'ದೊಡ್ಡಹಟ್ಟಿ ಬೋರೇಗೌಡ' ಸಿನಿಮಾ ಹಾಡಿಗೆ ಧ್ವನಿ ನೀಡಿದ ಸರಿಗಮಪ ಮೆಹಬೂಬ್ ಸಾಬ್
ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆ ಕಂಟೆಂಟ್ ಇರುವ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಒಂದ್ಕಡೆ ಪಕ್ಕಾ ಕಮರ್ಷಿಯಲ್ ಮಾಸ್ ಸಿನಿಮಾಗಳು ಸೆಟ್ಟೇರುತ್ತಿದೆ. ಅದೇ ಇನ್ನೊಂದು ಕಡೆ ಕಂಟೆಂಟ್ ಬೇಸ್ಡ್ ಸಿನಿಮಾಗಳು ಹೆಚ್ಚಾಗಿವೆ. ಸದ್ಯ ಎರಡೂ ಪ್ರಕಾರದ ಸಿನಿಮಾಗಳ ಸೆಟ್ಟೇರುತ್ತಿವೆ.
ಇಂತಹದ್ದೇ ಕಂಟೆಂಟ್ ಬೇಸ್ಡ್ ಸಿನಿಮಾಗಳಲ್ಲೊಂದು 'ದೊಡ್ಡಹಟ್ಟಿ ಬೋರೇಗೌಡ'. ಇದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾದ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಅದಕ್ಕೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಹಾಡೊಂದನ್ನು ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

'ದೊಡ್ಡಹಟ್ಟಿ ಬೋರೇಗೌಡ' ಸಿನಿಮಾ ಗ್ರಾಮೀಣ ಸೊಗಡಿನ ಕಥಾಹಂದರವಿರುವ ಸಿನಿಮಾ. ಈ ಸಿನಿಮಾ 2021 ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.
'ದೊಡ್ಡಹಟ್ಟಿ ಬೋರೇಗೌಡ' ಸಿನಿಮಾ ಬಿಡುಗಡೆಗೂ ಮುನ್ನವೇ ಕುತೂಹಲ ಮೂಡಿಸಿದೆ. ಸದ್ಯ ಈ ಸಿನಿಮಾದ ಹಾಡೊಂದು ಜನವರಿ 30 ರಂದು ಮೈಸೂರಿನಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ ಈ ಹಾಡನ್ನು 'ಸರಿಗಮಪ' ಖ್ಯಾತಿಯ ಮೆಹಬೂಬ್ ಸಾಬ್ ಧ್ವನಿ ನೀಡಿದ್ದಾರೆ.
ಈ ಗ್ರಾಮೀಣ ಸೊಗಡಿನ ಸಿನಿಮಾವನ್ನು ಬಿ.ಸಿ.ಶಶಿಕುಮಾರ್ ಹಾಗೂ ಕೆ.ಎಂ.ಲೋಕೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 'ತರ್ಲೆ ವಿಲೇಜ್', 'ಪರಸಂಗ' ಸಿನಿಮಾಗಳನ್ನು ನಿರ್ದೇಶಿಸಿದ್ದ ಕೆ.ಎಂ.ರಘು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಹಳ್ಳಿಯ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿರೋದು ವಿಶೇಷ.

ಈ ಸಿನಿಮಾದಲ್ಲಿ ನಟಿಸಿರೋರಿಗೆ ಮೂರು ತಿಂಗಳುಗಳ ಕಾಲ ವಿಶೇಷ ತರಬೇತಿ ನೀಡಲಾಗಿದೆ. ಶಿವಣ್ಣ ಬೀರಹುಂಡಿ, ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.


Click it and Unblock the Notifications











