Ricky Kej Grammy award : ಎರಡನೇ ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದು ಬೀಗಿದ ರಿಕ್ಕಿ ಕೇಜ್
ಲಾಸ್ ವೇಗಾಸ್‌ನಲ್ಲಿ ನಿನ್ನೆ (ಏಪ್ರಿಲ್ 3) ಸಂಗೀತ ಕ್ಷೇತ್ರಕ್ಕೆ ನೀಡಲಾಗುವ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಅರ್ಹರಿಗೆ ಪ್ರಧಾನ ಮಾಡಲಾಗಿದೆ. 2022ರ ಈ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಮತ್ತು ಸ್ಟೀವರ್ಟ್ ಕೋಪ್‌ಲ್ಯಾಂಡ್‌ಗೆ ಗ್ರ್ಯಾಮಿ ಅವಾರ್ಡ್ ಬಂದಿದೆ.
ರಿಕ್ಕಿ ಕೇಜ್ ಹಾಗೂ ಸ್ವೀವರ್ಟ್ ಕೋಪ್‌ಲ್ಯಾಂಡ್ ಜೋಡಿಯು 'ಡಿವೈನ್ ಟೈಡ್' ಎಂಬ ಆಲ್ಬಂ ಅನ್ನು ಕಂಪೋಸ್ ಮಾಡಿದ್ದರು. ಲಹರಿ ಮ್ಯೂಸಿಕ್ ಸಂಸ್ಥೆ ಈ ಮ್ಯೂಸಿಕ್ ಅಲ್ಬಮ್ ಅನ್ನು ನಿರ್ಮಾಣ ಮಾಡಿತ್ತು. ಗ್ರ್ಯಾಮಿಯ ಬೆಸ್ಟ್ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ರಿಕ್ಕಿ ಕೇಜ್ ಹಾಗೂ ಸ್ವೀವರ್ಟ್ ಕೋಪ್‌ಲ್ಯಾಂಡ್ ಜೋಡಿಗೆ ಪ್ರಶಸ್ತಿ ಲಭಿಸಿದೆ.
ರಿಕ್ಕಿ ಕೇಜ್‌ಗೆ ಇದು ಎರಡನೇ ಗ್ರ್ಯಾಮಿ ಪ್ರಶಸ್ತಿ
ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ಗೆ ಇದು ಎರಡನೇ ಗ್ರ್ಯಾಮಿ ಅವಾರ್ಡ್. ಈ ಹಿಂದೆ 2015ರಲ್ಲಿ 'ವಿಂಡ್ಸ್ ಆಫ್ ಸಂಸಾರ' ಎನ್ನುವ ಅಲ್ಬಂಗೆ ಗ್ರ್ಯಾಮಿ ಅವಾರ್ಡ್ ಅನ್ನು ಪಡೆದುಕೊಂಡಿದ್ದರು. ವಿಶೇಷ ಅಂದರೆ, ಈ ಪ್ರಶಸ್ತಿ ಕೂಡ ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲೇ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ನಿನ್ನೆ (ಏಪ್ರಿಲ್ 03) ಕೂಡ ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲೇ ಪ್ರಶಸ್ತಿ ಗೆದ್ದುಕೊಂಡಿದೆ.

'ಡಿವೈನ್ ಟೈಡ್ಸ್' ಆಲ್ಬಂ ಸಂಗೀತ ಕ್ಷೇತ್ರದ ವಿಶಿಷ್ಟ ಆಲ್ಬಂ ಅಂತಲೇ ಪರಿಗಣಿಸಲಾಗಿದೆ. ಈ ಆಲ್ಬಂನ ವಿಶೇಷತೆ ಅಂದ್ರೆ, ಮನವ ಸಂಕುಲ ಹಾಗೂ ಪ್ರಪಂಚಕ್ಕೆ ಗೌರವ ಸಲ್ಲಿಸುವ ಸಲುವಾಗಿಯೇ ಈ ಹಾಡು ವಿಶೇಷವಾಗಿ ಕಂಪೋಸ್ ಮಾಡಲಾಗಿತ್ತು. 9 ಹಾಡಿಗಳಿರುವ ಈ ಆಲ್ಬಂನಲ್ಲಿ 8 ಮ್ಯೂಸಿಕ್ ವಿಡಿಯೋಗಳಿವೆ. ಭಾರತದ ಹಿಮಾಲಯ ಹಾಗೂ ಸ್ಪೇನ್‌ನಲ್ಲಿ ಆಲ್ಬಂ ಶೂಟ್ ಆಗಿದೆ.
ರಿಕ್ಕಿ ಕೇಜ್ ಫುಲ್ ಖುಷ್
"ನಮ್ಮ ಡಿವೈನ್ ಟೈಡ್ಸ್ ಅಲ್ಬಂಗೆ ಇಂದು (ಏಪ್ರಿಲ್ 03) ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇವೆ. ನನ್ನ ಪಕ್ಕದಲ್ಲಿ ನಿಂತಿರುವವರು ಲಿವಿಂಗ್ ಲೆಜೆಂಡ್ ಸ್ವೀವರ್ಟ್ ಕೋಪ್‌ಲ್ಯಾಂಡ್. ಇವರಿಗೆ ಸದಾ ಕೃತಜ್ಞತೆಯಿಂದ ತುಂಬು ಹೃದಯದ ಪ್ರೀತಿಯನ್ನು ಅರ್ಪಿಸುತ್ತಿದ್ದೇನೆ. ನನಗಿದು ಎರಡನೇ ಗ್ರ್ಯಾಮಿ ಅವಾರ್ಡ್. ಹಾಗೇ ಸ್ಟೀವರ್ಟ್ ಕೋಪ್‌ಲ್ಯಾಂಡ್‌ಗೆ ಇದು 6ನೇ ಗ್ರ್ಯಾಮಿ ಅವಾರ್ಡ್. ನನ್ನ ಹಾಡು ಕೇಳಿ, ನನ್ನ ಸಂಗೀತ ಇಷ್ಟ ಪಟ್ಟು ಜೊತೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸುತ್ತೇನೆ. ನಾನು ಇಲ್ಲಿ ನಿಂತಿರುವುದು ನಿಮ್ಮಿಂದಲೇ' ಎಂದು ರಿಕ್ಕಿ ಕೇಜ್ ಬರೆದಿದ್ದಾರೆ.
ರಿಕ್ಕಿ ಕೇಜ್ ಕನ್ನಡ ಸಿನಿಮಾಗೂ ಸಂಗೀತ ನೀಡಿದ್ದಾರೆ. ಕನ್ನಡ ಮೂರು ಸಿನಿಮಾಗಳಿಗೆ ಸಂಗೀತ ನೀಡಿದ್ದು, 'ಆಕ್ಸಿಡೆಂಟ್', 'ವೆಂಕಟ ಇನ್ ಸಂಕಟ' ಹಾಗೂ ಕ್ರೇಜಿ ಕುಟುಂಬಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ವಿಶ್ವದಾದ್ಯಂತ ಹೆಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. 2014ರಲ್ಲಿ ಕರ್ನಾಟಕದ ವರ್ಷ ಗೌಡ ಎಂಬುವವರನ್ನು ವಿವಾಹವಾಗಿದ್ದಾರೆ. ಇವರೂ ಕೂಡ ಸಂಗೀತ ಸಂಯೋಜಕಿಯಾಗಿದ್ದು, ರಿಕ್ಕಿ ಕೇಜ್ ಜೊತೆ ಗುರುತಿಸಿಕೊಂಡಿದ್ದಾರೆ.


Click it and Unblock the Notifications











