಅಂದರೆ, ಡಿಸೆಂಬರ್ 18ರಂದು ಮಲಯಾಳಂ 'ಪುಷ್ಪ'ವನ್ನು ಬಿಡುಗಡೆ ಮಾಡಲಿದೆ. ಈ ವಿಚಾರಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಚಿತ್ರತಂಡ ಕ್ಷಮೆಯನ್ನೂ ಕೇಳಿದೆ.

ಕನ್ನಡಿಗರ ಕ್ಷಮೆ ಕೋರಲಿಲ್ಲ ಚಿತ್ರತಂಡ
ಮಲಯಾಳಂ ಭಾಷೆಗೆ ಡಬ್ ಆದ 'ಪುಷ್ಪ' ಸಿನಿಮಾ ಬಿಡುಗಡೆ ತಡವಾದ ಬೆನ್ನಲೇ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಚಿತ್ರತಂಡ ಕ್ಷಮೆ ಕೋರಿದೆ. ಇತ್ತ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಡಬ್ ಆದ ಸಿನಿಮಾವನ್ನು ಕೇವಲ ತೋರಿಕೆಗೆ ಬಿಡುಗಡೆ ಮಾಡಿದೆ. ಹೀಗಾಗಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಆದರೂ, ಕನ್ನಡದ ಸಿನಿಪ್ರಿಯರಿಗೆ ಕ್ಷಮೆ ಕೇಳಲು ಮುಂದೆ ಬಂದಿಲ್ಲ. ಕನ್ನಡದಲ್ಲಿ 'ಪುಷ್ಪ' ಯಾಕೆ ಬಿಡುಗಡೆಯಾಗುತ್ತಿಲ್ಲ ಅಂತನೂ ಸಮಜಾಯಿಷಿಕೊಟ್ಟಿಲ್ಲ.

ಒಂದೇ ಥಿಯೇಟರ್‌ನಲ್ಲಿ 'ಪುಷ್ಪ'
ಕನ್ನಡದಲ್ಲಿ 'ಪುಷ್ಪ' ರಿಲೀಸ್ ಆಗುತ್ತೆ ಅಂತ ಅಲ್ಲು ಫ್ಯಾನ್ಸ್ ಕಾದು ಕೂತಿದ್ದರು. ಆದರೆ, 'ಪುಷ್ಪ' ಕನ್ನಡದ ಬಿಡುಗಡೆಯಾಗಿದೆಯೋ ಇಲ್ಲವೋ ಸರಿಯಾದ ಮಾಹಿತಿ ಇಲ್ಲ. ಬುಕ್ ಮೈ ಶೋ ಆಪ್‌ನಲ್ಲಿ ಕೇವಲ ಒಂದೇ ಒಂದು ಚಿತ್ರಮಂದಿರವಿದೆ. ಬಿಡುಗಡೆಗೂ ಒಂದು ದಿನ ಮುನ್ನ ಮೂರು ಚಿತ್ರಮಂದಿರಗಳಿತ್ತು. ಅದರಲ್ಲೂ ಎರಡು ಚಿತ್ರಮಂದಿರಗಳು ಕಾಣೆಯಾಗಿವೆ.


Click it and Unblock the Notifications











