ರಿಷಿ, ಪ್ರಣೀತಾ ಸುಭಾಷ್ ಮೋಡಿ: 'ರಾಮನ ಅವತಾರ'ದಲ್ಲಿ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ಜೋಡಿ!
'ಕವಲುದಾರಿ', 'ಅಪರೇಷನ್ ಅಲಮೇಲಮ್ಮ' ದಂತಹ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟ ರಿಷಿ. ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ಹುಡುಕುವ ರಿಷಿ ಹೊಸ ಸಿನಿಮಾ ಮೂಲಕ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.
ಕಾಮಿಡಿ, ಸಸ್ಪೆನ್ಸ್ ಹಾಗೂ ಪ್ರೇಮಕಥೆ ಯಾವುದೇ ಇದ್ದರೂ ರಿಷಿ ಅದಕ್ಕೆ ಸೈ ಎನ್ನುವ ನಟ. ಇತ್ತೀಚೆಗಷ್ಟೇ ವೆಬ್ ಸೀರಿಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ತೆಲುಗಿನ ಜನಪ್ರಿಯ ನಿರ್ದೇಶಕ ಮಹಿ ರಾಘವ್ ಆಕ್ಷನ್ ಕಟ್ ಹೇಳಿರೋ ಕ್ರೈಮ್ ಡ್ರಾಮಾ 'ಶೈತಾನ್'ನಲ್ಲಿ ನಟಿಸಿದ್ದರು.

ಕಾಮಿಡಿ ಹಾಗೂ ರೊಮ್ಯಾಂಟಿಕ್ ಲುಕ್‌ನಲ್ಲಿ ಕಾಣಿಸಿಕೊಡಿದ್ದ ರಿಷಿ ಈ ವೆಬ್ ಸೀರಿಸ್ ಮೂಲಕ ರಗಡ್ ಹಾಗೂ ಮಾಸ್ ಅವತಾರದಲ್ಲಿ ನಟಿಸಿ ಜನ ಮನಗೆದ್ದಿದ್ದರು. ಈಗ ರಿಷಿ 'ರಾಮನ ಅವತಾರ' ಸಿನಿಮಾ ಮೂಲಕ ಲವರ್ ಬಾಯ್ ಆಗಿ ಪ್ರತ್ಯಕ್ಷರಾಗಿದ್ದಾರೆ.
'ರಾಮನ ಅವತಾರ' ಕೂಡ ರಿಷಿ ಅಭಿನಯದ ವಿಶಿಷ್ಟ ಸಿನಿಮಾ. ಕೆಲವು ದಿನಗಳ ಹಿಂದಷ್ಟೇ 'ರಾಮ ಈಸ್ ಜೆಂಟಲ್‌ಮೆನ್ ಅಂತಾ ರಿಷಿ ಹೆಜ್ಜೆ ಹಾಕಿದ್ದರು. ಈಗ ಮನಸ್ಸು ಬೇರೆಯ ದಿಕ್ಕಿಗೆ ಸಾಗಲು ಎಂದು ರಿಷಿ ಗುನುಗುತ್ತಿದ್ದಾರೆ. ಇದು ರಾಮನ ಅವತಾರ ಸಿನಿಮಾದ ಎರಡನೇ ಹಾಡು. ಈಗಾಗಲೇ ಎರಡನೇ ಹಾಡು ರಿಲೀಸ್ ಆಗಿದ್ದು, ಸಂಗೀತ ಪ್ರಿಯರಿಗೆ ಇಷ್ಟ ಆಗಿದೆ.

ಅಂದ್ಹಾಗೆ, ಈ ಹಾಡಿಗೆ ಸಿಂಪಲ್ ಸುನಿ ಸಾಹಿತ್ಯ ಬರೆದಿದ್ದಾರೆ. "ಮನಸ್ಸು ಬೇರೆ ದಿಕ್ಕಿಗೆ ಸಾಗಲು" ಅನ್ನೋ ಹಾಡಿಗೆ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡಿಗೆ ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ. ಈ ಹಾಡನ್ನು ಉಡುಪಿ ಬೀಚ್‌ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ ಜೋಡಿ ನೋಡುಗರ ಗಮನಸೆಳೆದಿದೆ.
'ರಾಮನ ಅವತಾರ' ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರು. ರಿಷಿ, ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ಜೊತೆ ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. .
'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ 'ರಾಮನ ಅವತಾರ' ಸಿನಿಮಾಗೆ ಹಣ ಹೂಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಹಿಡಿದಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಲಕನವಿದೆ. ಈ ಸಿನಿಮಾವನ್ನು ಉಡುಪಿ, ಬೆಂಗಳೂರು ಸುತ್ತುಮುತ್ತ ಚಿತ್ರೀಕರಣ ಮಾಡಲಾಗಿದೆ.


Click it and Unblock the Notifications











