'ಬಿಗ್ ಬಾಸ್' ರಾಜೀವ್ ನಟಿಸಿದ 'ಉಸಿರೇ ಉಸಿರೇ ಸಿನಿಮಾದ ಮೊದಲ ಹಾಡು ಔಟ್:ವಿಶೇಷ ಪಾತ್ರದಲ್ಲಿ ಕಿಚ್ಚ!
ಸ್ಯಾಂಡಲ್‌ವುಡ್‌ಗೆ ರಾಜೀವ್ ಹೊಸ ಪರಿಚಯವೇನಲ್ಲ. ಸ್ಯಾಂಡಲ್‌ವುಡ್‌ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಸಿಸಿಎಲ್ ಪ್ರಿಯರಿಗೆ ರಾಜೀವ್ ತುಂಬಾನೇ ಚಿರಪರಿಚಿತ. ಆರಂಭಿಕ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ಬಿಗ್‌ಬಾಸ್ ಖ್ಯಾತಿ ಅಂತಹ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ಈಗ ಅವರೇ ನಾಯಕರಾಗಿ ನಟಿಸಿರುವ 'ಉಸಿರೇ ಉಸಿರೇ' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಆದರೆ, ಅದಕ್ಕೂ ಮುನ್ನ ಸ್ಯಾಂಡಲ್‌ವುಡ್‌ನ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ "ಉಸಿರೇ ನನ್ನ ಉಸಿರೇ.." ಎಂಬ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಈ ಸಿನಿಮಾಗೆ ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದು, ಮೊದಲ ಹಾಡಿಗೆ ವಾಸುಕಿ ವೈಭವ್ ಧ್ವನಿ ನೀಡಿದ್ದಾರೆ. ವಿಶೇಷ ಅಂದರೆ, ಈ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ರಿಲೀಸ್ ಮಾಡಿದರು. ಇನ್ನೊಂದು ವಿಶೇಷ ಅಂದರೆ, ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದ್ಹಾಗೆ, 'ಉಸಿರೇ ಉಸಿರೇ' ಇದೊಂದು ನವೀರದ ಪ್ರೇಮಕಥೆ. ಪ್ರೀತಿಗೆ ಜಾತಿಯಿಲ್ಲ ಎಂದು ಸಾರಿ ಹೇಳುವ ಕಥೆ. "ಉಸಿರೇ ಉಸಿರೇ ಸಿನಿಮಾದ ಚಿತ್ರೀಕರಣ ಮುಗಿದಿದೆ. ಇತ್ತೀಚೆಗೆ ಬಳ್ಳಾರಿಯ ರೇಣುಕಾಂಬ ಜಾತ್ರೆಯಲ್ಲಿ ಹಾಗೂ ಮಂತ್ರಾಲಯದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದೆವು. ಈಗ ಮೊದಲ ಹಾಡು ಬಿಡುಗಡೆಯಾಗಿದೆ. ಎಲ್ಲರೂ ಸಾಮಾನ್ಯವಾಗಿ ಮೊದಲು ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡುತ್ತಾರೆ. ಆದರೆ, ನಾವು ಪ್ಯಾತೋ ಸಾಂಗ್ ಬಿಡುಗಡೆ ಮಾಡಿದ್ದೇವೆ. ಈ ಹಾಡನ್ನು ಮೊದಲು ಬಿಡುಗಡೆ ಮಾಡಲು ಕಾರಣವಿದೆ. ಈ ಹಾಡಿನಲ್ಲಿ ಇಡೀ ಚಿತ್ರದ ಕಥೆಯಿದೆ. ಹಾಡನ್ನು ಗಮನವಿಟ್ಟು ಕೇಳಿದಾಗ ನಮ್ಮ ಸಿನಿಮಾದ ಕಥೆ ಅರ್ಥವಾಗುತ್ತೆ" ಎಂದು ಸಿನಿಮಾ ಹೀರೊ ರಾಜೀವ್ ಹೇಳಿದ್ದಾರೆ.

'ಉಸಿರೇ ಉಸಿರೇ' ಪ್ರದೀಪ್ ಯಾದವ್ ಅನ್ನೋ ಹೊಸಬರು ನಿರ್ಮಿಸಿದ್ದಾರೆ. ಇದು ಅವರ ಮೊದಲ ನಿರ್ಮಾಣದ ಚಿತ್ರ. "ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೆ ಸ್ಪೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ." ಎಂದು ನಿರ್ಮಾಪಕರು ಹೇಳಿದ್ದಾರೆ.
ಅಲ್ಲದೆ ಕಿಚ್ಚ ಸುದೀಪ್ ದೃಶ್ಯಗಳು ಕ್ಲೈಮ್ಯಾಕ್ಸ್‌ನಲ್ಲಿ ಬರುತ್ತವೆ. ಸುದೀಪ್ ನಟನೆಯ ಸನ್ನಿವೇಶಗಳು ಸುಮಾರು 18 ನಿಮಿಷಗಳು ಇರುತ್ತೆವೆ ಎಂದು ನಿರ್ಮಾಪಕರೇ ಹೇಳಿದ್ದಾರೆ. ಹಾಗೇ "ನಮ್ಮ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಸೆಪ್ಟೆಂಬರ್‌ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ." ಎಂದು ನಿರ್ದೇಶಕ ಸಿ ಎಂ ವಿಜಯ್ ಮಾಹಿತಿ ನೀಡಿದ್ದಾರೆ.
'ಉಸಿರೇ ಉಸಿರೇ' ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್‌ಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟರಾದ ಆಲಿ ಹಾಗೂ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ.
ಇವರೊಂದಿಗೆ ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು, ಜಗಪ್ಪ, ಸುಶ್ಮಿತಾ ಇನ್ನೂ ಮುಂತಾದವರು ನಟಿಸಿದ್ದಾರೆ. ಸದ್ಯ ಮೊದಲ ಹಾಡು ರಿಲೀಸ್ ಆಗಿದ್ದು, ಉಳಿದ ಹಾಡುಗಳು ಹಾಗೂ ಟ್ರೈಲರ್ ಸಹ ಬಿಡುಗಡೆಯಾಗಲಿದೆ.


Click it and Unblock the Notifications











