Garadi Song: 'ದಯಮಾಡಿ ಉರಿಸ ಬೇಡ ಬಡವನ ಹೃದಯ' ಗರಡಿಯ ಹಾಡು ದರ್ಶನ್ ಫೇವರಿಟ್!
ಯೋಗರಾಜ್ ಭಟ್ ಸಿನಿಮಾ ಮೇಲೆ ಕನ್ನಡಿಗರಿಗೆ ವಿಶೇಷವಾದ ಅಭಿಮಾನ. ಇವರು ನಿರ್ದೇಶಿಸೋ ಸಿನಿಮಾಗಳು ಸಿನಿಪ್ರಿಯರಿಗೆ ಏನಿಲ್ಲ ಅಂದರೂ ಮನರಂಜನೆಯನ್ನಂತೂ ನೀಡುತ್ತವೆ. ಭಟ್ಟರು ಬರೆಯೋ ಡೈಲಾಗ್‌ಗಳೇ ಸಾಕು. ಸಿನಿಪ್ರಿಯರು ಹುಚ್ಚೆದ್ದು ಶಿಳ್ಳೆಗಳನ್ನು ಹಾಕಿತ್ತಾರೆ.
ಈಗ ಇದೇ ಮೊದಲ ಬಾರಿಗೆ ಕುಸ್ತಿ ಹಿನ್ನೆಲೆಯನ್ನು ಇಟ್ಟುಕೊಂಡು 'ಗರಡಿ' ಅನ್ನೋ ಸಿನಿಮಾ ಮಾಡಿದ್ದಾರೆ. ಬಳ ದಿನಗಳ ಬಳಿಕ ಯಶಸ್ ಸೂರ್ಯ ನಾಯಕನಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ಅಂದುಕೊಂಡಂತೆ ಸಿನಿಮಾ ಮುಗಿಸಿ ಈಗ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ.

ಸದ್ಯಕ್ಕೀಗ 'ಗರಡಿ' ಸಿನಿಮಾ ತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಮುಂದಾಗಿದ್ದಾರೆ. ಯೋಗರಾಜ್ ಭಟ್, ವಿ. ಹರಿಕೃಷ್ಣ ಹಾಗೂ ಗಾಯಕ ವಿಜಯ ಪ್ರಕಾಶ್ ಮತ್ತೆ ಒಂದಾಗಿದ್ದು, ಫೀಲಿಂಗ್ ಸಾಂಗ್ ಒಂದು ರಿಲೀಸ್ ಆಗಿದೆ. ಇದು 'ಗರಡಿ' ಸಿನಿಮಾ ಮೂರನೇ ಸಾಂಗ್.
"ಬಡವನ ಹೃದಯ.." ಅನ್ನೋ ಹಾಡಿಗೆ ಸ್ವತ: ಯೋಗರಾಜ್ ಭಟ್ ಅವರೇ ಸಾಹಿತ್ಯ ರಚಿಸಿದ್ದಾರೆ. ಈ ಹಾಡು ಪ್ರತಿಯೊಬ್ಬ ಪ್ರೇಮಿಯ ಮನಸ್ಸಿಗೆ ಹತ್ತಿರವಾಗುವ ಸಾಂಗ್. ವಿ.ಹರಿಕೃಷ್ಣ ಸಂಗೀತ ನೀಡಿರುವ ಈ ಹಾಡಿಗೆ ಸಂಗೀತ ಪ್ರಿಯರು ಫಿದಾ ಆಗಿದ್ದಾರೆ. ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದ್ದು ಟಿಪಿಕಲ್ ಹರಿಕೃಷ್ಣ ಟ್ಯೂನ್ ಮತ್ತೆ ನೆನಪಾಗುತ್ತಿದೆ.
ಅಂದ್ಹಾಗೆ ಯೋಗರಾಜ್ ಭಟ್ ಎರಡನೇ ಲಾಕ್‌ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದರಂತೆ. "ಈ ಹಾಡು, ನನಗೆ ಹಾಗೂ ನಿರ್ಮಾಪಕರಿಗೆ ಅಚ್ಚುಮೆಚ್ಚು. ಬಾದಾಮಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಹಾಡಿನ ಚಿತ್ರೀಕರಣ ನಡೆದಿದೆ. ಹರಿಕೃಷ್ಣರ ಸಂಗೀತ, ವಿಜಯ್ ಪ್ರಕಾಶ್ ಗಾಯನ, ಸೂರ್ಯ, ಸೋನಾಲ್ ಮೊಂತೆರೊ ಹಾಗೂ ಸುಜಯ್ ಅಭಿನಯ ಚೆನ್ನಾಗಿದೆ. 'ದಯಮಾಡಿ ಉರಿಸ ಬೇಡ ಬಡವನ ಹೃದಯ' ಎಂಬ ಮೊದಲ ಸಾಲೇ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ" ಎಂದು ಯೋಗರಾಜ್ ಭಟ್ ಹಾಡಿನ ಬಗ್ಗೆ ಹೇಳಿದ್ದಾರೆ.

"ಯೋಗರಾಜ್ ಭಟ್ ಬರೆದಿರುವ ಈ ಹಾಡು ಕೇಳಿದರೆ, ನನಗೆ 'ಮುಂಗಾರು ಮಳೆ' ಸಿನಿಮಾದ "ಅನಿಸುತಿದೆ ಯಾಕೋ ಇಂದು.." ಹಾಡು ನೆನಪಾಗುತ್ತದೆ. ಈ ಹಾಡಿನ ಸಾಹಿತ್ಯ, ಗಾಯನ ಹಾಗೂ ನಟನೆ ಎಲ್ಲವೂ ಅದ್ಭುತವಾಗಿದೆ." ಎಂದು ನಿರ್ಮಾಪಕ ಹಾಗೂ ನಟ ಬಿ ಸಿ ಪಾಟೀಲ್ ಹೇಳಿದ್ದಾರೆ.
'ಗರಡಿ' ಸಿನಿಮಾ ನವೆಂಬರ್ 10ರಂದು ರಿಲೀಸ್ ಆಗುತ್ತಿದೆ. ಆದರೆ, ಅದರಲ್ಲೂ ಮುನ್ನ ಅಂದರೆ, ನವೆಂಬರ್ 1 ರಂದು ರಾಣಿಬೆನ್ನೂರಿನಲ್ಲಿ ಅದ್ದೂರಿಯಾಗಿ ಟ್ರೈಲರ್ ಬಿಡುಗಡೆ ಮಾಡಲಾಗುತ್ತದೆ. ಆ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರಲಿದ್ದಾರೆಂದು ಬಿ ಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.
"ಈ ಹಾಡಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. 'ಬಡವನ ಹೃದಯ' ಹಾಡು ಯೋಗರಾಜ್ ಭಟ್ ಅವರು ನನಗಾಗಿ ಬರೆದ ಹಾಗಿದೆ. ಈ ಹಾಡನ್ನು ದರ್ಶನ್ ಸರ್‌ಗೆ ಕೇಳಿಸಿದ್ದೆ. ಹಾಡಿನ ಸಾಹಿತ್ಯವನ್ನು ಅವರು ಬಹಳ ಇಷ್ಟ ಪಟ್ಟಿದ್ದರು" ಎಂದು ಹೀರೊ ಯಶಸ್ ಸೂರ್ಯ ನೆನಪಿಸಿಕೊಂಡಿದ್ದಾರೆ.
ಅಂದ್ಹಾಗೆ ಈ ಸಿನಿಮಾವನ್ನು ಸಚಿವ ಬಿ.ಸಿ.ಪಾಟೀಲ್ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ಸುಮಾರು 70 ದಿನಗಳ ಕಾಲ 'ಗರಡಿ' ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.


Click it and Unblock the Notifications











