"ನಂಗೆ ಅಲ್ಲವ" ಎಂದು ಹಾಡಿದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ: ಬ್ರೋ ಪಾರ್ಟ್ 2 ಬೇಕು ಎಂದ ನೆಟ್ಟಿಗರು
ಕನ್ನಡದ ರಿಯಾಲಿಟಿ ಶೋ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗಾಯಕ ಸಂಜಿತ್ ಹೆಗ್ಡೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ವಿಶಿಷ್ಠ ಧ್ವನಿಯಿಂದ ಸಂಗೀತ ಪ್ರಿಯರ ಗಮನ ಸೆಳೆದಿದ್ದಾರೆ. ಈಗಾಗಲೇ ಕನ್ನಡದ ಹಲವು ಸೂಪರ್ ಡೂಪರ್ ಹಿಟ್ ಹಾಡುಗಳನ್ನು ಹಾಡಿ ಸಂಜಿತ್ ಹೆಗ್ಡೆ ಗಮನ ಸೆಳೆದಿದ್ದಾರೆ. ಗಾಯನದ ಜೊತೆ ಜೊತೆಗೆ ಆಗಾಗ ನಟಿಸಿ ಗಮನ ಸೆಳೆದಿದ್ದಾರೆ.
ಸಂಜಿತ್ ಹೆಗ್ಡೆ ಅತೀ ಕಡಿಮೆ ವಯಸ್ಸಿನಲ್ಲಿಯೇ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಹಾಡು ಹಾಡುವ ಮೂಲಕ ಮೋಡಿ ಮಾಡಿದ್ದಾರೆ. ಸಿನಿಮಾಗಳಲ್ಲಿ ಹಾಡುವುದರ ಜೊತೆಗೆ ಸಂಜಿತ್ ಹೆಗ್ಡೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಾವೇ ಹಾಡಿದ ಹಾಡುಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಈಗ ಕನ್ನಡದಲ್ಲಿ ಹೊಸ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ.

"ನಂಗೆ ಅಲ್ಲವ..." ಅಂತ ಸುಮಧುರವಾಗಿ ಹಾಡಿರುವ ಸಂಚಿತ್ ಹೆಗ್ಡೆಯ ಹಾಡು ಮೋಡಿ ಮಾಡುತ್ತಿದೆ. ಈ ಹಾಡಿನಲ್ಲಿ ಯುವ ನಟಿ ಸಂಜನಾ ದಾಸ್ ಜೊತೆ ಸಂಜಿತ್ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ "ನಂಗೆ ಅಲ್ಲವ.." ತಮ್ಮದೇ ತಂಡದೊಂದಿಗೆ ಸ್ವತಂತ್ರವಾಗಿ ರಚಿಸಿರುವ ಹಾಡು. ಯುವ ಜೋಡಿಯ ಪ್ರೀತಿ, ಸರಸ-ವಿರಸಗಳನ್ನು ಹೇಳುವ ಹಾಡಿದು. ಈಗಾಗಲೇ ಈ ಹಾಡು ಸಂಜಿತ್ ಹೆಗ್ಡೆ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದೆ.
ಈ ಹಾಡಿಗೆ ನಾಗಾರ್ಜುನ್ ಶರ್ಮಾ ಪದಗಳನ್ನು ಹೆಣೆದಿದ್ದಾರೆ. ವಿಶೇಷ ಅಂದರೆ, ಈ ಹಾಡನ್ನು ಸಂಜಿತ್ ಹೆಗ್ಡೆ ಕಂಪೋಸ್ ಮಾಡಿ, ಹಾಡನ್ನೂ ಹಾಡಿರೋದು ವಿಶೇಷ. ಈ ಅಲ್ಬಮ್ ಸಾಂಗ್ ಅನ್ನು ಬಿಜೋಯ್ ಶೆಟ್ಟಿ ನಿರ್ದೇಶನ ಮಾಡಿದ್ದು, ಸಂಗೀತ ಪ್ರಿಯರಿಗೆ ಇಷ್ಟ ಆಗಿದೆ. ಯುವ ಪ್ರೇಮಿಗಳ ಯುಗಳ ಗೀತೆಯಂತಿರುವ "ನಂಗೆ ಅಲ್ಲವ.." ಹಾಡು ಇಷ್ಟ ಆಗುತ್ತಿದೆ.
ಈ ಹಾಡಿನ ಬಗ್ಗೆ ಸಂಚಿತ್ ಹೆಗ್ಡೆ ಹರ್ಷ ವ್ಯಕ್ತಪಡಿಸಿದ್ದಾರೆ. "ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ಈ ಹಾಡು ರಿಲೀಸ್ ಆದ ಬಳಿಕ ನಾನು ತುಂಬಾ ಆತಂಕಗೊಂಡಿದ್ದು, ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಂಗೆ ಅಲ್ಲವಾ ಹಾಡು ನನ್ನ ಪ್ರೀತಿಯ ಜೀವನದ ಪ್ರಯಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಜರ್ನಿಯ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ತುಂಬಾ ಹಗುರ ಎನಿಸುತ್ತದೆ" ಎಂದು ಸಂಜಿತ್ ಹೆಗ್ಡೆ ಹೇಳಿಕೊಂಡಿದ್ದಾರೆ.

"ನಂಗೆ ಅಲ್ಲವ" ಹಾಡನ್ನು ಕೇಳಿದ ಸಂಗೀತ ಪ್ರಿಯರು ಕೂಡ ಅಷ್ಟೇ ಹರ್ಷ ವ್ಯಕ್ತಪಡಿಸಿದ್ದಾರೆ. "ಏನ್ ಲಿರಿಕ್ಸ್, ಕಂಪೋಸಿಷನ್, ಮ್ಯೂಸಿಕ್ ಗುರು, ಇದು ಬೇಕಾಗಿರೋದು. ಇತರ ಕನ್ನಡ ಇಂಡಿ ಹಾಡುಗಳು ನೀನ್ನಿಂದಲೇ ಬರ್ಬೇಕು ಅಷ್ಟೇ. ಫುಲ್ ಟ್ರ್ಯಾಕ್‌ಗಾಗಿ ಥ್ಯಾಂಕ್ಸ್" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು " ಕಪಲ್ ಗೋಲ್ಸ್, ಎಂತಹ ಅದ್ಭುತ ಕೆಮಿಸ್ಟ್ರಿ, ಮ್ಯೂಸಿಕ್, ವಿಡಿಯೋಗ್ರಫಿ ಇನ್ನೊಂದು ಲೆವೆಲ್‌ನಲ್ಲಿದೆ. ಈ ಮೇಲಿರುವ ಎಲ್ಲಾ ಹಾಡುಗಳು ನನ್ನ ಪ್ಲೇ ಲಿಸ್ಟ್‌ನಲ್ಲಿ ಇರುತ್ತವೆ" ಎಂದು ಹೇಳಿದ್ದಾರೆ.
ಸಂಜಿತ್ ಹೆಗ್ಡೆ ಕನ್ನಡದಲ್ಲಷ್ಟೇ ಅಲ್ಲ ಹಿಂದಿಯಲ್ಲೂ ಹಾಡನ್ನು ರಿಲೀಸ್ ಮಾಡಿದ್ದಾರೆ. 'ಬಾದಲ್' ಅನ್ನೋ ಹಾಡು 3.5 ಮಿಲಿಯನ್ ವೀವ್ಸ್ ಸಿಕ್ಕಿದೆ. ಹಾಗೇ ಇನ್ನೊಂದು ಹಾಡು 'ಗುಲಾಬೋ' ಕೂಡ ಸುಮಾರು 40 ಲಕ್ಷ ವೀವ್ಸ್ ಪಡೆದುಕೊಂಡಿದೆ. ಈಗ ಅದೇ ಸಾಲಿಗೆ "ನಂಗೆ ಅಲ್ಲವ" ಅನ್ನೋ ಹಾಡು ಕೂಡ ಸೇರ್ಪಡೆಯಾಗಿದೆ. ಸಂಜಿತ್ ಹೆಗ್ಡೆ ಯೂಟ್ಯೂಬ್ ಚಾನೆಲ್ ಸೇರಿದಂತೆ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಹಾಡು ಲಭ್ಯವಿದೆ.


Click it and Unblock the Notifications











