ಶಾರುಖ್-ತಾಪ್ಸಿ ಪನ್ನು ರೊಮ್ಯಾಂಟಿಕ್ ಸಾಂಗ್ ನೋಡಲು ಫ್ಯಾನ್ಸ್ ಕಾತರ: 'ಡಂಕಿ' ಮೊದಲ ಹಾಡು ಯಾವಾಗ?
ಶಾರುಖ್ ಖಾನ್ ಮತ್ತೆ ಪ್ರೇಕ್ಷಕರನ್ನು ತನ್ನ ಹೊಸ ಸಿನಿಮಾ 'ಡಂಕಿ' ಮೂಲಕ ರಂಜಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ 'ಡಂಕಿ' ಡ್ರಾಪ್ 1 ಸಿನಿಮಾ ಪ್ರಿಯರಿಗೆ ಇಷ್ಟ ಆಗಿತ್ತು. ರಾಜ್ ಕುಮಾರ್ ಹಿರಾನಿ ನಿರ್ದೇಶನಕ್ಕೆ ಫ್ಯಾನ್ ಆಗಿರೋರಿಗೆ 'ಡಂಕಿ' ಡ್ರಾಪ್ 1 ಖುಷಿ ಕೊಟ್ಟಿತ್ತು.
'ಡಂಕಿ' ಡ್ರಾಪ್ 1 ಬಳಿಕ ಡ್ರಾಪ್ 2 ಹಾಗೂ ಡ್ರಾಪ್ 3 ಕೂಡ ಬರಲಿದೆ ಎಂದು ಈಗಾಗಲೇ ಸುದ್ದಿಯಾಗಿದೆ. ಎಲ್ಲರ ಕಣ್ಣು ಆ ಎರಡು ತುಣುಕುಗಳ ಮೇಲಿರುವಾಗಲೇ ರಾಜ್‌ಕುಮಾರ್ ಹಿರಾನಿ ಚಿಕ್ಕದೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಈ ಎರಡೂ ಡ್ರಾಪ್‌ಗಳ ಮಧ್ಯೆ ಹಾಡೊಂದನ್ನು ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ.

ಹೌದು, 'ಡಂಕಿ' ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳ ಕಣ್ಣು ಅರಳಿದೆ. ಕಳೆದ ಎರಡು ಸಿನಿಮಾಗಳಲ್ಲಿ ಶಾರುಖ್ ಖಾನ್ ಅನ್ನು ಹೆಚ್ಚಾಗಿ ಆಕ್ಷನ್ ಅವತಾರದಲ್ಲಿಯೇ ನೋಡಿದ್ದರು. ಹೀಗಾಗಿ ರೊಮ್ಯಾಂಟಿಕ್ ಲುಕ್‌ನಲ್ಲಿ ನೋಡುವುದಕ್ಕೆ ಕಾತುರರಾಗಿದ್ದಾರೆ.
'ಡಂಕಿ' ಸಿನಿಮಾದ ಈ ರೊಮ್ಯಾಂಟಿಕ್ ಸಾಂಗ್ ನವೆಂಬರ್ 22ರಂದು ರಿಲೀಸ್ ಮಾಡುವುದಕ್ಕೆ ಸಿದ್ಧತೆ ನಡೆದಿದೆ. "ಲುಪ್ ಪುಟ್ ಗಯಾ.." ಅನ್ನೋ ಈ ಮೇಲೋಡಿ ಹಾಡನ್ನು ಕೇಳುವುದಕ್ಕೆ ಸಂಗೀತ ಆಸಕ್ತರು ಕಾದು ಕೂತಿದ್ದಾರೆ. ಬಾಲಿವುಡ್‌ನ ಜನಪ್ರಿಯರ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ಮೇಲೆ ಚಿತ್ರಿಸಲಾಗಿರೋ ರೊಮ್ಯಾಂಟಿಕ್ ಸಾಂಗ್ ಎಂದು ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಾಜ್‌ಕುಮಾರ್ ಹಿರಾನಿ ಸಿನಿಮಾ ಟೀಸರ್‌ಗಳ ಜೊತೆ ಜೊತೆಗೆ ಹಾಡುಗಳ ಜರ್ನಿಯನ್ನು ಶುರು ಮಾಡುತ್ತಿದ್ದಾರೆ. ನಿರ್ದೇಶಕರ ಸ್ಟ್ರಾಟಜಿ ಬಗ್ಗೆ ಬಾಲಿವುಡ್ ಮೆಚ್ಚುಗೆ ವ್ಯಕ್ತಪಡಿಸಿದೆ. ಈಗಾಗಲೇ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಸಿನಿಮಾ 'ಸಲಾರ್' ಕೂಡ ಇದೇ ವೇಳೆ ರಿಲೀಸ್ ಆಗುತ್ತಿರುವುದರಿಂದ ಕಾಂಪಿಟೇಷನ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇತ್ತ 'ಸಲಾರ್' ಇನ್ನೂ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಡೇಟ್ ಅನೌನ್ಸ್ ಮಾಡಿದೆ. ಆದರೆ, ಹಾಡುಗಳು ಯಾವಾಗ ರಿಲೀಸ್ ಆಗುತ್ತೆ? ಪ್ರಶಾಂತ್ ನೀಲ್ ರಿಲೀಸ್ ಸ್ಟ್ರಾಟಜಿ ಏನು? ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಆದರೆ, 'ಡಂಕಿ' ತಂಡ ಮಾತ್ರ 'ಸಲಾರ್'ಗೆ ಸರಿಯಾಗಿ ಕಿಕ್ ಕೊಡುವುದಕ್ಕೆ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿದೆ.
'ಡಂಕಿ' ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರೋ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ 'ಡಂಕಿ'ಗೆ ಕಥೆ ಹೆಣೆದಿದ್ದಾರೆ.
'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸುತ್ತಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್ 22ಕ್ಕೆ 'ಡಂಕಿ' ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











