ಹುಟ್ಟುಹಬ್ಬದಂದೇ ಸಮಂತಾಗೆ 'ಖುಷಿ' ಖುಷಿಯಾಗಿ "ನನ್ನ ರೋಜಾ ನೀನೇ.." ಎಂದ ವಿಜಯ್ ದೇವರಕೊಂಡ!
ಟಾಲಿವುಡ್‌ನ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ. 'ಲೈಗರ್' ಬಳಿಕ ನಟಿಸುತ್ತಿರುವ 'ಖುಷಿ' ಸಿನಿಮಾಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಇಂದು (ಮೇ 9) ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದೇ ಚಿತ್ರದ ಹಾಡೊಂದು ರಿಲೀಸ್ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ನಟಿಸುತ್ತಿರುವ 'ಖುಷಿ' ಸಿನಿಮಾ ಮೊದಲ ಹಾಡನ್ನು ಇದೇ ಸಂಭ್ರಮದಲ್ಲಿ ರಿಲೀಸ್ ಮಾಡಲಾಗಿದೆ. ಈ ಮೆಲೋಡಿ ಟ್ರ್ಯಾಕ್‌ಗೆ ಸಂಗೀತ ಪ್ರಿಯರು ಫಿದಾ ಆಗಿದ್ದಾರೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ಕನ್ನಡದಲ್ಲೂ ಈ ಹಾಡು ರಿಲೀಸ್ ಆಗಿದೆ.

'ಖುಷಿ' ಸಿನಿಮಾದ ಈ ರೊಮ್ಯಾಂಟಿಕ್ ಸಾಂಗ್‌ಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಮಲಯಾಳಂನ 'ಹೃದಯಂ' ಸಿನಿಮಾಗೆ ಟ್ಯೂನ್ ಹಾಕಿದ್ದ ಹೇಷಂ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಜೊತೆಗೆ ಅವರೇ ಹಾಡಿರೋದು ವಿಶೇಷ. "ನನ್ನ ರೋಜಾ ನೀನೇ.." ಎಂಬ ಈ ಮೆಲೋಡಿ ಟ್ರ್ಯಾಕ್ ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ.
ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಗೀತಗೋವಿಂದಂ' ಬಳಿಕ ವಿಜಯ್ ಹೆಚ್ಚು ಕಡಿಮೆ ಅದೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ, ಸಮಂತಾಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಹಾಡನ್ನು ಬಹುತೇಕ ಕಾಶ್ಮೀರದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಸಮಂತಾ ಹಾಗೂ ವಿಜಯ್ ದೇವರಕೊಂಡ ಇಬ್ಬರದ್ದು ಅಪರೂಪದ ಕಾಂಬಿನೇಷನ್. ಹೀಗಾಗಿ 'ಖುಷಿ' ಪ್ರೇಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಅದರಲ್ಲೂ ರೊಮ್ಯಾಂಟಿಕ್ ಹಾಡು ರಿಲೀಸ್ ಆದ ಬಳಿಕವಂತೂ ಸಿನಿಮಾ ಮೇಲೆ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.

'ಖುಷಿ' ಪ್ಯಾನ್ ಇಂಡಿಯಾ ಸಿನಿಮಾ. ಇದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ತೆಲುಗಿನ ಮೈತ್ರಿ ಮೂವಿ ಬ್ಯಾನರ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಈ ಸಿನಿಮಾಗೆ ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ 'ಮಜಿಲಿ'ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಶಿವ ನರ್ವಣ ನಿರ್ದೇಶಿಸುತ್ತಿದ್ದಾರೆ.
ಅಂದ್ಹಾಗೆ 'ಖುಷಿ' ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ. ಈ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಹೇಷಂ ಅಬ್ದುಲ್ ವಹಾಬ್ ಸಂಗೀತ ಕಿವಿಗೆ ಇಂಪು ಕೊಡುತ್ತಿದೆ.


Click it and Unblock the Notifications











