ಕನ್ನಡದ ಮತ್ತೊಂದು ರ್‍ಯಾಪ್ ಸಾಂಗ್ ಟ್ರೆಂಡಿಂಗ್; 'ಫಿರಾಕೋ ಮಾರ್' ಇದು 'ಮರ್ಯಾದೆ ಪ್ರಶ್ನೆ'
ಕನ್ನಡದಲ್ಲಿ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾಗಳು ಬರುತ್ತಲೆ ಇವೆ. ಅದರಲ್ಲೊಂದು ಸಿನಿಮಾ 'ಮರ್ಯಾದೆ ಪ್ರಶ್ನೆ'. ಆರ್‌ಜೆ ಪ್ರದೀಪ ಅವರ ಸಖತ್ ಸ್ಟುಡಿಯೋ ಬ್ಯಾನರ್ ಅಡಿ ನಿರ್ಮಾಣ ಮಾಡಿರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಇನ್ನೊಂದು ಹಾಡು ರಿಲೀಸ್ ಆಗಿದೆ.
ಕೆಲವೇ ದಿನಗಳ ಹಿಂದಷ್ಟೇ ಟ್ರೈಲರ್‌ನಿಂದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು. 'ಮರ್ಯಾದೆ ಪ್ರಶ್ನೆ' ಸಿನಿಮಾ ನೋಡಲೇಬೇಕು ಅಂತ ಸಿನಿಪ್ರಿಯರು ಈಗಾಗಲೇ ನಿರ್ಧಾರ ಮಾಡಿ ಆಗಿದೆ. ಸಿನಿಮಾ ರಿಲೀಸ್ ಕೆಲವೇ ದಿನಗಳಿದೆ ಅನ್ನುವಾಗಲೇ ಮೂರನೇ ಹಾಡನ್ನು ರಿಲೀಸ್ ಮಾಡಿದೆ ಚಿತ್ರತಂಡ. ಅದುವೇ ರ್‍ಯಾಪ್ ಸಾಂಗ್ "ಫಿರಾಕೋ ಮಾರ್.."

ಕನ್ನಡ ಸಿನಿಮಾಗಳಲ್ಲಿ ಈಗ ರ್‍ಯಾಪ್ ಸಾಂಗ್‌ಗಳ ಟ್ರೆಂಡ್ ನಿಧಾನವಾಗಿ ಶುರುವಾಗಿದೆ. ದುನಿಯಾ ವಿಜಯ್ ನಟಿಸಿದ 'ಭೀಮ' ಸಿನಿಮಾದ ಹಾಡು ಸೂಪರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೇ 'ಮರ್ಯಾದೆ ಪ್ರಶ್ನೆ' ಸಿನಿಮಾದಲ್ಲೂ ರ್‍ಯಾಪ್ ಸಾಂಗ್ ಅನ್ನು ಇಡಲಾಗಿದೆ. ದಕ್ನಿ ರ್‍ಯಾಪರ್ ಪಾಶಾ ಬಾಯ್ ಈ ಹಾಡನ್ನು ಬರೆದು ಹಾಡಿದ್ದಾರೆ. ಇದು 'ಮರ್ಯಾದೆ ಪ್ರಶ್ನೆ' ಸಿನಿಮಾದ ಮೂರನೇ ಸಾಂಗ್.
ಈಗಾಗಲೇ ಈ ಸಿನಿಮಾದಲ್ಲಿ ಎರಡು ಹಾಡುಗಳು ರಿಲೀಸ್ ಆಗಿವೆ. ಮೆಲೋಡಿ ಹಾಗೂ ಜಾನಪದ ಶೈಲಿಯ ಹಾಡುಗಳು ಈಗಾಗಲೇ ರಿಲೀಸ್ ಆಗಿವೆ. ಮೂರನೇ ಹಾಡನ್ನು ಅರ್ಜುನ್ ರಾಮು ಹಿಪಾಪ್ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಹೀಗಾಗಿ ರ್‍ಯಾಪ್ ಹಾಗೂ ಹಿಪಾಪ್ ಶೈಲಿಯ ಈ ಹಾಡು ಸಂಗೀತ ಪ್ರಿಯರನ್ನು ಕಾಡುತ್ತಿದೆ. ನ್ಯೂ ಜನರೇಷನ್‌ಗೆ ಈ ಹಾಡುಗಳ ಮೂಲಕಸ ಥಿಯೇಟರ್‌ಗೆ ಸೆಳೆಯುವುದಕ್ಕೆ ಚಿತ್ರತಂಡ ಮುಂದಾಗಿದೆ.
'ಮರ್ಯಾದೆ ಪ್ರಶ್ನೆ' ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಮೂರನೇ ಹಾಡಿನ ವೈಶಿಷ್ಠ್ಯತೆ ಬಗ್ಗೆ ಹೀಗೆ ಹೇಳುತ್ತಾರೆ. ಈ "ಮಧ್ಯಮ ವರ್ಗದ ಕೋಪವನ್ನು ತೋರಿಸುವ ಹಾಡೊಂದು ಸಿನಿಮಾಕ್ಕೆ ಬೇಕಿತ್ತು. ಆಗ ಪಾಶಾ ಬಾಯ್ ಜೊತೆ ಸೇರಿ ಈ ರ್‍ಯಾಪ್ ಸಾಂಗ್ ಅನ್ನು ಮಾಡಲಾಯಿತು. ಕ್ಲಾಸ್ ಜೊತೆಗೆ ಸಖತ್ ಮಾಸ್ ಬಿಜಿಎಮ್ ಇರುವ ಈ ಸಾಂಗ್ ಸಂಗೀತ ಪ್ರಿಯರಿಗೆ ಇಷ್ಟ ಆಗುವ ಭರವಸೆ ಇದೆ" ಎನ್ನುತ್ತಾರೆ.
ಎರಡೂವರೆ ನಿಮಿಷದ ಈ ಹಾಡಿನಲ್ಲಿ 'ಮರ್ಯಾದೆ ಪ್ರಶ್ನೆ'ಯ ಪ್ರಮುಖ ಪಾತ್ರಧಾರಿಗಳು ಕಾಣಿಸಿಕೊಂಡಿದ್ದಾರೆ. ರಾಕೇಶ್ ಅಡಿಗ, ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು ಅವರನ್ನು ನೋಡಬಹುದು. ಮಧ್ಯಮ ವರ್ಗದ ಹುಡುಗರನ್ನು ಬೆಳೆಯೋಕೆ ಬಿಡದೇ ಇದ್ದರೂ ಬೆಳೆದೇ ಬೇಳೆಯುತ್ತಾರೆ ಎನ್ನುವುದನ್ನು ಕೂಗಿ ಹೇಳುತ್ತಿರುವ ಈ ಹಾಡನ್ನು ಈಗ ಸಖತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.
ಅಂದ್ಹಾಗೆ, 'ಮರ್ಯಾದೆ ಪ್ರಶ್ನೆ' ಸಿನಿಮಾ ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ. ರಾಕೇಶ್ ಅಡಿಗ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು ಜೊತೆ ಶೈನ್ ಶೆಟ್ಟಿ, ತೇಜು ಬೆಳವಾಡಿ, ಪ್ರಭು ಮುಂಡ್ಕುರ್ ನಟಿಸಿದ್ದಾರೆ. ಜೊತೆಗೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಬಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಪೋಷಕ ಪಾತ್ರದಲ್ಲಿ ಇದ್ದಾರೆ. ನಾಗರಾಜ ಸೋಮಯಾಜಿ ಚಿತ್ರಕತೆ, ಸಂಭಾಷಣೆ, ನಿರ್ದೇಶನವಿರುವ 'ಮರ್ಯಾದೆ ಪ್ರಶ್ನೆ' ಇದೇ ನವೆಂಬರ್ 22ರಂದು ರಿಲೀಸ್ ಆಗುತ್ತಿದೆ.


Click it and Unblock the Notifications











