ಮಳೆಯಲಿ, ಚಳಿಯಲಿ ಟ್ರೆಂಡ್ ಆಗ್ತಿವೆ ಗೋಲ್ಡನ್ ಸ್ಟಾರ್ ಸಾಂಗ್ಸ್; 'ಮುಂಗಾರು ಮಳೆ' ಜಮಾನ ಮತ್ತೆ ಬರುತ್ತಾ?
ಒಂದು ಕಾಲವಿತ್ತು. ಕನ್ನಡ ಸಿನಿಮಾಗಳಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಸಿನಿಪ್ರಿಯರಿಗೆ ಸಿನಿಮಾ ಟ್ರೈಲರ್, ಟೀಸರ್ ಮುಖ್ಯ ಆಗುತ್ತಲೇ ಇರಲಿಲ್ಲ. ಸಿನಿಮಾದ ಹಾಡುಗಳು ಚೆನ್ನಾಗಿರಬೇಕಷ್ಟೇ. ಬಿಡುಗಡೆಗೂ ಮುನ್ನ ಹಾಡುಗಳು ಹಿಟ್ ಲಿಸ್ಟ್ ಸೇರಿವೆ ಅಂದರೆ ಮುಗೀತು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡೋದು ಗ್ಯಾರಂಟಿ. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದ ಹಾಡುಗಳು ಆ ಮಟ್ಟಿಗೆ ಸದ್ದು ಮಾಡುತ್ತಿದ್ದವು.
ಹಾಡುಗಳ ವಿಚಾರದಲ್ಲಿ 'ಮುಂಗಾರು ಮಳೆ' ಸಿನಿಮಾ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಅಂದಿನಿಂದ ಗಣೇಶ್ ಸಿನಿಮಾದ ಹಾಡುಗಳ ಮೇಲೆ ನಿರೀಕ್ಷೆ ಇದ್ದೇ ಇರುತ್ತೆ. ಗೋಲ್ಡನ್ ಸ್ಟಾರ್ ಸಿನಿಮಾ ಹಾಡುಗಳು ಅಂದ ಕೂಡಲೇ 'ಗಾಳಿಪಟ', 'ಚೆಲುವಿನ ಚಿತ್ತಾರ', 'ಅರಮನೆ', 'ಮಳೆಯಲಿ ಜೊತೆಯಲಿ', 'ಮುಗುಳು ನಗೆ' ಅಂತಹ ಸಿನಿಮಾಗಳು ನೆನಪಿಗೆ ಬರುತ್ತವೆ.

ಆದರೆ, ಇತ್ತೀಚೆಗೆ ಗಣೇಶ್ ನಟಿಸಿದ ಕೆಲವು ಸಿನಿಮಾಗಳಲ್ಲಿ ಮ್ಯೂಸಿಕ್ ಅನ್ನೋ ಫ್ಲೇವರ್ ಮಿಸ್ ಆಗಿತ್ತು. ಸಂಗೀತ ಪ್ರಿಯರಂತೂ ಗಣೇಶ್ ಸಿನಿಮಾದ ಹಾಡುಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಲವ್ ಸ್ಟೋರಿ, ಟಿಪಿಕಲ್ ಗಣೇಶ್ ಡೈಲಾಗ್‌ಗಳ ಜೊತೆ ಗುನುಗುವ ಹಾಡುಗಳು ಸಿಕ್ಕಿದರೆ ಸಿನಿಮಾ ಪ್ರೇಮಿಗಳು ದಿಲ್ ಖುಷ್ ಆಗುತ್ತಿದ್ದರು. ಆದ್ರೀಗ ಮತ್ತೆ ಗಣೇಶ್ ವೃತ್ತಿ ಬದುಕಿನಲ್ಲಿ ಅಂತಹದ್ದೇ ಸಿನಿಮಾವೊಂದು ಬಂದಿದೆ. ಅದುವೇ 'ಕೃಷ್ಣಂ ಪ್ರಣಯ ಸಖಿ'.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 41ನೇ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಈ ಸಿನಿಮಾವೀಗ ರಿಲೀಸ್‌ಗೆ ತುದಿಗಾಲಲ್ಲಿ ನಿಂತಿದೆ. ಆದರೆ, ಅದಕ್ಕೂ ಮುನ್ನ ಸಿನಿಮಾಗಳನ್ನು ಚಿತ್ರತಂಡ ಒಂದೊಂದಾಗಿಯೇ ರಿಲೀಸ್ ಮಾಡುತ್ತಿದೆ. ಈಗಾಗಲೇ ಆ ಹಾಡುಗಳು ಸಂಗೀತ ಪ್ರಿಯರ ಕಿವಿಗೆ ಇಂಪು ಕೊಡುವುದಕ್ಕೆ ಶುರು ಮಾಡಿವೆ. ಇತ್ತೀಚೆಗಷ್ಟೇ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. "ದ್ವಾಪರ" ಅನ್ನೋ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಅರ್ಜುನ್ ಜನ್ಯ ಗಮನ ಸೆಳೆದಿದ್ದ ಜಸ್ಕರಣ್ ಸಿಂಗ್ ಸುಮಧುರವಾಗಿ ಹಾಡಿದ್ದರೆ, ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಈ ಹಾಡು ರಿಲೀಸ್ ಆದ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಮಂದಿ ಹಾಡುಗಳನ್ನು ವೀಕ್ಷಿಸಿದ್ದಾರೆ. ಸದ್ಯ ಈ ಹಾಡು ಟಾಪ್ 5 ಟ್ರೆಂಡಿಂಗ್‌ನಲ್ಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಾಲ್ವಿಕಾ ನಾಯರ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಮತ್ತೊಂದು ಹಾಡು "ಚಿನ್ನಮ್ಮ" ಕೂಡ ಟ್ರೆಂಡಿಂಗ್‌ನಲ್ಲಿದೆ. ಕೈಲಾಶ್ ಕೇರ್ ಹಾಡಿರುವ ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಸುಮಾರು 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಗಣೇಶ್ ಫ್ಯಾನ್‌ಗೆ ಈ ಹಾಡುಗಳು ಸಖತ್ ಕಿಕ್ ಕೊಡುವುದಕ್ಕೆ ಶುರು ಮಾಡಿವೆ. ಹೀಗಾಗಿ ಹಾಡುಗಳು ಕೇಳಿ ಕಾಮೆಂಟ್ ಮಾಡುವುದಕ್ಕೆ ಶುರುಮಾಡಿದ್ದಾರೆ.
"ಎವರ್‌ಗ್ರೀನ್ ಸಾಂಗ್ ಎಷ್ಟು ಸಾರಿ ನೋಡಿದ್ರು, ಕೇಳಿದ್ರು ಮತ್ತೆ ಮತ್ತೆ ಈ ಸಾಂಗ್ ಕೇಳ್ಬೇಕು ಅನ್ಸುತ್ತೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇ ಇನ್ನೊಬ್ಬರು "ಅಬ್ಬಾ ಎಂಥಾ ಅದ್ಭುತ ಸಾಹಿತ್ಯ. ಸುಮಾರು ದಿನಗಳ ನಂತರ ಅಪ್ಪಟ ಕನ್ನಡದ ಪದಗಳು ಕೇಳಿದಂತಾಯಿತು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಬಹಳ ದಿನಗಳ ನಂತರ ಒಂದೊಳ್ಳೆ ಸೂಪರ್ ಹಿಟ್ ಸಾಂಗ್ ಕೇಳಿದೆ", "ಪಕ್ಕ ನೋಡ್ತಿನಿ ಗುರು ಈ ಮೂವಿನ ಈ ಹಾಡಿಗೋಸ್ಕರ ಆದ್ರೂ", "ಕಿವಿಗೆ ಇಂಪು ಮನಕ್ಕೆ ತಂಪು ಕೊಡೊ ಹಾಡು ಚೆನ್ನಾಗಿದೆ" ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











