"ಬಡವರ ಸಾರಥಿ, ಕಣಕಣದಲ್ಲಿಯೂ ಹೆಸರು ಉಮಾಪತಿ"; ನಿರ್ಮಾಪಕನ ಹೊಗಳಿ ಅಟ್ಟಕ್ಕೇರಿಸಿದ ಬರ್ತ್‌ಡೇ ಸಾಂಗ್
ಕನ್ನಡ ಚಿತ್ರರಂಗದ ರೆಬೆಲ್ ನಿರ್ಮಾಪಕ ಅಂತಲೇ ಫೇಮಸ್ ಆಗಿರುವವರು ಉಮಾಪತಿ ಶ್ರೀನಿವಾಸ್ ಗೌಡ. ಕೂಗಾಟ ಕಿರುಚಾಟ ಇಲ್ಲದೆ ತಮ್ಮ ಮಾತುಗಳಿಂದಲೇ ಸದ್ದು ಮಾಡುತ್ತಿರುವ ನಿರ್ಮಾಪಕ. ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅಂತ ಸೂಪರ್‌ಸ್ಟಾರ್ ಅನ್ನು ಎದುರು ಹಾಕಿಕೊಂಡ ನಿರ್ಮಾಪಕ ಆಗಾಗ ಇಂತಹ ಕೆಲವು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ.
ದುಬಾರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಉಮಾಪತಿ ಎತ್ತಿದ ಕೈ. 'ಹೆಬ್ಬುಲಿ', 'ಒಂದಲ್ಲಾ ಎರಡಲ್ಲಾ', 'ರಾಬರ್ಟ್' ಹಾಗೂ 'ಉಪಾಧ್ಯಕ್ಷ' ಅಂತಹ ಸಿನಿಮಾವನ್ನು ನಿರ್ಮಾಣ ಮಾಡಿ ಬಾಕ್ಸಾಫೀಸ್‌ನಲ್ಲಿ ಲಾಭ ಕಂಡಿದ್ದಾರೆ. ಇತ್ತೀಚೆಗೆ ದರ್ಶನ್ ಜೈಲಿಗೆ ಹೋದ ಬಳಿಕ ಸಿಡಿದೆದ್ದು ರಾಜ್ಯಾದ್ಯಂತ ಸುದ್ದಿಯಲ್ಲಿ ಇದ್ದರು.

ಈ ರೆಬೆಲ್ ನಿರ್ಮಾಪಕ ಉಮಾಪತಿ ಗೌಡ ಜುಲೈ 27ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಖುಷಿಗಾಗಿ ಮತ್ತೊಬ್ಬ ನಿರ್ಮಾಪಕ ಬರ್ತ್‌ಡೇಗೆ ಇನ್ನೂ ನಾಲ್ಕು ದಿನಗಳು ಇರುವಾಗಲೇ ಹಾಡೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈಗಾಗಲೇ 'ದ ಕಫ್ತಾನ್' ಅನ್ನುವ ಆಲ್ಬಂ ಸಾಂಗ್ ಅನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಲಾಗಿದೆ. ಈ ಹಾಡಿನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರನ್ನು ಹೊಗಳಿ ಅಟ್ಟಕ್ಕೆ ಏರಿಸಲಾಗಿದೆ.
ಅಂದ್ಹಾಗೆ, ಉಮಾಪತಿ ಗೌಡ ಬರ್ತ್‌ಡೇ ವಿಶೇಷ ಹಾಡನ್ನು ಗಿಫ್ಟ್ ಮಾಡಿದ ಆ ನಿರ್ಮಾಪಕ ಶರಣಪ್ಪ ಗೌರಮ್ಮ. ಕಿಕ್ ಬಾಕ್ಸರ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಶರಣಪ್ಪ ಗೌರಮ್ಮ ಇತ್ತೀಚೆಗೆ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. 'ಯಾವ ಮೋಹನ ಮುರಳಿ ಕರೆಯಿತು' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಉಮಾಪತಿ ಶ್ರೀನಿವಾಸ್ ಗೌಡಗಾಗಿ 'ದ ಕಫ್ತಾನ್' ಅನ್ನುವ ಅಲ್ಬಂ ಸಾಂಗ್ ಅನ್ನು ನಿರ್ಮಾಣ ಮಾಡಿ ರಿಲೀಸ್ ಮಾಡಿದ್ದಾರೆ.
ಉಮಾಪತಿ ಸಾಂಗ್ ರಿಲೀಸ್ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ನನಗೆ ಉಮಾಪತಿ ಶ್ರೀನಿವಾಸ್, ಅವರ ಮೇಲೆ ಅಪಾರ ಪ್ರೀತಿ ಹಾಗೂ ಗೌರವ. ನಮ್ಮ ಎಲ್ಲಾ ಕೆಲಸಗಳಿಗೂ ಅವರ ಪ್ರೋತ್ಸಾಹ ಇರುತ್ತದೆ. ಹಾಗಾಗಿ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಮುಂಚಿತವಾಗಿಯೇ ತಿಳಿಸುತ್ತಿದ್ದೇನೆ" ಎಂದು ನಿರ್ಮಾಪಕ ಶರಣಪ್ಪ ಗೌರಮ್ಮ ತಿಳಿಸಿದ್ದಾರೆ.

ಅಂದ್ಹಾಗೆ, 'ದ ಕಫ್ತಾನ್' ಅನ್ನುವ ಅಲ್ಬಂ ಸಾಂಗ್‌ಗೆ ಪದ್ದಿ ಮಲ್ನಾಡ್ ಸಾಹಿತ್ಯ ರಚಿಸಿದ್ರೆ, ಅನಿಲ್ ಸಿ ಜೆ ಹಾಡಿ, ಸಂಗೀತವನ್ನೂ ನೀಡಿದ್ದಾರೆ. ಸದ್ಯ ಈ ಹಾಡಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ನಿರ್ಮಾಪಕರೊಬ್ಬರ ಹುಟ್ಟುಹಬ್ಬಕ್ಕೆ ಅಲ್ಬಂ ಸಾಂಗ್ ಮಾಡಿ ಉಡುಗೊರೆಯಾಗಿ ಕೊಟ್ಟಿರುವುದು ತೀರಾ ಅಪರೂಪ.
ಇನ್ನು ಉಮಾಪತಿ ಶ್ರೀನಿವಾಸ್ ಗೌಡ ಸಿನಿಮಾ ನಿರ್ಮಾಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ಹೊಸ ಸಿನಿಮಾದ ಘೋಷಣೆ ಮಾಡದೇ ಹೋದರೂ, ಹೊಸ ಕಥೆಗಳನ್ನು ಕೇಳುತ್ತಿರುವುದಾಗಿ ಈ ಹಿಂದೆ ಹೇಳಿದ್ದಾರೆ. ಇದರೊಂದಿಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದು, ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











