ಸಂಗೀತ ಮಾಂತ್ರಿಕ ಇಳಯರಾಜ ಪುತ್ರಿ ಗಾಯಕಿ ಭವತಾರಿಣಿ ನಿಧನ; ತಮಿಳು ಚಿತ್ರರಂಗಕ್ಕೆ ಆಘಾತ!
ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕ ಇಳಯರಾಜ ಪುತ್ರಿ ಭವತಾರಿಣಿ ಶ್ರೀಲಂಕಾದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಶ್ರೀಲಂಕಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇಳಯರಾಜ ಪುತ್ರಿ ಭವತಾರಿಣಿ ಕೂಡ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಗಾಯಕರಾಗಿ ಹಾಗೂ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇವರ ಹಲವು ಸುಮಧುರ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಇವರ ಕಂಠಸಿರಿಗೆ ಸಂಗೀತ ಪ್ರಿಯರೇ ಮರುಳಾಗಿದ್ದರು. ಇಷ್ಟೇ ಅಲ್ಲದೆ ಕೆಲವು ಸಿನಿಮಾಗಳಿಗೆ ಸಂಗೀತ ಕೂಡ ನೀಡಿದ್ದರು.

ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭವತಾರಿಣಿಗೆ ಆಯುರ್ವೇದ ಚಿಕಿತ್ಸೆ ನೀಡುವುದಕ್ಕೆ ಶ್ರೀಲಂಕಾಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಜನವರಿ 25) ಸಂಜೆ 5.20ಕ್ಕೆ ಇಹಲೋಕ ತ್ಯಜಿಸಿದ್ದಾರೆ. ನಾಳೆ (ಜನವರಿ 26) ಸಂಜೆ ವೇಳೆಗೆ ಅವರ ಪಾರ್ಥೀವ ಶರೀರವನ್ನು ಚೆನ್ನೈಗೆ ಕರೆತರುವ ಬಗ್ಗೆ ವರದಿಯಾಗಿದೆ. ಮೂಲಗಳ ಪ್ರಕಾರ, ಭವತಾರಿಣಿ ಪತಿ ಹೋಟೆಲ್ ಉದ್ಯಮದಲ್ಲಿದ್ದಾರೆ. ಅವರಿಗೆ ಮಕ್ಕಳು ಇರಲಿಲ್ಲ.
ಪುತ್ರಿ ಭವತಾರಿಣಿ ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆನೇ ಇಳಯರಾಜ ಕೂಡ ಅಲ್ಲೇ ಇದ್ದರು. ಅವರಿಗೆ ಶ್ರೀಲಂಕಾದಲ್ಲಿ ಇದೇ ವೀಕೆಂಡ್‌ನಲ್ಲಿ ಸಂಗೀತ ಕಾರ್ಯಕ್ರಮವಿತ್ತು. ಈ ಕಾರಣಕ್ಕಾಗಿ ಶ್ರೀಲಂಕಾಗೆ ಹೋಗಿದ್ದರು. ಅದೇ ವೇಳೆ ಪುತ್ರ ನಿಧನರಾಗಿದ್ದು, ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿ ಹಿಂತಿರುಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇಳಯರಾಜ ಅವರ ಪುತ್ರಿ ಭವತಾರಿಣಿ 1995ರಿಂದ ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕಿಯಾಗಿ ಕೆಲಸ ಮಾಡುತ್ತಿದ್ದರು. 2001ರಲ್ಲಿ ಇಳಯರಾಜ ಸಂಗೀತ ಸಂಯೋಜಿಸಿದ್ದ 'ಭಾರತಿ' ಚಿತ್ರದ "ಮಾಯಿಲ್ ಪೋಲ ಪೊನ್ನು ಒನ್ನು.." ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. ಭವತಾರಿಣಿ ಮಧುರವಾದ ಧ್ವನಿಗೆ ತಮಿಳು ಸಂಗೀತ ಪ್ರಿಯರು ಮರುಳಾಗಿದ್ದರು.
ಭವತಾರಿಣಿ ಸುಮಾರು 24ಕ್ಕೂ ಅಧಿಕ ಸಿನಿಮಾಗಳಿಗೆ ಗಾಯಕಿಯಾಗಿದ್ದಾರೆ. ಹಾಗೇ 10 ಸಿನಿಮಾಗಳಿಗೆ ಸಂಗೀತ ಸಂಯೋಜಕಿಯಾಗಿ ಕೆಲಸ ಮಾಡಿದ್ದಾರೆ. ಹೆಚ್ಚಾಗಿ ತಮಿಳು ಹಾಗೂ ಮಲಯಾಳಂ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಭವತಾರಿಣಿ ಅವರು ಶಬರಿರಾಜ್ ಎಂಬುವವರನ್ನು ವಿವಾಹವಾಗಿದ್ದರು. ಅವರಿಗೆ ಮಕ್ಕಳು ಇರಲಿಲ್ಲ. ಕೇವಲ 47ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದು ಸಂಗೀತ ಪ್ರಿಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.


Click it and Unblock the Notifications











