"ನಾ ಲವ್ವರ.. ನೀ ನನ್ನ ಲವ್ವರ" ಅಂತಲೇ "ಹಿತ್ತಲಿಗೆ ಕರೆದ ಉತ್ತರ ಕರ್ನಾಟಕದ ಗಾಯಕ ಮಾಳು ನಿಪನಾಳ; ಹಿನ್ನೆಲೆ ಏನು?
ಉತ್ತರ ಕರ್ನಾಟಕದ ಪ್ರತಿಭೆಗಳಿಗೇನು ಕೊರತೆಯಿಲ್ಲ. ಇತ್ತೀಚೆಗೆ ಯೂಟ್ಯೂಬ್‌ಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹವಾ. ಅದರಲ್ಲೂ ಮಾಳು ನಿಪನಾಳ ಹೆಸರು ಉತ್ತರ ಕರ್ನಾಟಕದ ಮೂಲೆ ಮೂಲೆಯಲ್ಲೂ ಫೇಮಸ್. ಈ ಗಾಯಕನ ಹಾಡಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಮರುಳಾಗದವರೇ ಇಲ್ಲ. ಈತ ಹಾಡಿರುವ ಹಾಡುಗಳು ಯೂಟ್ಯೂಬ್‌ನಲ್ಲಿ ಆ ಮಟ್ಟಿಗೆ ಸದ್ದು ಮಾಡಿವೆ.
"ನಾ ಡ್ರೈವರಾ.. ನೀ ನನ್ನ ಲವ್ವರಾ.." ಹಾಡು ಬಹುತೇಕ ಎಲ್ಲಾ ಉತ್ತರ ಕರ್ನಾಟಕದ ಮಂದಿಯ ಕಿವಿಗೆ ಬಿದ್ದಿರುತ್ತೆ. ಈ ಹಾಡು ಹಾಡಿದ್ದು ಇದೇ ಮಾಳು ನಿಪನಾಳ. ಈ ಹಾಡು ಯೂಟ್ಯೂಬ್‌ನಲ್ಲಿ ಸುಮಾರು 156 ಮಿಲಿಯನ್ ವೀವ್ಸ್ ಕಂಡಿದೆ. ಸಿನಿಮಾ ಹಾಡುಗಳೇ ಈ ಮಟ್ಟಿಗೆ ವೀವ್ಸ್ ಗಿಟ್ಟಿಸಿಕೊಳ್ಳುವುದಕ್ಕೆ ಪರದಾಡುವಾಗ ಒಬ್ಬ ಸ್ವತಂತ್ರ್ಯ ಗಾಯಕನಿಗೆ ಒಂದು ಹಾಡು ಇಷ್ಟೊಂದು ಯಶಸ್ಸು ತಂದುಕೊಟ್ಟಿದೆ.

ಅಷ್ಟಕ್ಕೂ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಬಗ್ಗೆ ಈಗ್ಯಾಕೆ ಇಷ್ಟೊಂದು ಬಿಲ್ಡಪ್ ಅನ್ನುವುದಕ್ಕೊಂದು ಕಾರಣವಿದೆ. ಮಾಳು ನಿಪನಾಳ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಹಾಡಿದ್ದಾರೆ. ಅದುವೇ 'ಕರಟಕ ದಮನಕ' ಸಿನಿಮಾದ "ಹಿತ್ತಲಕ ಕರಿಬ್ಯಾಡ ಮಾವ.." ಹಾಡು. ಈ ಹಾಡು ಬಿಡುಗಡೆಯಾದ 6 ದಿನಗಳಲ್ಲೇ 1.5 ಲಕ್ಷ ವೀವ್ಸ್ ಗಳಿಸಿ ಸದ್ದು ಮಾಡುತ್ತಿದೆ. ಹಾಗಿದ್ರೆ, ಮಾಳು ನಿಪನಾಳ ಹಿನ್ನೆಲೆಯೇನು? ಈ ಗಾಯಕನಿಗೆ ಸಿನಿಮಾ ಹಾಡುವ ಅವಕಾಶ ಸಿಕ್ಕಿದ್ದೇಗೆ? ತಿಳಿಯಲು ಮುಂದೆ ಓದಿ...
ಮಾಳು ನಿಪನಾಳ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಶಾಸ್ತ್ರೀಯವಾಗಿ ಸಂಗೀತ ಇವರಿಗೆ ಗೊತ್ತಿಲ್ಲ. ಆದರೆ, ತಮ್ಮ ಧ್ವನಿಯಿಂದ, ಹಾಡಿನಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. " ನಾ ಡ್ರೈವರಾ.. ನೀ ನನ್ನ ಲವ್ವರಾ.." ಹಾಡು ಇಂದಿಗೂ ಉತ್ತರ ಕರ್ನಾಟಕದ ಮಂದಿಯ ಬಾಯಲ್ಲಿ ಹರಿದಾಡುತ್ತೆ. ಕಾರು, ಆಟೋರಿಕ್ಷಾ, ಟ್ರೈಕ್ಟರ್ ಎಲ್ಲಿ ನೋಡಿದರೂ, ಈ ಹಾಡು ಓಡುತ್ತಲೇ ಇರುತ್ತೆ. ಆ ಮಟ್ಟಿಗೆ ಗಾಯಕ ಮಾಳು ನಿಪನಾಳ ಫೇಮಸ್ ಆಗಿದ್ದಾರೆ.
ಇದೇ ಜನಪ್ರಿಯತೆ ಈಗ ಅವರನ್ನು ಸಿನಿಮಾದವರೆಗೂ ಕರೆದುಕೊಂಡು ನಿಲ್ಲಿಸಿದೆ. ಯೋಗರಾಜ್ ಭಟ್ ನಿರ್ದೇಶಿಸಿರುವ 'ಕರಟಕ ದಮನಕ' ಸಿನಿಮಾ ಜನಪ್ರಿಯ ಗೀತೆಗೆ ಧ್ವನಿ ನೀಡಿದ್ದಾರೆ. ಖುಷಿ ಸಂಗತಿ ಏನಂದ್ರೆ, ಈ ಹಾಡು ಕೂಡ ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತಿದೆ. ಅಷ್ಟಕ್ಕೂ " ನಾ ಲವ್ವರಾ.. " ಹಾಡು ವೈರಲ್ ಆಗಿ ಒಂದು ವರ್ಷದ ಮೇಲಾಗಿತ್ತು. ಆದರೆ, ದಿಢೀರನೇ ಈಗ ಅವಕಾಶ ಸಿಕ್ಕಿದ್ದೇಗೆ? ಭಟ್ಟರ ಕಣ್ಣುಗೆ ಬಿದ್ದಿದ್ದೇಗೆ? ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.

"ಯೋಗರಾಜ್ ಭಟ್ ಅವರ ಯಾವುದೋ ಕೆಲಸಕ್ಕೆ ಭೇಟಿಯಾಗಿದ್ದರು. ಆಗ ಒಂದು ಲೈನ್ ಹಾಡಿಸಿದ್ದರು. "ಗಡ ಗಡ ಗಡ.. ನಡುಗಿಸಿ ಕೊಡಿ ನಿನ್ನ ನಡ.." ಸಾಲನ್ನು ಹಾಡಿಸಿದ್ದರು. ಅದನ್ನು ಯೋಗರಾಜ್ ಭಟ್ ಸಂಗೀತ ನಿರ್ದೇಶಕ ವಿ ಹರಿಕೃಷ್ಣಗೆ ಕೇಳಿದ್ದರು. ತಕ್ಷಣವೇ ಹರಿಕೃಷ್ಣ ಹಾಡಿಸಿ ಬಿಡೋಣ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಮಾಳು ನಿಪನಾಳ ಧ್ವನಿಯನ್ನು ಕೇಳಿ ಹರಿಕೃಷ್ಣ ನಾವು ಒಂಥರಾ ಕಾಂಗ್ರೆಸ್ ಗಿಡದ ಹಾಗೆ ಎಲ್ಲಿ ಬೇಕಾದರೂ ಬೆಳೆದು ಬಿಡುತ್ತೇವೆ ಎಂದಿದ್ದರಂತೆ.
"ಹರಿಕೃಷ್ಣ, ವಾಣಿಯಮ್ಮ ಹಾಡಿಸುವಾಗ ತುಂಬಾ ಸೆಷನ್‌ಗಳನ್ನು ನೋಡಿದ್ದೇನೆ. ಒಂದೊಂದು ಪದಕ್ಕೂ ಹೋರಾಡುತ್ತಾರೆ. ಇವನು ಶಾಸ್ತ್ರೀಯವಾಗಿ ಕಲಿತಿಲ್ಲ. ಯಾವಾಗ ಕಲಿಯುತ್ತಾನೋ ಗೊತ್ತಿಲ್ಲ. ಹಾಡಿದ ಆಗ ನನಗೆ ಗೊತ್ತಾಗಿಲ್ಲ. ಆಮೇಲೆ ಹರಿಕೃಷ್ಣ MP3 ಕಳಿಸಿದ್ರು. ಅದೊಂದು ಅದ್ಭುತ ಕ್ಷಣ" ಎಂದು ಯೋಗರಾಜ್ ಭಟ್ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಕೇವಲ ಮೂರು ವರ್ಷಗಳ ಹಿಂದಷ್ಟೇ 'ಮಾಳು ನಿಪನಾಳ ಸಿಂಗರ್' ಅನ್ನುವ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಅದರಲ್ಲೇ ತಾನು ಹಾಡುಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಸಂಗೀತ ಗೊತ್ತಿಲ್ಲದೇ ಇದ್ದರೂ, ತನಗೆ ತಿಳಿದ ಹಾಗೆ ಹಾಡಿದ ಹಾಡನ್ನು ಹಾಕುತ್ತಿದ್ದರು. ಅದರಲ್ಲೊಂದು ಹಾಡು "ನಾ ಡ್ರೈವರ.. ನೀ ನನ್ನ ಲವ್ವರ" ಸಾಂಗ್. ಇದೇ ಹಾಡು ಈಗ 'ಕರಟಕ ದಮನಕ' ಸಿನಿಮಾವರೆಗೂ ತಂದು ನಿಲ್ಲಿಸಿದೆ.


Click it and Unblock the Notifications











