ದರ್ಶನ್ ಚಿತ್ರ ಸಾರಥಿಗೆ ಹರಿದು ಬರುತ್ತಿದೆ ಜನಸಾಗರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಇತ್ತೀಚಿನ ವಿದ್ಯಮಾನದಿಂದ ಅವರ ಸ್ಟಾರ್ ಇಮೇಜ್ ಕುಗ್ಗಬಹದು ಎನ್ನುವ ಗಾಂಧಿನಗರ ಮತ್ತು ನಿರ್ಮಾಪಕರ ವಲಯದ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಕಳೆದ ಶುಕ್ರವಾರ (ಸೆ.30) ಬಿಡುಗಡೆಗೊಂಡ 'ಸಾರಥಿ' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಾರಥಿ ಚಿತ್ರ ಬಿಡುಗಡೆಗೊಂಡ ದಿನದಿಂದ ರಾಜ್ಯಾದ್ಯಂತ ತುಂಬಿದ ಪ್ರದರ್ಶನ ಕಾಣುತ್ತಿದೆ. ದರ್ಶನ್ ಚಿತ್ರದ ಸ್ಟ್ರಾಂಗ್ ಬೆಲ್ಟ್ ಎನ್ನಬಹುದಾದ ಮೈಸೂರು ಮತ್ತು ಹುಬ್ಬಳ್ಳಿ ವಲಯದಲ್ಲಿ ಚಿತ್ರಕ್ಕೆ ನಿರೀಕ್ಷೆಗೂ ಮೀರಿ ರೆಸ್ಪಾನ್ಸ್ ಸಿಗುತ್ತಿದೆ. ಮತ್ತೊಂದು ಗಮನಿಸಬೇಕಾದ ಅಂಶವೇನಂದರೆ ದರ್ಶನ್ ಚಿತ್ರಕ್ಕೆ ಅಷ್ಟೇನೂ ಮಾರುಕಟ್ಟೆ ಇಲ್ಲದ ಕರಾವಳಿ ವಲಯದಲ್ಲಿ ಕೂಡ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವುದು.
ಒಂದು ಮೂಲಗಳ ಪ್ರಕಾರ ಈಗಾಗಲೇ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನಲಾಗಿದೆ. ಶಾಲಾಕಾಲೇಜುಗಳಿಗೆ ದಸರಾ ರಜೆ ಮತ್ತು ಸಾಲು ಸಾಲು ಹಬ್ಬದ ಬಿಡುವು ಇರುವುದರಿಂದ ಚಿತ್ರದ ಕಲೆಕ್ಷನ್ ಜೋರಾಗಿಯೇ ಇದೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಸಿಕ್ಕಿರುವ ಉತ್ತಮ ವಿಮರ್ಶೆ ಕೂಡಾ ಪ್ರೇಕ್ಷಕರನ್ನು ಸೆಳೆಯಲು ಕಾರಣ ಆಗಿದ್ದರೂ ಆಗಿರಬಹುದು.
ಕಳೆದ ಒಂದು ತಿಂಗಳಿನಿಂದ ಕೆಟ್ಟ ಸುದ್ದಿಗಳನ್ನೇ ಕೇಳುತ್ತಿರುವ ದರ್ಶನ್‌ಗೆ ಚಿತ್ರದ ಈ ಪಾಟಿ ಯಶಸ್ಸು ಸಹಜವಾಗಿಯೇ ಖುಷಿ ತಂದಿದೆ. ಆದರೆ ಇದೇ ವಾರ ಬಿಡುಗಡೆ ಗೊಳ್ಳುತ್ತಿರುವ ಬಹು ನಿರೀಕ್ಷಿತ 'ಪರಮಾತ್ಮ' ಚಿತ್ರದ ಬಿಡುಗಡೆಯ ನಂತರ 'ಸಾರಥಿ'ಯ ಆರ್ಭಟ ಯಾವ ರೀತಿ ಮುಂದುವರಿಯಲಿದೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಸಾರಥಿ ಚಿತ್ರ ವಿಮರ್ಶೆ ಓದಿ. (ಒನ್‌ಇಂಡಿಯಾ ಕನ್ನಡ ಸಿನಿವಾರ್ತೆ)


Click it and Unblock the Notifications











