'ಬಘೀರ'ನಿಗೆ ಪರಿ ಪರಿಯಾಗಿ ಪರಿಚಯವಾದ ರುಕ್ಮಿಣಿ ವಸಂತ್: 2ನೇ ಹಾಡು ಕೇಳಿದ್ದೀರಾ?
ಶ್ರೀಮುರಳಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬಘೀರ' ರಿಲೀಸ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಕೊನೆಯ ಹಂತದ ಪ್ರಚಾರದಲ್ಲಿ ಇಡೀ ಚಿತ್ರತಂಡ ಮುಂದಾಗಿದೆ. ಕೊಂಚ ತಡವಾಗಿಯೇ ಪ್ರಚಾರವನ್ನು ಆರಂಭ ಮಾಡಿದೆ ಅಂತ ಅನಿಸಿದರೂ ಸಿನಿಮಾದ ಕಂಟೆಂಟ್ ಅನ್ನು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡುತ್ತಿದೆ.
'ಬಘೀರ' ಸಿನಿಮಾ ಬಿಡುಗಡೆಗೆ ಇನ್ನೇನು ಎರಡು ವಾರ ಇರುವಾಗಲೇ ಪ್ರಚಾರವನ್ನು ಆರಂಭ ಮಾಡಲಾಗಿತ್ತು. 'ಬಘೀರ' ಸಿನಿಮಾ "ರುಧಿರ ಧಾರಾ.." ಅನ್ನುವ ಮಾಸ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿತ್ತು. ಆ ಬಳಿಕ ಸಿನಿಮಾ ಟ್ರೇಲರ್ ರಿಲೀಸ್ ಮಾಡಿ ಮತ್ತಷ್ಟು ಕುತೂಹಲವನ್ನು ಚಿತ್ರತಂಡ ಹುಟ್ಟಿಸಿತ್ತು. ಈ ಬೆನ್ನಲ್ಲೇ ಮತ್ತೊಂದು ರೊಮ್ಯಾಂಟಿಕ್ ಮೆಲೋಡಿ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ 'ಬಘೀರ' ಸಿನಿಮಾದ ಸಾಂಗ್ ಎರಡನೇ ಹಾಡು ಸಖತ್ತಾಗಿದೆ. ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಕಾಂಬಿನೇಷನ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನ ಸಾಲೇ ಹೇಳುವಂತೆ ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಜೋಡಿಯ ಪರಿಚಯವನ್ನು ಇಲ್ಲಿ ಹೇಳಲಾಗಿದೆ. 2 ನಿಮಿಷ 9 ಸೆಕೆಂಡ್‌ಗಳಿರುವ ಈ ಹಾಡು ಕೇಳುವುದಕ್ಕೂ, ನೋಡುವುದಕ್ಕೂ ಹಿತವಾಗಿದೆ ಅಂತ ಅನಿಸುತ್ತೆ.
ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಜೋಡಿ ಸ್ಯಾಂಡಲ್‌ವುಡ್‌ನ ಬೆಸ್ಟ್ ಪೇರ್ ಆಗುವುದರಲ್ಲಿ ಅನುಮಾನವಿಲ್ಲ. ಪ್ರಮೋದ್ ಮರವಂತೆ "ಪರಿಚಯವಾದೆ.." ಅಂತ ಸಾಹಿತ್ಯವನ್ನು ಪೋಣಿಸಿದರೆ, ಅಜನೀಶ್ ಲೋಕನಾಥ್ ಈ ಸಿನಿಮಾಗೆ ಸಂಗೀತವನ್ನು ಸಂಯೋಜನೆ ಮಾಡಿದ್ದಾರೆ. ಈ ಹಾಡು ಬಿಡುಗಡೆಯಾಗಿ ಕೆಲವು ಗಂಟೆಗಳಾಗುವವ ಹೊತ್ತಿಗೆ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ವೀವ್ಸ್ ಅನ್ನು ಪಡೆದುಕೊಂಡಿದೆ.
"ಪರಿಚಯವಾದೆ.." ಹಾಡಿನಲ್ಲಿ ಶ್ರೀಮುರಳಿ ಖಡಕ್ ಪೊಲೀಸ್ ಆಫೀಸರ್ ಅನ್ನೋದನ್ನು ಬಿಂಬಿಸಲಾಗಿದ್ದರೂ, ಅಷ್ಟೇ ರೊಮ್ಯಾಂಟಿಕ್ ಅನ್ನೋದನ್ನು ಹೈಲೈಟ್ ಮಾಡಲಾಗಿದೆ. ಇನ್ನು ರುಕ್ಮಿಣಿ ವಸಂತ್ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಹುಡುಗರ ಹೃದಯಕ್ಕೆ ಖನ್ನ ಹಾಕಿದ್ದಾರೆ. ಸಿನಿಮಾ ಹಾಡಂತೂ ಸಂಗೀತ ಪ್ರಿಯರಿಗೆ, ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಸೈಲೆಂಟ್ ಆಗಿ ಕಿಕ್ ಕೊಟ್ಟಿರುವುದಂತೂ ನಿಜ.

'ಬಘೀರ' ಸಿನಿಮಾದಲ್ಲಿ ಶ್ರೀಮುರಳಿ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಇನ್ನೊಂದು ಕಡೆ ಸೂಪರ್ ಹೀರೋ ಆಗಿ ನೋಡುಗರಿಗೆ ಕಿಕ್ ಕೊಡಲಿದ್ದಾರೆ. ಹಾಗೇ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ಅಕ್ಟೋಬರ್ 31ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.
"ಪರಿಚಯವಾದೆ.." ಅನ್ನೋ ಹಾಡಿಗೆ ರಿತೇಶ್ ಜಿ ರಾವ್ ಧ್ವನಿ ನೀಡಿದ್ದಾರೆ. ಈ ಮೆಲೋಡಿ ಹಾಡಿಗೆ ಪ್ರೇಕ್ಷಕರು ಈಗಾಗಲೇ ಫಿದಾ ಆಗಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಈ ಸಿನಿಮಾಗೆ ಎಷ್ಟು ಬೇಕೋ ಅಷ್ಟು ಮಾತ್ರ ಪ್ರಚಾರವನ್ನು ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ನಿರ್ದೇಶಕ ಡಾ. ಸೂರಿ. ಒಟ್ಟಿನಲ್ಲಿ ಸಿನಿಮಾ ಎರಡನೇ ಹಾಡು ಸಂಗೀತ ಪ್ರಿಯರ ಮನಸ್ಸು ಗೆಲ್ಲುತ್ತಿದೆ.


Click it and Unblock the Notifications











