All Ok Vs Rahul: "ನಾಳೆ ತಲೆ ಕೆಟ್ಟು, ಮೂರೂ ಬಿಟ್ಟು ನಿಂತ್ಕೊಂಡ್ರೆ.. ನೀವು ಚಿಕ್ಕವರಾಗ್ತೀರಾ"–ಆಲ್ ಓಕೆ ಎಚ್ಚರಿಕೆ
ಕನ್ನಡದಲ್ಲಿ ರ್‍ಯಾಪ್ ಮ್ಯೂಸಿಕ್ ವೇಗವಾಗಿ ಜನಪ್ರಿಯತೆ ಪಡೆಯುತ್ತಿದೆ. ಯುವಕ,ಯುವತಿಯರಿಗೆ ರ್‍ಯಾಪ್ ಮ್ಯೂಸಿಕ್ ಕಿಕ್ ಕೊಡುತ್ತಿದೆ. ಕನ್ನಡದಲ್ಲಿ ಚಂದನ್ ಶೆಟ್ಟಿ, ಆಲ್ ಓಕೆ, ರಾಹುಲ್ ಡಿಟೋ, ರಾಕೇಶ್ ಅಡಿಗ, ಎಂಸಿ ಬಿಜ್ಜು ಸೇರಿದಂತೆ ಹಲವು ಹೆಸರುಗಳು ಜನಪ್ರಿಯವಾಗಿದೆ.
ಕೆಲವು ದಿನಗಳ ಹಿಂದಷ್ಟೇ ರ್‍ಯಾಪರ್ ರಾಹುಲ್ ಡಿಟೊ ಇತ್ತೀಚೆಗೆ ಒಂದು ಹಾಡನ್ನು ಹೊರತಂದಿದ್ದರು. ಅದುವೇ 'ನಂಗನ್ಸಿದ್ದು ಪಾರ್ಟ್ 2'. ಈ ಹಾಡಿನಲ್ಲಿ ಆಲ್ ಓಕೆ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಚಂದನ್ ಶೆಟ್ಟಿ ಜೊತೆಗೆ ಮೈನಸ್ಸಿನಿಂದ ಹಿಡಿದು, ಹಣ ನೋಡಿವಲ್ಲಿ ಮೋಸ ಮಾಡಿರೋ ಬಗ್ಗೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು.

ಇದಕ್ಕೆ ಆಲ್ ಓಕೆ ಕೂಡ ಹಾಡಿನ ಮೂಲಕವೇ ತಿರುಗೇಟು ನೀಡಿದ್ದರು. ಆದರೆ, ಎಲ್ಲೂ ಬಹಿರಂಗವಾಗಿಯೇ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಈಗ ಫಿಲ್ಮ್ ಕಾಂಪನಿಯನ್ ಜೊತೆಗಿನ ಸಂದರ್ಶನದಲ್ಲಿ ಆಲ್ ಓಕೆ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಅದರ ಕೆಲವು ಝಲಕ್ ಇಲ್ಲಿದೆ.
"ಆಕಾಶ ನೋಡುವುದಕ್ಕೆ ನೂಕುನುಗ್ಗಲು ಯಾಕೆ?"
ರ್‍ಯಾಪ್ ಮ್ಯೂಸಿಕ್ ಹೆಚ್ಚು ಕಡಿಮೆ ಒಂದೂವರೆ ದಶಕದಿಂದ ಸಂಗೀತ ಪ್ರಿಯರನ್ನು ರಂಜಿಸುತ್ತಿದೆ. ಕೆಲವೇ ಕೆಲವು ಆರ್ಟಿಸ್ಟ್‌ಗಳು ಜನಪ್ರಿಯರಾಗಿದ್ದಾರೆ. ಆದರೆ, ಇವರ ಮಧ್ಯೆನೇ ನೂರೆಂಟು ಕಿತ್ತಾಟಗಳು. ಅವರು ಮಾಡಿದ್ದು ಸರಿಯಿಲ್ಲ. ಇವರು ಮಾಡಿದ್ದೇ ಸರಿ ಅನ್ನೋ ಧೋರಣೆಯಿದೆ. ಇನ್ನೊಂದ್ಕಡೆ ಒಬ್ಬರ ನಡುವೆ ಮತ್ತೊಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಆಲ್ ಓಕೆ ರಿಯಾಕ್ಷನ್ ಹೀಗಿದೆ.
"ರ್‍ಯಾಪ್ ಮ್ಯೂಸಿಕ್ ಮಾಡಿ. ನಿಮಗೆ ತಿಳಿದಂತೆ ಮಾಡಿಕೊಂಡು ಹೋಗಿ ತಪ್ಪಿಲ್ಲ. ನೀವು ಮಾಡುವುದೇ ಸರಿ ಅಂತ ಹೇಳುವುದು ತಪ್ಪು. ಬೇರೆಯವರು ಮಾಡುವುದು ತಪ್ಪು ಅಂತ ಅದ್ಹೇಗೆ ಹೇಳ್ತೀರಾ? ಆಕಾಶ ನೋಡುವುದಕ್ಕೆ ನೂಕುನುಗ್ಗಲು ಯಾಕೆ? ಎಲ್ಲರನ್ನೂ ಗುಡ್ಡೆ ಹಾಕೊಂಡು ಯಾಕೆ ಆಕಾಶ ನೋಡುತ್ತೀರ. ದೊಡ್ಡದಾಗಿದೆ ಹೋಗಿ. ನಾವು ಆಕಾಶ ನೋಡಬೇಕು ಅಂತಿದ್ರೆ, ನಾವು ಇನ್ನೊಬ್ಬರ ತಲೆ ಮೇಲೆ ಕಾಲಿಟ್ಟೇ ನೋಡಬೇಕು ಅಂತಿಲ್ಲ. ಮೆಟ್ಟಿಲು, ಏಣಿಗಳು ಇರುತ್ತವೆ. ಅವರದ್ದೇ ಆದಂತಹ ರೀತಿಯಲ್ಲಿ ಬಂದು ಆಕಾಶ ನೋಡಬಹುದು." ಎಂದು ಆಲ್ ಓಕೆ ಹೇಳುತ್ತಿದ್ದಾರೆ.
'ಮೂರು ಬಿಟ್ಟು ನಿಂತ್ಕೊಂಡ್ರೆ, ಚಿಕ್ಕವರಾಗುತ್ತೀರ"
ಓಲ್ ಓಕೆ ಎಲ್ಲೂ ರಾಹುಲ್ ಡಿಟೊ ಹೆಸರು ತೆಗೆದಿಲ್ಲ. ಹೆಸರೇ ಹೇಳದೆ ಟಾಂಗ್ ಕೊಡುವವರಿಗೆ ಮಾತುಗಳಲ್ಲೇ ತಿವಿದಿದ್ದಾರೆ. "ಏನನ್ನೋ ಮಾಡೋದಕ್ಕೆ ಒಬ್ಬರನ್ನು ಕೆಳಗೆ ಹಾಕಬೇಕು. ಇಲ್ಲಾ ಅವರಿಗೆ ಕಿಂಡಲ್ ಕೊಡಬೇಕು. ಆವಾಗ ನಾನು ದೊಡ್ಡವನಾಗುತ್ತೇನೆ ಅನ್ನೋ ಭ್ರಮೆಯಲ್ಲಿ ತುಂಬಾ ಜನ ಇದ್ದಾರೆ. ಇವೆಲ್ಲವನ್ನೂ ಬಿಟ್ಟೂ ತುಂಬಾನೇ ಬೇರೆ ಬೇರೆ ಕಂಟೆಂಡ್ ಇದೆ. ಅದನ್ನು ಟ್ರೈ ಮಾಡಿ. ನೀವು ಕಿಲಾಡಿ ಆಗಬೇಕು ಅಂತ ಪಟ್ಟದಲ್ಲಿದ್ದವರನ್ನು ಚಿಕ್ಕವರನ್ನಾಗಿ ಮಾಡಬೇಡಿ. ಯಾಕಂದ್ರೆ, ಮರಕ್ಕಿಂತ ಮರ ಯಾವತ್ತೂ ದೊಡ್ಡದಿರುತ್ತೆ.ನೀವು ಯಾರೋ ಒಬ್ಬನನ್ನು ಚಿಕ್ಕವನ್ನಾಗಿ ಮಾಡುತ್ತಿದ್ದೀರ. ನಾಳೆ ಅವನು ತಲೆ ಕೆಟ್ಟು, ಮೂರು ಬಿಟ್ಟು ನಿಂತ್ಕೊಂಡ್ರೆ, ನೀವು ತುಂಬಾ ಚಿಕ್ಕವರಾಗಿ ಕಾಣಿಸ್ತೀರ." ಎಂದು ಆಲ್ ಓಕೆ ಟಾಂಗ್ ಕೊಟ್ಟಿದ್ದಾರೆ.
"ಚೆನ್ನಾಗಿ ಚಿತ್ರಾನ್ನ ತಿಂದ್ಬಿಟ್ರು. ಬಿರಿಯಾನಿ ಅಲ್ಲ ಚಿತ್ರಾನ್ನ ತಿಂದ್ಬಿಟ್ರು. ಹೊಟ್ಟೆ ತುಂಬಿಸಿಕೊಂಡು ಚೆನ್ನಾಗಿರಲಿಲ್ಲ.. ಉಪ್ಪು ಇರಲಿಲ್ಲ.. ಖಾರ ಇರಲಿಲ್ಲ ಅಂದ್ರೆ ಹೇಗೆ? ಅದಕ್ಕೆ ಉತ್ತರ ಏನಂಥ ಕೊಡುವುದಕ್ಕೆ ಆಗುತ್ತೆ ಹೇಳಿ. ಬಡಿಸೋದಷ್ಟೇ ನಮಗೆ ಗೊತ್ತು. ನಮ್ಮ ಬಳಿ ಇದ್ದಿದ್ದು ಚಿತ್ರಾನ್ನ ಅಷ್ಟೇ." ಅಂತಾರೆ ಆಲ್ ಓಕೆ.
"ನಾನ್ ಕನ್ನಡಿಗ ಅಂತ ಒಂದು ಸಾಂಗ್ ಮಾಡುತ್ತಾರೆ. ಅದು ನನ್ನಿಂದ ಹಿಟ್ ಆಯ್ತು ಅಂತ ಹೇಳುತ್ತಾರೆ. ಮತ್ತೆ ಮಾಡಬೇಕಾಗಿತ್ತು ನೀವು. ಅದನ್ನು ಪ್ರಡ್ಯೂಸ್ ಮಾಡುವುದಕ್ಕೆ ಕಾದು, ಮೂರು ಮೂರು ತಿಂಗಳು ಹಿಂದೆ ಬಿದ್ದು, ಯಾಕೆ ಅದೆಲ್ಲಾ ಆಯ್ತು. ಹಿಟ್ ಆದ್ಮೇಲಿಂದ ಸ್ಟೋರಿನೇ ಚೇಂಜ್. ನಿಮಗೆ ಎಲ್ಲಾ ಗೊತ್ತಲ್ಲ ಮಾಡಬೇಕಿತ್ತು. ಯಾಕೆ ಮಾಡಲಿಲ್ಲ." ಎಂದು ಆಲ್ ಓಕೆ ಪ್ರಶ್ನೆ ಮಾಡಿದ್ದಾರೆ.
"ಅಪ್ಪು ಸರ್‌ಗೆ ರ್‍ಯಾಪ್ ಇಷ್ಟವಿರಲಿಲ್ಲ"
ಕನ್ನಡ ರ್‍ಯಾಪ್ ಮ್ಯೂಸಿಕ್ ಇಂಡಸ್ಟ್ರಿ ಈಗ ಬೆಳೆಯುತ್ತಿದೆ. ಟಾಲಿವುಡ್ ಸೂಪರ್‌ಸ್ಟಾರ್‌ಗಳು ತಮ್ಮ ಸಿನಿಮಾದಲ್ಲಿ ಪಂಜಾಬಿ ಹಾಡನ್ನು ಪ್ರಮೋಟ್ ಮಾಡುತ್ತಾರೆ. ಅದು ಕನ್ನಡದಲ್ಲಿ ಆಗಬೇಕು ಎಂದಿದ್ದಾರೆ. ಅಲ್ಲದೆ ಇದೇ ವೇಳೆ ಅಪ್ಪುಗೆ ರ್‍ಯಾಪ್ ಮ್ಯೂಸಿಕ್ ಇಷ್ಟವಿರಲಿಲ್ಲ ಎಂದೂ ಹೇಳಿದ್ದಾರೆ.
"ಗುಡ್ ನೈಟ್ ಮಾಡಿದ್ದು ಅಪ್ಪು ಸರ್‌ಗೋಸ್ಕರ. ಅವರು ಹೋದ್ಮೇಲೆ ತುಂಬಾ ಟೈಮ್ ತೆಗೆದುಕೊಂಡು ಮಾಡಿದ ಸಾಂಗ್ ಅದು. ತಕ್ಷಣಕ್ಕೆ ಮಾಡೋಕೆ ಆಗಿಲ್ಲ ಅದು. ಯಾಕಂದ್ರೆ, ಆ ಯೋಚನೆ ಬರಲಿಲ್ಲ. ಅಪ್ಪು ಸರ್ ನನ್ನ ಪ್ರತಿ ಹಾಡನ್ನು ಕೇಳೋರು. ಪ್ರತಿ ಸಾಂಗ್‌ಗೂ ಅವರು ನಿಜವಾದ ಫೀಡ್‌ಬ್ಯಾಕ್ ಕೊಡೋರು. ಅವರಿಗೆ ರಾಪ್ ಮ್ಯೂಸಿಕ್ ಇಷ್ಟ ಇರಲಿಲ್ಲ. ಇದು ತುಂಬಾ ಜನಕ್ಕೆ ಗೊತ್ತಿಲ್ಲ. ಪುನೀತ್ ರಾಜ್‌ಕುಮಾರ್ ಅವರಿಗೆ ಗಜಿಬಿಜಿ ಗಲಾಟೆಗಳು ಇಷ್ಟಾನೇ ಇರಲಿಲ್ಲ." ಎಂದು ಆಲ್ ಓಕೆ ರಿವೀಲ್ ಮಾಡಿದ್ದಾರೆ.


Click it and Unblock the Notifications











