ಕಾಮಿಡಿ ಸ್ಟಾರ್ ಧರ್ಮಣ್ಣ ಡ್ಯುಯೇಟ್‌ಗೆ ಅಭಿಷೇಕ್ ಅಂಬರೀಷ್ ಫಿದಾ: ಹೇಗಿದೆ ನೋಡಿ 'ರಾಜಯೋಗ'?
ಕನ್ನಡದ ಹಲವು ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ ಧರ್ಮಣ್ಣ ಕಡೂರು ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗ ತಮ್ಮ ವೃತ್ತಿ ಬದುಕಿನ ಮತ್ತೊಂದು ಹಂತಕ್ಕೆ ಏರಿದ್ದು, 'ರಾಜಯೋಗ' ಸಿನಿಮಾ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಇಲ್ಲಿವರೆಗೂ ಕಾಮಿಡಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಧರ್ಮಣ್ಣ ಹೀರೊ ಆಗಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಈ ಮೂಲಕ ಅವರ ವೃತ್ತಿ ಬದುಕಿನಲ್ಲಿ ರಾಜಯೋಗ ಆರಂಭ ಆಗುತ್ತಾ? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

'ರಾಜಯೋಗ' ಸಿನಿಮಾದ ಟ್ರೈಲರ್ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ರಾಜಯೋಗ' ಇದೊಂದು ಪಕ್ಕಾ ಫ್ಯಾಮಿಲಿ ಎಂಟಟೈನರ್ ಸಿನಿಮಾ. ಟ್ರೈಲರ್ ಸದ್ದು ಮಾಡಿದ ಬಳಿಕ 'ರಾಜಯೋಗ' ಸಿನಿಮಾದಿಂದ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಅಂದ್ಹಾಗೆ ಇದೊಂದು ರೊಮ್ಯಾಂಟಿಕ್ ಹಾಡು ಅನ್ನೋದು ವಿಶೇಷ.
'ರಾಜಯೋಗ' ಸಿನಿಮಾದ "ಬಿ ಎ ಗಂಡು..." ಅನ್ನೋ ಹಾಡು ಕೇಳುಗಳ ಕಿವಿಗೆ ಖುಷಿಕೊಟ್ಟಿದೆ. ಅಂದ್ಹಾಗೆ ಧರ್ಮಣ್ಣ ನಟಿಸಿದ 'ರಾಜಯೋಗ' ಸಿನಿಮಾದ ಈ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ರಿಲೀಸ್ ಮಾಡಿ ಶುಭಕೋರಿದ್ದಾರೆ. ಧರ್ಮಣ್ಣನ ರೊಮ್ಯಾಂಟಿಕ್ ಹಾಡನ್ನು ನೋಡಿ ಅಭಿಷೇಕ್ ಅಂಬರೀಷ್ ಇಷ್ಟ ಪಟ್ಟಿದ್ದು, ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ನವ ಜೋಡಿಗಳಿಗೆ ಈ ಹಾಡು ಖಂಡಿತಾ ಇಷ್ಟ ಆಗುತ್ತೆ. ಎಲ್ಲರೂ ನೋಡಲೆ ಬೇಕಾದ ಹಾಡು ಎಂದು ಹೇಳಿದ್ದಾರೆ.
'ರಾಜಯೋಗ' ಸಿನಿಮಾವನ್ನು ಲಿಂಗರಾಜ ಉಚ್ಚಂಗಿ ದುರ್ಗ ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಎಸ್ ರಿಷಬ್ ಟ್ಯೂನ್ ಹಾಕಿರೋ ಹಾಡು ಸದ್ಯ ರಿಲೀಸ್ ಆಗಿದೆ. 'ಬಿ ಎಂ ಗಂಡು...' ಎಂಬ ಹಾಡಿಗೆ ಸ್ವತ: ನಿರ್ದೇಶಕ ಲಿಂಗರಾಜು ಅವರೇ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಹಾಡಿರೋದು ವಿಶೇಷ.

'ರಾಜಯೋಗ' ನಿರ್ದೇಶಕ ಲಿಂಗರಾಜುಗೆ ಮೊದಲ ಸಿನಿಮಾ. ಈ ಹಿಂದೆ ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವ ಲಿಂಗರಾಜು ಅವರಿಗಿದೆ. ಈಗಾಗಿ 'ರಾಜಯೋಗ' ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಇನ್ನೂ ಬಹುತೇಕ ಹೊಸಬರೇ ಸೇರಿ ನಿರ್ಮಾಣ ಮಾಡಿರುವ ಸಿನಿಮಾವಿದು. ಧರ್ಮಣ್ಣ ಜೊತೆ ನಟಿಸಿದ ಬಹುತೇಕ ನಟರೆಲ್ಲರೂ ಹೊಸಬರೇ. ಧರ್ಮಣ್ಣನಿಗೆ ನಾಯಕಿಯಾಗಿ ನಿರೀಕ್ಷಾ ರಾವ್ ನಟಿಸಿದ್ದಾರೆ.
'ರಾಜಯೋಗ' ಸಿನಿಮಾಗೆ ಕುಮಾರ ಕಂಠೀರವ ಬಂಡವಾಳ ಹೂಡಿದ್ದರೆ, ಧರ್ಮಣ್ಣ ನಟನೆ ಜೊತೆಗೆ ಸಹ ನಿರ್ಮಾಪಕರಾಗಿಯೂ ಸಾಹಸಕ್ಕೆ ಇಳಿಸಿದ್ದಾರೆ. ಇನ್ನೂ ಉಳಿದಂತೆ ದೀಕ್ಷಿತ್ ಕೃಷ್ಣ, ಪ್ರಭು, ಲಿಂಗರಾಜು, ನೀರಜ್ ಗೌಡ ಕೂಡ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. 'ರಾಜಯೋಗ' ಸಿನಿಮಾ ಮುಂದಿನ ತಿಂಗಳು ಮೊದಲ ವಾರದಲ್ಲಿ ತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.


Click it and Unblock the Notifications











