'ವಾಮನ' ಅಂತ ಬಂದೇ ಬಿಟ್ಟ 'ಶೋಕ್ದಾರ್': ಅಜನೀಶ್ ಲೋಕನಾಥ್ ಮಾಸ್ ಟ್ಯೂನ್
ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಮಾಸ್ ಹೀರೊ ಧನ್ವೀರ್ ಗೌಡ ಹೊಸ ಸಿನಿಮಾ ಬಿಡುಗಡೆಗೆ ಪ್ರಚಾರ ಆರಂಭಿಸಿದೆ. ಈಗಾಗಲೇ 'ಬಜಾರ್', 'ಶೋಕ್ದಾರ್' ಅಂತಹ ಸಿನಿಮಾಗಳಲ್ಲಿ ನಟಿಸಿರೋ ಯುವ ನಟನ ಹೊಸ ಸಿನಿಮಾ 'ವಾಮನ'. ಇದೇ ಸಿನಿಮಾದ ಮಾಸ್ ಹಾಡೊಂದು ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗದ 'ಶೋಕ್ದಾರ್' ಎಂದೇ ಜನಪ್ರಿಯರಾಗಿರುವ ಧನ್ವೀರ್ ಗೌಡ ನಟನೆಯ 'ವಾಮನ' ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ವಾ..ವಾ..ವಾ..ವಾಮನ ಎನ್ನುತ್ತಲೇ ಧ್ನವೀರ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮತ್ತೊಂದು ಮಾಸ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

'ಕಾಂತಾರ' ಖ್ಯಾತಿಯ ಅಜನೀಶ್ ಲೋಕನಾಥ್ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ವಾಮನ ಅನ್ನೋ ಮಾಸ್ ಸಾಂಗ್ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಈ ಮಾಸ್ ಸಾಂಗ್ ಅನ್ನು ಶಶಾಂಕ್ ಶೇಷಗಿರಿ ಪವರ್‌ಫುಲ್ ಆಗಿ ಹಾಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ಇದು 'ವಾಮನ' ಸಿನಿಮಾದ ನಾಯಕನ ಇಂಟ್ಯೂಡಕ್ಷನ್ ಸಾಂಗ್.
'ವಾಮನ' ಸಿನಿಮಾವನ್ನು ನಿರ್ದೇಶಕ ಚೇತನ್ ಗೌಡ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು ಯುವ ನಿರ್ದೇಶಕ ಶಂಕರ್ ರಾಮನ್.ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಇತ್ತೀಚೆಗಷ್ಟೇ ಸಾಂಗ್ ರಿಲೀಸ್ ಆಗಿದ್ದು ಇಡೀ ಚಿತ್ರತಂಡ ಭಾಗಿಯಾಗಿದೆ.
"ಕಥೆಯಲ್ಲಿ ಬರುವ ಪಾತ್ರಗಳಿಗಷ್ಟೇ ಕೌಂಟರ್ ಕೊಡುತ್ತಿರುವುದು. ಬೇರೆ ಯಾರಿಗೂ ಅಲ್ಲ. ನಾಯಕ ಗುಣ, ಪಾತ್ರ ನೀರು ಇದ್ದ ಹಾಗೆ. ರಾವಣ, ದುರ್ಯೋಧನ ಇಬ್ಬರನ್ನೂ ಆವರಿಸಿಕೊಳ್ಳುತ್ತಾರೆ. ವಾಮನನ್ನು ಆವರಿಸಿಕೊಳ್ಳುತ್ತಾರೆ. ಸಮಯ ಬಂದಾಗ ದಶಾವತಾರದಲ್ಲಿರುವ ಪಾತ್ರವನ್ನು ಆವರಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ನಾಲ್ಕು ಸಾಹಸ ದೃಶ್ಯಗಳು ಇವೆ. ಮಾಸ್ ಆಡಿಯನ್ಸ್‌ಗೆ ಏನ್ ಬೇಕೋ ಅದು ಇದೆ. ಕ್ಲಾಸ್ ಆಡಿಯನ್ಸ್ ಬೇಕಾದ ಕಥೆಯು ಇದೆ" ಎನ್ನುತ್ತಾರೆ ನಿರ್ದೇಶಕ ಶಂಕರ್ ರಾಮನ್.

"ವಾಮನ ಇದು ನನ್ನ ಮೂರನೇ ಸಿನಿಮಾ. ಟೈಟಲ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ತರ ಸಾಂಗ್ ಅನ್ನ ನನ್ನ ಹಿಂದಿನ ಸಿನಿಮಾಗಳಲ್ಲಿ ಎಕ್ಸ್‌ಪೆಕ್ಟ್ ಮಾಡಿದ್ದೆ. ಆದರೆ, ಚೇತನ್ ಸರ್ ನನ್ನ ಹಿಂದೆ ಇಟ್ಟುಬಿಟ್ಟಿದ್ದರು. ಹೋದ ಸಿನಿಮಾದಲ್ಲಿಯೇ ಇದು ಆಗಬೇಕಿತ್ತು. ಅವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್. ಅವರ ಪದ ಜೋಡಣೆ ಎಲ್ಲಾ ಚೆನ್ನಾಗಿರುತ್ತದೆ. ಸಿನಿಮಾದಲ್ಲಿ ಒಳ್ಳೆ ಕಂಟೆಂಟ್ ಇದೆ. ಇವತ್ತಿನಿಂದ ವಾಮನ ಸಿನಿಮಾದ ಪ್ರಮೋಷನ್ ಶುರುವಾಗಿದೆ." ಎಂದು ಮಾಹಿತಿ ನೀಡಿದ ಧನ್ವೀರ್.
ವಾಮನ ಸಿನಿಮಾದಲ್ಲಿ ಧ್ನವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಖುಷಿ ಖುಷಿಯಾಗಿಯೇ ಮಾತಾಡುತ್ತಿದ್ದಾರೆ. "ವಾಮನ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಇದೆಲ್ಲ ಕ್ರೆಡಿಟ್ ನಿರ್ದೇಶಕರು, ಚೇತನ್ ಸರ್ ಸಾಹಿತ್ಯ, ಶಶಾಂಕ್ ವಾಯ್ಸ್, ಅಜನೀಶ್ ಸಂಗೀತಕ್ಕೆ ಸಲ್ಲಬೇಕು. ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಹಾಗೇ ನನ್ನ ಪಾತ್ರದ ಹೆಸರು ನಂದಿನಿ. ಸಿಂಪಲ್ ಆದ ಮುದ್ದಾದ ಕ್ಯಾರೆಕ್ಟರ್. ಲವ್‌ನಲ್ಲಿಯೇ ಫೈಟ್ ಇದೆ" ಎನ್ನುತ್ತಾರೆ ನಾಯಕಿ ರೀಷ್ಮಾ ನಾಣಯ್ಯ.
'ವಾಮನ' ಸಿನಿಮಾವನ್ನು ಚೇತನ್ ಗೌಡ ನಿರ್ಮಾಣ ಮಾಡಿದ್ದಾರೆ. ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ ಅನ್ನೋ ನಂಬಿಕೆ ಅವರಿಲ್ಲಿದೆ. ಧನ್ವೀರ್, ರೀಷ್ಮಾ ನಾಣಯ್ಯ ಜೊತೆ ತಾರಾ, ಸಂಪತ್, ಆದಿತ್ಯ ಮೆನನ್, ಶಿವರಾಜ್ ಕೆಆರ್ ಪೇಟೆ, ಅವಿನಾಶ್, ಅಚ್ಯುತ್ ಕುಮಾರ್, ಕಾಕ್ರೊಚ್ ಸುಧಿ, ಭೂಷಣ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಹೇಂದ್ರ ಸಿಂಹ ಕ್ಯಾಮರಾ ಹಿಡಿದಿದ್ದಾರೆ. ಸುರೇಶ್ ಆರ್ಮುಗಂ ಎಡಿಟಿಂಗ್, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಫೈಟ್ ಕಂಪೋಸ್ ಮಾಡಿದ್ದು, ನವೀನ್ ಆರ್ಟ್ ಡೈರೆಕ್ಷನ್ ಸಿನಿಮಾಗಿದೆ.


Click it and Unblock the Notifications











