"ಯಾವ ಹೀರೋಗಳು ಹಾಡಿನ ವಿಷಯಕ್ಕೆ ನನ್ನ ಜೊತೆ ಕೂತು ಮಾತಾಡಿರುವ ಚರಿತ್ರೆನೇ ಇಲ್ಲ"; ಡಾ. ನಾಗೇಂದ್ರ ಪ್ರಸಾದ್
ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ಸಿನಿ ಸಾಹಿತಿಗಳಲ್ಲಿ ಡಾ.ನಾಗೇಂದ್ರ ಪ್ರಸಾದ್ ಕೂಡ ಒಬ್ಬರು. ಬಿಡುವಿಲ್ಲದೆ ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಹಾಡುಗಳನ್ನು ಬರೆಯುತ್ತಲೇ ಇದ್ದಾರೆ. ಇತ್ತೀಚೆಗೆ ತೆರೆಕಂಡ 'ಕೃಷ್ಣ ಪ್ರಣಯ ಸಖಿ'ಯ ಸೂಪರ್ ಹಿಟ್ ಸಾಂಗ್ "ದ್ವಾಪರ.." ಹಾಡಿಗೆ ಸಾಹಿತ್ಯ ಬರೆದಿದ್ದು ಕೂಡ ಅವರೇ. ಇಂತಹ ಸಾವಿರಾರು ಸೂಪರ್‌ಹಿಟ್ ಸಾಂಗ್‌ಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿರುವ ಕೆಲವೇ ಬಹುಬೇಡಿಕೆಯ ಸಾಹಿತಿಗಳಿದ್ದಾರೆ. ಹಂಸಲೇಖ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿದವರ ಪೈಕಿ ನಾಗೇಂದ್ರ ಪ್ರಸಾದ್ ಕೂಡ ಸೇರಿಕೊಳ್ಳುತ್ತಾರೆ. ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಮಾಸ್ ಇಂಟ್ರುಡಕ್ಷನ್ ಸಾಂಗ್ ಬೇಕು ಅಂದರೆ, ನಿರ್ದೇಶಕರ ಮೊದಲ ಆಯ್ಕೆ ಡಾ.ನಾಗೇಂದ್ರ ಪ್ರಸಾದ್.

ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ನಾಗೇಂದ್ರ ಪ್ರಸಾದ್ ಅವರು ಮಾಸ್ ಇಂಟ್ರುಡಕ್ಷನ್ ಸಾಂಗ್ ಅನ್ನು ಬರೆದಿದ್ದಾರೆ. ಹಾಗಿದ್ದರೆ, ನಾಗೇಂದ್ರ ಪ್ರಸಾದ್ ಹೀರೋಗಳಿಗೆ ಹಾಡುಗಳನ್ನು ಬರೆಯುವಾಗ ಸೂಪರ್‌ಸ್ಟಾರ್‌ಗಳು ಜೊತೆಯಲ್ಲಿ ಇರುತ್ತಾರಾ? ಅವರು ಹೇಳಿದಂತೆ ಸಾಹಿತ್ಯ ರಚಿಸುತ್ತಾರಾ? ಸಾಹಿತ್ಯವನ್ನು ಹೇಗೆ ರಚಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಸ್ವತ: ನಾಗೇಂದ್ರ ಪ್ರಸಾದ್ ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.
"ನಂಬಿಕೆ ಇಟ್ಟುಕೊಂಡು ಬರುತ್ತಾರೆ"
"ಅವರವರ ನಂಬಿಕೆಗಳು. ಕೆಲವರು ಬರುತ್ತಾರೆ. ಸರ್ ಹೀರೋ ಇಂಟ್ರುಡಕ್ಷನ್ ಸಾಂಗ್ ನೀವೇ ಬರೀಬೇಕು ಅಂತ ಬರುತ್ತಾರೆ. ಇನ್ನು ಕೆಲವರು ಲವ್ ಸಾಂಗ್ ನೀವೇ ಬರೀಬೇಕು. ಮದರ್ ಸೆಂಟಿಮೆಂಟ್ ನೀವೇ ಬರೀಬೇಕು. ಫಾದರ್ ಸೆಂಟಿಮೆಂಟ್ ಬರೀಕು ಅಂತ ಬರುತ್ತಾರೆ. ಹೀಗೆ ಅವರವರ ನೆಲೆಗಟ್ಟಿನಲ್ಲಿ ಯೋಚನೆ ಮಾಡುತ್ತಾರೆ. ಬೆಳಗ್ಗೆ ಒಬ್ಬರು ಬರುತ್ತಾರೆ. ಸುದೀಪ್ ಅವರದ್ದು, ಪುನೀತ್ ರಾಜ್‌ಕುಮಾರ್ ಅವರದ್ದು, ದರ್ಶನ್ ಅವರದ್ದು ಒಂದಿಷ್ಟು ತಗೊಡು ಬಂದು ನಾನು ಬರೆದಿರೋ ಒಂದಿಷ್ಟು ಹಾಡುಗಳನ್ನು ಹೇಳುತ್ತಾರೆ. ಅವರ ತಲೆಯಲ್ಲಿ ಏನಂದರೆ, ಹೀರೋ ಇಂಟ್ರುಡಕ್ಷನ್ ಸಾಂಗ್ ಹೀಗೆ ಮಾಡಿಕೊಡುತ್ತೇನೆ ಅಂತ. ಮಧ್ಯಾಹ್ನ ಇನ್ನೊಬ್ಬರು ಬಂದು ಇನ್ನೊಂದಿಷ್ಟು ಲವ್ ಸಾಂಗ್ ಬರೆದು ಕೊಡಿ ಅಂತಾರೆ." ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
"ಆ ಹೀರೋ ನನ್ನ ಹೀರೋ"
"ನಾನು ಒಂದು ಸಿನಿಮಾಗೆ ಹಾಡು ಅಂತ ಬರೆಯ ಬೇಕಾದರೆ, ಆ ಹೀರೋ ನನ್ನ ಹೀರೋ. ನನ್ನ ಹೀರೋನ ಎಷ್ಟು ಚೆನ್ನಾಗಿ ಪ್ರೊಜೆಕ್ಟ್ ಮಾಡಬೇಕು, ಪ್ರೆಸೆಂಟ್ ಮಾಡಬೇಕು ಅನ್ನೋದು ಇರುತ್ತೆ. ಯಾಕಂದ್ರೆ ಆ ಹಾಡಿಗೆ ನಾನು ನ್ಯಾಯ ವದಗಿಸಬೇಕು ಅಂತ ಯೋಚನೆ ಮಾಡುತ್ತೇನೆ ಹೊರತು. ಬೇರೆ ಇನ್ನೇನೂ ಇಲ್ಲ." ಎಂದು ಸೂಪರ್‌ಸ್ಟಾರ್‌ಗಳಿಗೆ ಸಾಹಿತ್ಯ ರಚಿಸುವ ಬಗ್ಗೆ ನಾಗೇಂದ್ರ ಪ್ರಸಾದ್ ಮಾತಾಡಿದ್ದಾರೆ.

"ಯಾವ ಹೀರೋ ಜೊತೆ ಕೂಡ ಸಾಹಿತ್ಯ ರಚಿಸಿಲ್ಲ"
"ಕನ್ನಡ ಚಿತ್ರರಂಗದಲ್ಲಿ ಇವತ್ತಿನ ತನಕ ಯಾವ ಹೀರೋಗಳ ಜೊತೆನೂ ಹಾಡಿನ ವಿಷಯಕ್ಕೆ ನನ್ನ ಜೊತೆ ಕೂತು ಮಾತಾಡಿರುವ ಚರಿತ್ರೆ ಇಲ್ಲ. ನಾನು ಎಲ್ಲಾ ಹೀರೋಗಳನ್ನೂ ಇಷ್ಟ ಪಡುತ್ತೇನೆ. ಒಬ್ಬರ ಪರ್ಫಾಮೆನ್ಸ್ ಕಾರಣಕ್ಕೆ, ಒಬ್ಬರ ನಡತೆಯ ಕಾರಣಕ್ಕೆ, ಹೀಗೆ ಒಂದೊಂದು ಕಾರಣಕ್ಕೆ ಒಬ್ಬೊಬ್ಬರು ಇಷ್ಟ ಆಗುತ್ತಾರೆ. ಇದು ನಾನು ವೈಯಕ್ತಿಕವಾಗಿ ಅವರ ಮೇಲೆ ಇಟ್ಟಿರುವಂತಹ ಅಭಿಮಾನ. ಇದು ಒಂದು ಕಡೆ. ನನಗಿಂತ ಜೂನಿಯರ್ ಹೀರೋಗಳಾಗಲಿ. ಸೀನಿಯರ್ ಹೀರೋಗಳಾಗಲಿ ಎಲ್ಲರ ಮೇಲೂ ನನಗೆ ಇರುವಂತಹ ಪ್ರೀತಿ ಅದು." ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
"ಮಾಧ್ಯಮಗಳು ಗುರುತಿಸಬೇಕು"
"ಸಾಹಿತಿಗಳನ್ನು ಗುರುತಿಸುತ್ತಿದ್ದಾರೆ, ಆತರಹದ್ದು ಆಗುತ್ತಿದೆ ಇಲ್ಲ ಅಂತಲ್ಲ. ಯಾರಲ್ಲ ಮಾಡುತ್ತಿದ್ದಾರೋ ಅವರು ಮಾಡುತ್ತಿಲ್ಲ ಅಂತ ನನ್ನ ಭಾವನೆ. ವಾಹಿನಿಗಳು ಮಾಡಬೇಕು. ಮಾಧ್ಯಮಗಳು ಆ ಕೆಲಸವನ್ನು ಮಾಡಬೇಕು. ಯಾವುದೋ ಕರೋಕೆಯಲ್ಲೋ, ರಾಜ್ಯೋತ್ಸವದಲ್ಲೋ, ಗಣಪತಿ ಕಾರ್ಯಕ್ರಮದ ವೇದಿಕೆಯಲ್ಲೋ ನಾಲ್ಕು ಜನ ಮಾತಾಡೋದಲ್ಲ. ಪ್ರತಿನಿತ್ಯ ಹಾಡುಗಳನ್ನು ಹಾಕುವ ಎಫ್‌ಎಂಗಳು, ಹಾಡುಗಳನ್ನು ಪ್ರಸಾರ ಮಾಡುವ ವಿಜ್ಯೂವಲ್ ಮೀಡಿಯಾಗಳು ಆ ಕೆಲಸ ಮಾಡಬೇಕು ಅಂತ ನಾನು ಹೇಳುತ್ತೇನೆ" ಎಂದು ಸಿನಿ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.


Click it and Unblock the Notifications











