ಅತ್ತ "ಬ್ಯಾಂಗಲ್ ಬಂಗಾರಿ".. ಇತ್ತ "ವೈರಲ್ ವೈಯ್ಯಾರಿ"; ಸ್ಯಾಂಡಲ್‌ವುಡ್‌ನಲ್ಲಿ ಬಂಗಾರಿ, ವೈಯ್ಯಾರಿದೇ ಟಾಕ್
ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳು ದುಡ್ಡು ಮಾಡುತ್ತಿಲ್ಲ. ಜನರು ಥಿಯೇಟರ್‌ಗೆ ಬರುತ್ತಿಲ್ಲ ಅನ್ನೋ ಕೊರಗಿನಲ್ಲೇ ಸಿನಿಮಾ ಮಂದಿ ಎರಡು ವರ್ಷ ಕಳೆದು ಬಿಟ್ರು. ಜನರು ಯಾಕೆ ಥಿಯೇಟರ್‌ಗೆ ಬರುತ್ತಿಲ್ಲ ಅಂತ ಹುಡುಕಿ ಹುಡುಕಿ ಸುಸ್ತಾಗಿ ಕೈ ಚಲ್ಲಿ ಕೂತಿದ್ದರು. ಇನ್ನೇನು ಆರು ತಿಂಗಳು ಮುಗೀತು. ಅಲ್ಲಿಗೆ ಈ ವರ್ಷದ ಕಥೆನೂ ಅಷ್ಟೇ ಎನ್ನುವಾಗಲೇ ಹಾಡುಗಳು ಪ್ರೇಕ್ಷಕರಿಗೆ ಕಿಕ್ ಕೊಡುವುದಕ್ಕೆ ಶುರು ಮಾಡಿವೆ. ಹಾಗಂತ ಅದೇನು ಸೂಪರ್‌ಸ್ಟಾರ್‌ಗಳ ಸಾಂಗ್ ಅಲ್ಲ. ಅದು ಯುವ ನಟರ ಸಿನಿಮಾದ ಹಾಡುಗಳು ಅನ್ನೋದು ವಿಶೇಷ.
ಕಳೆದ ಕೆಲವು ದಿನಗಳಿಂದ ಯುವ ರಾಜ್‌ಕುಮಾರ್ ಮಾಸ್ ಲುಕ್ ಕೊಟ್ಟಿರುವ 'ಎಕ್ಕ' ಸಿನಿಮಾದ ಹಾಡು ಎಲ್ಲರ ಬಾಯಲ್ಲಿಯೂ ಹರಿದಾಡುತ್ತಿದೆ. ಈ ಸಿನಿಮಾದ "ಬ್ಯಾಂಗಲ್ ಬಂಗಾರಿ.." ಸಾಂಗ್ ರಿಲೀಸ್ ಆದಲ್ಲಿಂದ ಸಿನಿಪ್ರೇಮಿಗಳ ಬಾಯಲ್ಲಿ ಇದೇ ಹಾಡು ಹರಿದಾಡುತ್ತಿದೆ. ಲೆಕ್ಕವಿಲ್ಲದಷ್ಟು ರೀಲ್‌ಗಳಾಗಿವೆ. ಅವು ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಲೇ ವೀವ್ಸ್ ಪಡೆದುಕೊಂಡಿವೆ. ಈ ಹಾಡು ಹಿಟ್ ಆಗುತ್ತಿದ್ದಂತೆ 'ಎಕ್ಕ' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರಿತ್ತಿದ್ದಾರೆ.

"ಬ್ಯಾಂಗಲ್ ಬಂಗಾರಿ.." ಹಿಂದೆನೇ ಮತ್ತೊಂದು ಹಾಡು ರಿಲೀಸ್ ಆಗಿದೆ. ಇಷ್ಟು ದಿನ "ಬ್ಯಾಂಗಲ್ ಬಂಗಾರಿ" ಅಂತಿದ್ದವರು, ಇನ್ಮುಂದೆ "ವೈರಲ್ ವೈಯ್ಯಾರಿ.." ಹಾಡುವುದಕ್ಕೆ ಶುರು ಮಾಡಬಹುದು. ಅಂದ್ಹಾಗೆ ಇದು ಗಾಲಿ ಜನಾರ್ಧನ ರೆಡ್ಡಿ ಪುತ್ರಿ ಕಿರೀಟಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾದ ಹಾಡು. ಈ ಹಾಡಲ್ಲೂ ಬೀಟ್ ಇದೆ. ಮೈಚಳಿ ಬಿಟ್ಟು ಕುಣಿಯಬೇಕು ಎನ್ನುವ ಸ್ಟೆಪ್‌ಗಳಿದ್ದಾವೆ. ಹಾಗಿದ್ದರೆ, "ಬ್ಯಾಂಗಲ್ ಬಂಗಾರಿ..", "ವೈರಲ್ ವೈಯ್ಯಾರಿ" ಜನರಿಗೆ ಯಾಕೆ ಇಷ್ಟ ಆಗ್ತಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಒಂದು ಸಿನಿಮಾ ಗೆಲ್ಲುವುದಕ್ಕೆ ಟೀಸರ್ ಹೇಗೆ ಮುಖ್ಯವೋ? ಹಾಗೇ ಹಾಡುಗಳು ಕೂಡ ಅಷ್ಟೇ ಮುಖ್ಯ. ಟೀಸರ್, ಟ್ರೈಲರ್ ಇನ್ವಿಟೇಷನ್ ಆದರೆ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವುದೇ ಹಾಡುಗಳು. ಅದಕ್ಕೆ ಒಂದು ಬೆಸ್ಟ್ ಎಗ್ಸಾಂಪಲ್ ಅಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಈ ಸಿನಿಮಾದ ಒಂದು ಹಾಡು ಪ್ರೇಕ್ಷಕರನ್ನು ಚಿತ್ರಮಂದಿರದವರೆಗೂ ಎಳೆದುಕೊಂಡು ಬಂದಿತ್ತು.
ಅಷ್ಟೇ ಯಾಕೆ ಈ ಹಿಂದೆ ಕನ್ನಡದಲ್ಲಿ ಮೆಗಾ ಹಿಟ್ ಎನಿಸಿಕೊಂಡ ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಡುಗಳಿಂದಲೇ ಮೆಗಾ ಹಿಟ್ ಆದ ಸಿನಿಮಾಗಳ ದೊಡ್ಡ ಪಟ್ಟಿಯೇ ಸಿಗುತ್ತೆ. ಇಷ್ಟು ದಿನ ಕನ್ನಡದ ಫಿಲ್ಮ್ ಮೇಕರ್ಸ್ ಇದನ್ನೇ ಮಿಸ್ ಮಾಡುತ್ತಿದ್ದರು. ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತಹ ಹಾಡುಗಳನ್ನು ಕೊಡುವುದರ ಕಡೆಗೆ ಗಮನ ಹರಿಸಿರಲಿಲ್ಲ. ಈಗ "ಬ್ಯಾಂಗಲ್ ಬಂಗಾರಿ.."ಗೆ 11 ಮಿಲಿಯನ್‌ಗಿಂತಲೂ ಅಧಿಕ ವೀವ್ಸ್ ಸಿಕ್ಕಿದೆ. ಈ ವರ್ಷದ ಸೂಪರ್ ಹಿಟ್ ಹಾಡುಗಳಲ್ಲಿ ಇದೂ ಒಂದಾಗಿದೆ.

ಇದೇ ಸಾಲಿಗೆ ಕಿರೀಟಿ, ಶ್ರೀಲೀಲಾ ನಟಿಸುತ್ತಿರುವ 'ಜೂನಿಯರ್' ಸಿನಿಮಾ "ವೈರಲ್ ವೈಯ್ಯಾರಿ" ಕೂಡ ಅಷ್ಟೇ ಮಸ್ತ್ ಆಗಿದೆ. ಡ್ಯಾನ್ಸ್ ಕ್ವೀನ್ ಶ್ರೀಲೀಲಾ ಹಾಗೂ ಕಿರೀಟಿ ಕಾಂಪಿಟೇಷನ್‌ಗೆ ಬಿದ್ದು ಹೆಜ್ಜೆ ಹಾಕಿದ್ದಾರೆ. ಇದಕ್ಕೆ ತೆಲುಗಿನ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಪವನ್ ಭಟ್ ಸಾಹಿತ್ಯ ರಚಿಸಿರುವ ಈ ಹಾಡನ್ನು ಹರಿಪ್ರಿಯಾ ಮತ್ತು ದೀಪಕ್ ಬ್ಲೂ ಹಾಡಿದ್ದಾರೆ. 'ಬಾಹುಬಲಿ', RRR ಸಿನಿಮಾದ ಛಾಯಾಗ್ರಾಹಕ ಕೆ.ಕೆ.ಸೆಂಥಿಲ್ ಕುಮಾರ್ ಕ್ಯಾಮರಾ ವರ್ಕ್ ಇದೆ.
ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಮಾಯಾಬಜಾರ್' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಕಿರೀಟಿ ನಟಿಸಿರುವ 'ಜೂನಿಯರ್' ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ಜುಲೈ 18ರಂದು ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ, ಅದೇ ದಿನ ಯುವ ರಾಜ್‌ಕುಮಾರ್ ನಟನೆ 'ಎಕ್ಕ' ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ "ಬ್ಯಾಂಗಲ್ ಬಂಗಾರಿ.." ಹಾಡು ನೋಡುವುದಕ್ಕೆ ಪ್ರೇಕ್ಷಕರು 'ಎಕ್ಕ'ಗೆ ಬರುತ್ತಾರಾ? ಇಲ್ಲ "ವೈರಲ್ ವೈಯ್ಯಾರಿ" ನೋಡುವುದಕ್ಕೆ 'ಜೂನಿಯರ್' ಹುಡುಕಿಕೊಂಡು ಹೋಗ್ತಾರಾ? ಈ ಪ್ರಶ್ನೆ ಇನ್ನೆರಡು ವಾರಗಳಲ್ಲಿ ಉತ್ತರ ಸಿಗಲಿದೆ.


Click it and Unblock the Notifications











