Malayalam Actor Innocent: ಮಲಯಾಳಂ ಚಿತ್ರರಂಗದ ದಿಗ್ಗಜ 'ಇನ್ನೊಸೆಂಟ್' ಕೊಚ್ಚಿಯಲ್ಲಿ ನಿಧನ
ಮಲಯಾಳಂ ಚಿತ್ರರಂಗದ ನಟ ಹಾಗೂ ಮಾಜಿ ಸಂಸದ ಇನ್ನೊಸೆಂಟ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 75 ವರ್ಷದ ಹಿರಿಯ ಇಂದು (ಮಾರ್ಚ್ 26) ಕೊಚ್ಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಿರಿಯ ನಟ ಇನ್ನೊಸೆಂಟ್ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಇದೇ ತಿಂಗಳು 3ನೇ ತಾರೀಖು (ಮಾರ್ಚ್) ಉಸಿರಾಟದ ಸಮಸ್ಯೆಯಿಂದ ಅವರನ್ನು ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಸೆಂಟ್ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

1972ರಲ್ಲಿ ಇನ್ನೊಸೆಂಟ್ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಸುಮಾರು 5 ದಶಕಗಳ ಕಾಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಮಾರು 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾ ಪ್ರೇಮಿಗಳ ಅಚ್ಚುಮೆಚ್ಚಿನ ನಟನಾಗಿದ್ದರು.
ಇನ್ನೊಸೆಂಟ್, 'ಅಕ್ಕರೆ ಇನ್ನೊರು ಮಾರನ್', 'ಗಾಂಧಿನಗರ್ ಸೆಕೆಂಡ್ ಸ್ಟ್ರೀಟ್', 'ಉನ್ನಿಕಾಲೆ ಒರು ಕಾದಾ ಪರಯಂ', 'ನಾಡೋಡಿಕ್ಕಟ್ಟು','ಮುಕುನ್ಥೆಟ್ಟ', 'ಸುಮಿತ್ರ ವಿಲಿಕ್ಕುನ್ನು', 'ವಡಕ್ಕುನೊಕ್ಕಿಯಂತ್ರಂ', 'ರಾಮ್‌ಜಿ ರಾವ್ ಸ್ಪೀಕಿಂಗ್', 'ಪೆರುವನ್ನಪುರತ್ತೆ ವಿಶೇಷಂಗಳ್' ಹಾಗೂ 'ಮಳವಿಲ್ ಕವಡಿ' ಅಂತಹ ಅದ್ಭುತ ಇನ್ನೂ ಅನೇಕ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟ ಇನ್ನೊಸೆಂಟ್ ಮಲಯಾಳಂ ಮೂವಿ ಆರ್ಟಿಸ್ಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದಷ್ಟೇ ಇನ್ನೊಸೆಂಟ್ ಕ್ಯಾನ್ಸರ್ ಪತ್ತೆಯಾಗಿತ್ತು. ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದರು. 2015ರಂದು ನಟ ಕ್ಯಾನ್ಸರ್ ಫ್ರೀ ಎಂದು ಘೋಷಣೆ ಮಾಡಿದ್ದರು.
ಮಲಯಾಳಂ ದಿಗ್ಗಜ ಇನ್ನೊಸೆಂಟ್ ಕ್ಯಾನ್ಸರ್‌ನಿಂದ ಹೊರಬಂದ ಮೇಲೆ ತಮ್ಮ ಹೋರಾಟದ ಬಗ್ಗೆ ಪುಸ್ತಕ ಬರೆದಿದ್ದರು. 'ಲಾಫ್ಟರ್ ಇನ್ ದಿ ಕ್ಯಾನ್ಸರ್ ವಾರ್ಡ್' ಅನ್ನೋ ಪುಸ್ತಕಕ್ಕೆ ಓದುಗರು ಮೆಚ್ಚಿಕೊಂಡಿದ್ದರು.

ಇನ್ನೊಸೆಂಟ್ ಕೊನೆಯದಾಗಿ ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಕಡುವ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಅಲ್ಲದೆ 'ಪಾಚುವುಂ ಅಲ್ಭುಥವಿಲಕ್ಕುಂ' ಸಿನಿಮಾ ಬಿಡುಗಡೆ ರೆಡಿಯಾಗಿದ್ದು, ಏಪ್ರಿಲ್ 28ಕ್ಕೆ ರಿಲೀಸ್ ಆಗುತ್ತಿದೆ. ಇದು ಮಲಯಾಳಂ ದಿಗ್ಗಜನ ಕೊನೆ ಸಿನಿಮಾ ಆಗಲಿದೆ. ಇನ್ನೊಸೆಂಟ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಮಲಯಾಳಂನ ಈ ಹಿರಿಯ ನಟ ಹಾಸ್ಯದ ಪಾತ್ರಕ್ಕೂ ಸೈ. ಖಳನಾಯಕನ ಪಾತ್ರಕ್ಕೂ ಸೈ. ಎರಡೂ ಪಾತ್ರಗಳಲ್ಲಿ ಜನಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇನ್ನೊಸೆಂಟ್ ಅವರ ಧ್ವನಿ ಹಾಗೂ ಮ್ಯಾನರಿಸಂಗೆ ಪ್ರೇಕ್ಷಕರು ಫಿದಾ ಆಗಿದ್ದರು.
ಸಿನಿಮಾದಂತೆ ರಾಜಕೀಯದಲ್ಲೂ ಇನ್ನೊಸೆಂಟ್ ಯಶಸ್ಸು ಗಳಿಸಿದ್ದರು. 1979ರಲ್ಲಿ ಇರಿಂಜಾಲಕ್ಕುಡ ಮುನಿಪಾಲಿಟಿಯಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಹಾಗೇ 2014ರಲ್ಲಿ ಲೋಕಸಭೆಯಿಂದ ಚುನಾವಣೆಗೆ ನಿಂತಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಚಾಲಕುಡಿ ಕ್ಷೇತ್ರದಿಂದ ಸ್ಪರ್ಥಿಸಿ ಗೆದ್ದಿದ್ದರು. ಇವರಿಗೆ ಎಲ್‌ಡಿಎಫ್ ಬೆಂಬಲ್ ಸೂಚಿಸಿತ್ತು. ಈ ಮೂಲಕ ಲೋಕಸಭೆಗೆ ಪ್ರವೇಶ ಮಾಡಿದ ಕೇರಳದ ಮೊದಲ ನಟ ಎನಿಸಿಕೊಂಡರು. ಆದರೆ, 2019ರ ಚುನಾವಣೆಯಲ್ಲಿ ಪರಭಾವಗೊಂಡರು. ದಿಗ್ಗಜನ ಅಗಲಿಕೆಗೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.


Click it and Unblock the Notifications











