Video:ಕೆ. ಮಂಜು ಆರೋಪ ಮಾಡಿದ್ಮೇಲೆ ಸಂಜಿತ್ ಹೆಗ್ಡೆ ಹಾಡಿದ್ದಾ? ಅದಕ್ಕೂ ಮುನ್ನ ಹಾಡಿದ್ದಾ?
ಕನ್ನಡ ಚಿತ್ರರಂಗದಲ್ಲಿ ಗಂಡಗಲಿ ಅಂತಲೇ ಹೆಸರಾಗಿರುವ ಕೆ.ಮಂಜು ಇತ್ತೀಚೆಗೆ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕನ್ನಡದಲ್ಲಿ ಬೆಳೆದವರು ಹೋಗಿ ಹಿಂದಿಯಲ್ಲಿ ಮಾರಿಕೊಂಡು ಬಿಟ್ಟಿದ್ದಾರೆ. ಒಂದು ಹಾಡು ಹಾಡುವುದಕ್ಕೆ ಎರಡೂವರೆ ಲಕ್ಷ ರೂಪಾಯಿ ಕೇಳುತ್ತಾನೆ ಎಂದು ವೇದಿಕೆ ಮೇಲೆ ಗುಡುಗಿದ್ದರು. ಅದೇ ಕೆ.ಮಂಜುಸ ಸಂಸ್ಥೆಯೀಗ ಸಂಜಿತ್ ಹೆಗ್ಡೆ ಹಾಡಿದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದೆ.
ಕನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ. ಕನ್ನಡ ಅಷ್ಟೇ ಅಲ್ಲ ಈಗ ಎಲ್ಲ ಬೇರೆ ಭಾಷೆಯ ಸಿನಿಮಾಗಳಿಗೂ ಹಾಡುವಷ್ಟು ಬ್ಯುಸಿಯಾಗಿರುವುದು ನಿಜ. ಸಂಜಿತ್ ಹೆಗ್ಡೆ ವಿಶಿಷ್ಟ ಧ್ವನಿಗೆ ಕನ್ನಡದ ಜೊತೆ ಬೇರೆ ಸಂಗೀತ ನಿರ್ದೇಶಕರ ಮನಸ್ಸನ್ನು ಗೆದ್ದಿದ್ದಾರೆ. ಅದರಲ್ಲೂ ಇತ್ತೀಚೆಗೆ ಅವರೇ ಕಂಪೋಸ್ ಮಾಡಿ, ಸೋನು ನಿಗಂ ಜೊತೆ ಹಾಡಿದ್ದ "ಮಾಯಾವಿ.." ಸಾಂಗ್ ಸಂಗೀತ ಪ್ರೇಮಿಗಳ ಮನಗೆದ್ದಿತ್ತು.

ಇದೇ ಹೊತ್ತಲ್ಲೇ ನಿರ್ಮಾಪಕ ಕೆ.ಮಂಜು ಈ ಸ್ಟಾರ್ ಸಿಂಗರ್ ವಿರುದ್ಧ ಕಿಡಿಕಾರಿದ್ದರು. ಕನ್ನಡದ ಹಾಡು ಹಾಡುವುದಕ್ಕೆ ದುಬಾರಿ ಸಂಭಾವನೆ ಕೇಳುತ್ತಾರೆಂದು ಆರೋಪ ಮಾಡಿದ್ದರು. ಆದ್ರೀಗ ಅದೇ ತಂಡ ಸಂಜಿತ್ ಹೆಗ್ಡೆ 'ವಿಷ್ಣು ಪ್ರಿಯಾ' ಸಿನಿಮಾಗೆ ಹಾಡುತ್ತಿರುವ ವಿಡಿಯೋವನ್ನು ಹೊರ ಬಿಟ್ಟಿದೆ. ಅಷ್ಟಕ್ಕೂ ಕೆ.ಮಂಜು ಆರೋಪ ಮಾಡಿದ ಮೇಲೆ ಹಾಡಿರೋದಾ? ಇಲ್ಲ ಅದಕ್ಕೂ ಮುನ್ನವೇ ಹಾಡಿದ್ದರೇ?
'ವಿಷ್ಣು ಪ್ರಿಯಾ' ಸಿನಿಮಾ ನಾಳೆ (ಫೆಬ್ರವರಿ 21) ಕರ್ನಾಟಕದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೆ ಇಡೀ ಚಿತ್ರರಂಗ ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ಕೆ.ಮಂಜು ತಮ್ಮ ಪುತ್ರನ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ಪಣ ತೊಟ್ಟು ನಿಂತಿದ್ದಾರೆ. ಹೀಗಾಗಿ ಎಲ್ಲೆಲ್ಲಿಂದ ಪ್ರಚಾರ ಮಾಡುವುದಕ್ಕೆ ಸಾಧ್ಯವೋ ಅಲ್ಲೆಲ್ಲ ಮಾಡುತ್ತಿದ್ದಾರೆ. ಈ ಮಧ್ಯೆದಲ್ಲಿ ಕೆ ಮಂಜು 'ರುಧ್ರ ಗರುಡ ಪುರಾಣ' ಸಿನಿಮಾದ ಇವೆಂಟ್‌ಗೆ ಹೋಗಿದ್ದಾಗ ಸಂಜಿತ್ ಹೆಗ್ಡೆ ವಿರುದ್ಧ ಕಿಡಿ ಕಾರಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲೂ ಸಂಜಿತ್ ಹೆಗ್ಡೆ ವಿರುದ್ಧ ಅಸಮಧಾನವನ್ನು ಹೊರ ಹಾಕಿದ್ದರು. ಮತ್ತೆ ಕನ್ನಡ ಸಿನಿಮಾಗಳಿಗೆ ಸಂಜಿತ್ ಹೆಗ್ಡೆ ಹೆಚ್ಚು ಸಂಭಾವನೆ ಪಡೆಯುತ್ತಾರೆ ಅಂತ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ, ಸಂಜಿತ್ ಹೆಗ್ಡೆ ಈ ಆರೋಪಗಳಿಗೆ ಇದೂವರೆಗೂ ಪ್ರತಿಕ್ರಿಯೆ ನೀಡಲಿಲ್ಲ. ಈ ಮಧ್ಯೆ 'ವಿಷ್ಣು ಪ್ರಿಯ' ತಂಡ ತಮ್ಮ ಸಿನಿಮಾಗೆ ಸಂಜಿತ್ ಹೆಗ್ಡೆ ಹಾಡಿದ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.
ಹಾಗಂತ ಇದು ಕೆ.ಮಂಜು ಆರೋಪ ಮಾಡಿದ ಬಳಿಕ ಹಾಡಿದ ಹಾಡು ಅಲ್ಲ. ಒಂದು ವರ್ಷದ ಹಿಂದೆ ಸಿನಿಮಾ ಮೇಕಿಂಗ್ ಮಾಡುವಾಗಲೇ ಸಂಜಿತ್ ಹೆಗ್ಡೆ ಈ ಹಾಡನ್ನು ಹಾಡಿ ಮುಗಿಸಿದ್ದಾರೆ. ಆ ವೇಳೆ ಸಂಜಿತ್ ಹೆಗ್ಡೆ ಈ ಸಿನಿಮಾಗೆ ಒಂದು ಹಾಡನ್ನು ಹಾಡಿದ್ದರು. ಆ ವೇಳೆ ಸಾಂಗ್ ಮೇಕಿಂಗ್ ಅನ್ನು ಸೆರೆ ಹಿಡಿಯಲಾಗಿತ್ತು. ಈಗ ವಿಷ್ಣುಪ್ರಿಯ ಸಿನಿಮಾ ಬಿಡುಗಡೆ ಆಗುತ್ತಿರುವ ಹೊಸ್ತಿಲ್ಲಲ್ಲಿ. ಸಂಜಿತ್ ಹೆಗ್ಡೆ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ.
ಕೆ.ಮಂಜು ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್, ಕಿಚ್ಚ ಸುದೀಪ್, ಯಶ್, ಗಣೇಶ್ ಸೇರಿದಂತೆ ಕನ್ನಡ ಜನಪ್ರಿಯರ ನಟರಿಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದೂವರೆಗೂ ಸುಮಾರು 48 ಸಿನಿಮಾಗನ್ನು ಪ್ರಡ್ಯೂಸ್ ಮಾಡಿದ್ದು, ಸೂಪರ್‌ಸ್ಟಾರ್‌ಗಳಿಗೆ ಸಿನಿಮಾ ಮಾಡುತ್ತಿದ್ದ ಮಂಜು ಮುಂದಿನ ದಿನಗಳಲ್ಲಿ ತಮ್ಮ ಪುತ್ರ ಶ್ರೇಯಸ್‌ಗೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











