'ಇಂಡಿಯನ್-2' ಸಿನಿಮಾದ ಭರ್ಜರಿ ಪ್ರಚಾರ ಆರಂಭ; ಹೇಗಿದೆ ಸಿದ್ಧಾರ್ಥ್,ರಾಕುಲ್ ರೊಮ್ಯಾಂಟಿಕ್ ಸಾಂಗ್?
ದಕ್ಷಿಣ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಇಂಡಿಯನ್ 2' ಭರ್ಜರಿ ಪ್ರಚಾರ ಆರಂಭ ಆಗಿದೆ. ಕಮಲ್ ಹಾಸನ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಸಿನಿಮಾ ಪ್ರಚಾರ ಆರಂಭಿಸಿರುವ 'ಇಂಡಿಯನ್ 2' ಮತ್ತೊಂದು ಹಾಡನ್ನು ರಿಲೀಸ್ ಮಾಡಿದೆ.
'ಇಂಡಿಯನ್ 2' ಸಿನಿಮಾದ ಟೀಸರ್ ಹಾಗೂ ಸೌರ ಅನ್ನೋ ಹಾಡೊಂದು ಬಿಡುಗಡೆಯಾಗಿತ್ತು. ಈಗ ನಿರ್ದೇಶಕ ಶಂಕರ್ ಎರಡನೇ ಹಾಡನ್ನು ರಿಲೀಸ್ ಮಾಡಿದ್ದಾರೆ. 'ಬೊಮ್ಮರಿಲ್ಲು' ನಟ ಸಿದ್ಧಾರ್ಥ್ ಹಾಗೂ ರಕುಲ್ ಪ್ರೀತ್ ಸಿಂಗ್ ಕಾಂಬಿನೇಷನ್‌ನಲ್ಲಿ ಈ ಹಾಡು ರಿಲೀಸ್ ಆಗಿದೆ. ಇದರೊಂದು ಲವ್ ಸಾಂಗ್ ಆಗಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ.

ಅನಿರುದ್ಧ ರವಿಚಂದರ್ ಟ್ಯೂನ್ ಹಾಕಿರುವ ಈ ಹಾಡು ಈಗಾಗಲೇ ಸದ್ದು ಮಾಡುತ್ತಿದೆ. ಅಂದ್ಹಾಗೆ, ರಾಮ ಜೋಗಯ್ಯಶಾಸ್ತ್ರಿ ತೆಲುಗು ವರ್ಷನ್‌ಗೆ ಸಾಹಿತ್ಯ ಬರೆದಿದ್ದಾರೆ. ಹಾಗೇ ತಾಮರೈ ತಮಿಳು ವರ್ಷನ್‌ಗೆ ಸಾಹಿತ್ಯ ರಚಿಸಿದ್ದಾರೆ. ಸದ್ಯ ಯೂಟ್ಯೂಬ್‌ನಲ್ಲಿ ಈ ಹಾಡು ಮೋಡಿ ಮಾಡುವುದಕ್ಕೆ ಶುರು ಮಾಡಿದೆ.
ಕಮಲ್ ಹಾಸನ್ ನಟನೆಯ 'ಇಂಡಿಯನ್ 2' 1996ರ ತೆರೆಕಂಡು ಸದ್ದು ಮಾಡಿದ್ದ 'ಇಂಡಿಯನ್' ಸಿನಿಮಾದ ಎರಡನೇ ಭಾಗ. 90ರ ದಶಕದಲ್ಲಿ ಈ ಸಿನಿಮಾ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಕಮಲ್ ಹಾಸನ್ 'ಸೇನಾಪತಿ' ಪಾತ್ರದಲ್ಲಿ ಮಿಂಚಿದ್ದರು. ಆ ಸಿನಿಮಾದ ಮುಂದುವರೆದ 'ಇಂಡಿಯನ್ 2' ಸಿನಿಮಾ ನಿರ್ಮಾಣ ಆಗಿದ್ದು ಈ ಬಿಡುಗಡೆಗೆ ಸಜ್ಜಾಗಿದೆ.
'ಇಂಡಿಯನ್ 2' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಮತ್ತೆ ಅದೇ ಹಳೆಯ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಇನ್ನು ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ದಾರ್ಥ್, ಎಸ್ ಜೆ ಸೂರ್ಯ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಂ, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಕಣಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ, ವೆನ್ನೆಲಾ ಕಿಶೋರ್, ಮತ್ತು ದೀಪಾ ಶಂಕರ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.
ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ದೇಶಕ ಶಂಕರ್ 'ಇಂಡಿಯನ್ 2' ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಒಡೆತನದ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಈ ಸಿನಿಮಾಗೆ ರವಿವರ್ಮನ್ ಹಾಗೂ ರತ್ನವೇಲು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಎಡಿಟಿಂಗ್ ಮಾಡಿದ್ದಾರೆ. ಸದ್ಯ ಸಿದ್ಧಾರ್ಥ್ ಹಾಗೂ ರಕುಲ್ ಪ್ರೀತ್ ಸಿಂಗ್ ಜೋಡಿಯ ಹಾಡು ಬಿಡುಗಡೆಯಾಗಿದ್ದು, ಮೋಡಿ ಮಾಡುತ್ತಿದೆ.


Click it and Unblock the Notifications











