"ದಿ ಕೇರಳ ಸ್ಟೋರಿ ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯಲ್ಲಿ ಸೃಷ್ಟಿಯಾಗಿದ್ದು": ಕೇರಳ ಸಿಎಂ ಆಕ್ರೋಶ
ಬಾಲಿವುಡ್ ಸಿನಿಮಾ 'ದಿ ಕೇರಳ ಸ್ಟೋರಿ' ಟ್ರೈಲರ್ ರಿಲೀಸ್ ಆದಲ್ಲಿಂದ ಕೇರಳದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಈ ಬೆನ್ನಲ್ಲೇ ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
'ದಿ ಕೇರಳ ಸ್ಟೋರಿ' ಟ್ರೈಲರ್ ಸಂಘ ಪರಿವಾರದ ಪ್ರಚಾರದಂತೆ ತೋರುತ್ತಿದೆ" ಎಂದು ಕೇರಳ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ರೈಲರ್ ಕೇರಳದ ವಿರುದ್ಧ ದ್ವೇಷವನ್ನು ಬಿತ್ತುತ್ತಿರುವುದು ಮೊದಲ ನೋಟದಲ್ಲೇ ಗೊತ್ತಾಗುತ್ತೆ. ಅಲ್ಲದೆ ಉದ್ದೇಶ ಪೂರ್ವಕವಾಗಿ ಕೋಮು ಧ್ರುವೀಕರಣ ಮಾಡಲಾಗುತ್ತಿದೆ. ಹಾಗೇ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಫೇಸ್‌ಬುಕ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

" ಜಾತ್ಯಾತೀತದ ನೆಲೆಯಾಗಿರುವ ಕೇರಳವನ್ನು ಧಾರ್ಮಿಕ ಉಗ್ರವಾದ ಕೇಂದ್ರವನ್ನಾಗಿ ಬಿಂಬಿಸಲಾಗುತ್ತಿದೆ. ಟ್ರೈಲರ್ ನೋಡಿದಾಗ 'ದಿ ಕೇರಳ ಸ್ಟೋ'ರಿಯನ್ನು ಇಟ್ಟಿಕೊಂಡು ಇಟ್ಟುಕೊಂಡು ಸಂಘ ಪರಿವಾರ ಪ್ರಚಾರಕ್ಕೆ ಮುಂದಾಗಿದೆ" ಎಂದು ಆರೋಪ ಮಾಡಿದ್ದಾರೆ.
ಕೇರಳ ಮರ್ಯಾದೆಯನ್ನು ಹರಾಜು ಮಾಡಲು ತಂತ್ರ
"ಇಂತಹ ತಪ್ಪು ಹಾದಿಗೆ ತಳ್ಳುವ ಸಿನಿಮಾಗಳಲ್ಲಿ ಮುಸ್ಲಿಂ ಸುಮುದಾಯವನ್ನು ಕಡೆಗಣಿಸುವುದನ್ನು ನೋಡಬಹುದು. ಸಂಘ ಪರಿವಾರ ಕೇರಳ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಇಂತಹ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುತ್ತಿದೆ. ಲವ್ ಜಿಹಾದ್ ಅನ್ನೋ ಪದವನ್ನು ಪ್ಲ್ಯಾನ್ ಮಾಡಿ ಇಲ್ಲಿ ಬಳಸಲಾಗಿದೆ. ತನಿಖಾ ಸಂಸ್ಥೆಗಳೇ 'ಲವ್ ಜಿಹಾದ್' ಅನ್ನೋ ಪದವನ್ನು ತಿರಸ್ಕರಿಸಿವೆ. ಕೋರ್ಟ್, ಹಾಗೇ ಕೇಂದ್ರ ಗೃಹ ಮಂತ್ರಾಲಯ ಕೂಡ ಹೇಳಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವರರಾಗಿರುವ ಜಿ ಕೃಷ್ಣ ರೆಡ್ಡಿ ಅವರೇ ಪಾರ್ಲಿಮೆಂಟ್‌ನಲ್ಲಿ ಲವ್ ಜಿಹಾದ್ ಅನ್ನೋದೇ ಇಲ್ಲ ಎಂದು ಹೇಳಿದ್ದಾರೆ." ಸಿಎಂ ಪಿಣರಾಯಿ ವಿಜಯ್ ಹೇಳಿದ್ದಾರೆ.

"ಹಾಗೇ ಈ ಸಿನಿಮಾದಲ್ಲಿ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ವಿಶ್ವದ ಮುಂದೆ ಕೇರಳ ಮರ್ಯಾದೆಯನ್ನು ಹರಾಜು ಮಾಡಲು ನಿರ್ಧರಿಸಿದೆ. ಕೋಮುವಾದದ ವಿಷಬಿತ್ತುವ ಮೂಲಕ ಸಂಘ ಪರಿವಾರದವರು ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶ ಹೊಂದಿದ್ದಾರೆ." ಕೇರಳ ಸಿಎಂ ಹೇಳಿದ್ದಾರೆ.
"ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯಲ್ಲಿ ಸೃಷ್ಟಿಯಾಗಿದ್ದು"
ಬೇರೆ ರಾಜ್ಯಗಳಂತೆ ಸಂಘ ಪರಿವಾರದ ಪಾಲಿಟಿಕ್ಸ್ ಕೇರಳದಲ್ಲಿ ಕೆಲಸ ಮಾಡುತ್ತಿಲ್ಲ. ಈ ಕಾರಣಕ್ಕಾಗಿ ಅವರು ಸುಳ್ಳು ಕಥೆಗಳನ್ನು ಆಧರಿಸಿದ ಸಿನಿಮಾದ ಮೂಲಕ ರಾಜಕೀಯ ವಿಭಜನೆ ಮಾಡುತ್ತಿದ್ದಾರೆ. ಯಾವುದೇ ಸತ್ಯ ಅಥವಾ ಪುರಾವೆಗಳಿಲ್ಲದೆ ಸಂಘ ಪರಿವಾರ ಇಂತಹ ಸುಳ್ಳನ್ನು ಹರಡುತ್ತಿದೆ. 'ದಿ ಕೇರಳ ಸ್ಟೋರಿ' ಸಿನಿಮಾದ ಟ್ರೈಲರ್‌ನಲ್ಲಿ ಕೇರಳದ 32,000 ಮಹಿಳೆಯರು ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್ ಸದಸ್ಯರಾಗಿದ್ದಾರೆಂದು ಹೇಳಲಾಗಿದೆ. ಈ ಸುಳ್ಳು ಕಥೆ ಸಂಘ ಪರಿವಾರದ ಸುಳ್ಳಿನ ಕಾರ್ಖಾನೆಯಲ್ಲಿ ಸೃಷ್ಟಿಯಾಗಿದ್ದು." ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
"ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದಲ್ಲಿ ಮತೀಯವಾದ ಸೃಷ್ಟಿಸಲು ಸಿನಿಮಾವನ್ನು ಬಳಸಿಕೊಳ್ಳುವವರನ್ನು ಸಮರ್ಥನೆ ಮಾಡುವುದು ಸರಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ಈ ದೇಶವನ್ನು ಕೋಮುವಾದಗೊಳಿಸಲು, ಸುಳ್ಳುಗಳನ್ನು ಬಿತ್ತರಿಸಲು ಹಾಗೂ ಸಮಾಜದ ವಿಭಜನೆ ಮಾಡಲು ಲೈಸನ್ಸ್ ನೀಡಿಲ್ಲ." ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
"ಕಾನೂನು ಕ್ರಮ ಜರುಗಿಸಲಾಗುತ್ತೆ"
"ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಅಶಾಂತಿ ಹರಡಲು ಯತ್ನಿಸುವವರ ವಿರುದ್ಧ ಜಾಗೃತರಾಗಬೇಕು. ಸಮಾಜ ವಿರೋಧಿ ಚಟುವಟಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತೆ" ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್" ಹೇಳಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದು, ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಕೇರಳ ಮಹಿಳೆಯ ಗುಂಪೊಂದು ಇಸ್ಲಾಂಗೆ ಮತಾಂತರಗೊಂಡು ಐಸಿಸ್‌ಗೆ ಸೇರಿಕೊಳ್ಳುವ ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ತೋರಿಸಿದ್ದಾರೆ. ಇದರೊಂದಿಗೆ ಚಿತ್ರತಂಡ ಕೇರಳದಲ್ಲಿ 32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಹೇಳಿದೆ. ಹಾಗೇ ಈ ಸಿನಿಮಾವನ್ನು ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದೂ ಹೇಳಿಕೊಂಡಿದ್ದು, ಮೇ 5ಕ್ಕೆ ರಿಲೀಸ್ ಮಾಡುವುದಕ್ಕೆ ಹೊರಟಿದೆ.


Click it and Unblock the Notifications











