»   » ನಾವಿರುವುದು ನಿಮಗಾಗಿ, ನಾಡಿರುವುದು ನಮಗಾಗಿ

ನಾವಿರುವುದು ನಿಮಗಾಗಿ, ನಾಡಿರುವುದು ನಮಗಾಗಿ

By Staff
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  ಬೆಂಗಳೂರು, ಏ. 4 : ತಮಿಳುನಾಡಿನ ದಬ್ಬಾಳಿಕೆ ಮತ್ತು ಅಟ್ಟಹಾಸವನ್ನು ಸ್ಪಷ್ಟ ಶಬ್ದಗಳಲ್ಲಿ, ಆದರೆ ಶಾಂತಿಯುತವಾಗಿ ಖಂಡಿಸುವ ಕನ್ನಡ ಚಿತ್ರರಂಗದ ಧರಣಿ ಸತ್ಯಾಗ್ರಹ ಬೆಂಗಳೂರಿನಲ್ಲಿ ಇಂದು ಬಹುತೇಕ ಯಶಸ್ವಿಯಾಯಿತು. ಪುಟ್ಟಣ್ಣಚೆಟ್ಟಿ ಪುರಭವನದ ಮುಂದೆ ನಿರ್ಮಿಸಲಾಗಿದ್ದ ವಿಶಾಲವಾದ ಶಾಮಿಯಾನಾದಲ್ಲಿ ಕನ್ನಡ ಹಿರಿಕಿರಿ ತೆರೆಯ ಹಿರಿಕಿರಿ ಕಲಾವಿದರು ತಂತ್ರಜ್ಞರು ಧರಣಿ ಕುಳಿತು ರಾಜ್ಯದ ಹಿತಾಸಕ್ತಿಗಾಗಿ 'ಗಾಂಧಿಗಿರಿ' ನಡೆಸಿದರು.

  ಸತ್ಯಾಗ್ರಹದಲ್ಲಿ ಮಾತನಾಡಿದ ಅನೇಕರ ಧ್ವನಿ ಹೆಚ್ಚೂಕಡಿಮೆ ಒಂದೇ ಆಗಿತ್ತು. ಕರ್ನಾಟಕಕ್ಕೆ ಅನ್ಯಾಯವಾದಾಗ ನಾವೆಲ್ಲ ದನಿ ಎತ್ತುತ್ತೇವೆ. ಕನ್ನಡ ಚಿತ್ರರಂಗ ಯಾವತ್ತೂ ಕನ್ನಡ ರಾಜ್ಯದ ಪರವಾಗಿ ಚಿಂತಿಸುತ್ತದೆ ಮತ್ತು ಅಗತ್ಯಬಿದ್ದರೆ ಬೀದಿಗಿಳಿದು ಪ್ರತಿಭಟಿಸುತ್ತದೆ. ಆದರೆ, ಶಾಂತಿಭಂಗ, ನೆಮ್ಮದಿಭಂಗ ಉಂಟುಮಾಡುವಂಥ ಹೋರಾಟ ನಮ್ಮ ರಕ್ತದಲ್ಲಿಲ್ಲ. ನಮ್ಮ ಹೋರಾಟಕ್ಕೆ ಕಾನೂನು ಹಾಗೂ ಅಭಿಮಾನದ ಚೌಕಟ್ಟು ಇರುತ್ತದೆ. ಇದೇ ಬಂಗಾರದ ಚೌಕಟ್ಟು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

  ಗೋವಿಂದು ನೇತೃತ್ವ : ಕೆಲ ಹಿರಿಯ ಕಲಾವಿದರ ಅನುಪಸ್ಥಿತಿಯಲ್ಲಿ ಪ್ರತಿಭಟನೆಯ ನೇತೃತ್ವವಹಿಸಿದ್ದ ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಭಾಷಣ ಸ್ಪಲ್ಪ ಮಟ್ಟಿಗೆ ಉಗ್ರರೂಪ ಪಡೆದುಕೊಂಡಿತ್ತು. ಕನ್ನಡದ ಕಣ್ಮಣಿ ರಾಜ್ ಕುಮಾರ್ ಅವರೇ ನಮಗೆ ಸದಾ ಸ್ಪೂರ್ತಿ ಎಂದರು. ಕರ್ನಾಟಕದ ಹಿತಾಸಕ್ತಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಮುಂತಾಗಿ ಮಾತುಗಳನ್ನಾಡಿದರು. ಇವತ್ತಿನ ಸತ್ಯಾಗ್ರಹ ಕೇವಲ ಇವತ್ತಿಗೆ ಮಾತ್ರ ಸೀಮಿತವಲ್ಲ, ಇದು ನಿರಂತರ ಎಂದು ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಘಂಟಾಘೋಷವಾಗಿ ಸಾರಿದರು.

  ಹೊಗೇನಕಲ್ ಸತ್ಯಾಗ್ರಹಕ್ಕೆ ಜನಸಾಗರವೇ ಹರಿದುಬಂದಿತ್ತು. ಬೆಳಗ್ಗೆ 8 ಗಂಟೆಯಿಂದಲೇ ಪುರಭವನದ ಬಳಿ ಜಮಾಯಿಸ ತೊಡಗಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸಾಕುಬೇಕಾಯಿತು. ಆದರೆ ಶಾಂತರೀತಿಯಿಂದ ಜನ ನಡೆದುಕೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಜರುಗಲಿಲ್ಲ. ಜಮಾಯಿಸಿದ ಜನರ ಉತ್ಸಾಹದಲ್ಲಿಯೂ ಕೊರತೆಯಿರಲಿಲ್ಲ. ನಟನಟಿಯರ ಭಾಷಣಗಳ ಮಧ್ಯೆಯೂ "ರಾಜ್ ಕುಮಾರ್ ಗೆ ಜಯವಾಗಲಿ, ಕರುಣಾನಿಧಿಗೆ ಧಿಕ್ಕಾರ, ಜೈ ಕರ್ನಾಟಕ" ಘೋಷಣೆಗಳು ಜನಸಾಗರದಿಂದ ತೇಲಿಬರುತ್ತಿದ್ದವು.

  ದಿಗ್ಗಜರ ಗೈರು : ಮುಷ್ಕರಕ್ಕೆ ಬಹುತೇಕ ಕಲಾವಿದರು ಆಗಮಿಸಿದ್ದರು. ಆದರೆ, ಕನ್ನಡದ ಹಿರಿಯ ನಟ 'ಸಾಹಸಸಿಂಹ' ವಿಷ್ಣುವರ್ಧನ್ ಮತ್ತು 'ಮಂಡ್ಯದಗಂಡು' ಹಾಗೂ ಮಾಜಿ ಲೋಕಸಭಾಸದಸ್ಯ ಅಂಬರೀಷ್ ಅವರ ಗೈರು ಹಾಜರಿ ಎದ್ದುಕಾಣುತ್ತಿತ್ತು. ಈ ಇಬ್ಬರೂ ನಟರು ತಮ್ಮ ತಮ್ಮ ಸಂಸಾರ ಸಮೇತ ಮಡಿಕೇರಿಗೆ ಖಾಸಗಿ ಕೆಲಸಕ್ಕಾಗಿ ಟೂರ್ ಹೋಗಿದ್ದು ಬೆಂಗಳೂರಿಗೆ ಬರಲಿಲ್ಲ. ಚಿತ್ರೀಕರಣವೂ ಇಲ್ಲ, ಖಾಸಗಿ ಕೆಲಸವೂ ಇಲ್ಲ, ತಂಪಾದ ಹವೆಯಲ್ಲಿ ನಾಕು ದಿನ ಹಾಯಾಗಿದ್ದು ಬರಲು ಅವರು ಮಡಿಕೇರಿಗೆ ಹೋಗಿದ್ದಾರೆ ಎಂದು ಕಿರಿತೆರೆಯ ಕಲಾವಿದೆಯೊಬ್ಬರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಸತ್ಯಂ ಚಿತ್ರದ ಚಿತ್ರೀಕಣದಲ್ಲಿ ಭಾಗಿಯಾಗಿದ್ದ ಉಪೇಂದ್ರ ಪ್ರತಿಭಟನೆಯ ಸುದ್ದಿ ಕೇಳಿ ಚಿತ್ರೀಕರಣವನ್ನು ಬಿಟ್ಟು ಹಾಜರಾಗಿದ್ದರು.

  ಧರಣಿ ಸತ್ಯಾಗ್ರಹದ ತಾಣಕ್ಕೆ ತಡವಾಗಿ ಬಂದ ಕಾಮಿಡಿ ಗಣೇಶ್ ಅವರನ್ನು ಸಾ.ರಾ. ಗೋವಿಂದು ತರಾಟೆಗೆ ತೆಗೆದುಕೊಂಡರು. "ನೀವಿನ್ನೂ ಚಿಕ್ಕ ಹುಡುಗರು, ಪ್ರಸಿದ್ಧಿಗೆ ಬಂದವರು, ಸಮಯಪಾಲನೆ, ಶಿಸ್ತು ಈ ರಂಗದಲ್ಲಿ ತುಂಬಾ ಮುಖ್ಯವೆನ್ನುವ ಸಂಗತಿಯನ್ನು ಅರಿಯಬೇಕು" ಎಂದು ತಿಳಿಹೇಳಿದರು. ಗಣೇಶ್ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿ ಹೋರಾಟದಲ್ಲಿ ಜನತೆ ಹಿಂಸಾಚಾರಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿಕೊಂಡರು.

  ಸುದೀಪ್ ಚಿತ್ರೀಕರಣದ ನಿರತರಾಗಿದ್ದು ಅವರೀಗ ಮುಂಬೈನಲ್ಲಿ ಇದ್ದಾರೆಂದು ತಿಳಿದುಬಂದಿದೆ. ಶಿವರಾಜ್ ಕುಮಾರ್ ಆಸ್ಟ್ರೇಲಿಯಾದಲ್ಲಿದ್ದಾರೆ. ಇಲ್ಲೇ ಇದ್ದು ಸತ್ಯಾಗ್ರಹಕ್ಕೆ ಬರದಿದ್ದವರ ಪಟ್ಟಿಯಲ್ಲಿ ಸರೋಜಾದೇವಿ, ರಮೇಶ್ ಅರವಿಂದ್ ಪ್ರಮುಖರು. (ರಮೇಶ್ ಅವರ ಆಕ್ಸಿಡೆಂಟ್ ಚಿತ್ರ ಇವತ್ತು ಬಿಡುಗಡೆಯಾಗಿದೆ) ಇವರಿಬ್ಬರೂ ತಮಿಳು ಚಿತ್ರರಂಗದಲ್ಲಿ ತುಂಬಾ ಪಾಪ್ಯುಲರ್. ಇನ್ನು ಕನ್ನಡವನ್ನೇ ನಂಬಿಕೊಂಡಿರುವ ಜಗ್ಗೇಶ್, ದರ್ಶನ್, ಪುನೀತ್, ರಾಘವೇಂದ್ರ ರಾಜ್ ಕುಮಾರ್, ವಿಜಯ ರಾಘವೇಂದ್ರ, ತಾರಾ, ಜಯಮಾಲಾ, ಅನುಪ್ರಭಾಕರ್, ಬೆಳಗ್ಗೆ ಬೇಗ ಬಂದವರಲ್ಲಿ ಪ್ರಮುಖರು. ಸಮಯಕ್ಕೆ ಸರಿಯಾಗಿ ಬಂದ ರಮ್ಯಾ ಅಭಿಮಾನ ಮತ್ತು ತಾಯಿನಾಡು ಶಾಂತಿ ಸಹಬಾಳ್ವೆ ಬಗ್ಗೆ ಚೆನ್ನಾಗಿ ಭಾಷಣ ಮಾಡಿದರು. ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಕೂಡ ಭಾಗವಹಿಸಿದ್ದರು, ಆದರೆ ಭಾಷಣ ಮಾಡಲಿಲ್ಲ.

  ತಮಿಳುನಾಡಿನ ದಬ್ಬಾಳಿಕೆಯ ವಿರುದ್ಧ ಸಿಡಿದ್ದೆದ ಭಾಷಣ ಮಾಡಿದವರಲ್ಲಿ ಗೋವಿಂದು ಬಿಟ್ಟರೆ ಶ್ರೀನಿವಾಸ ಮೂರ್ತಿ, ಸುಂದರ ರಾಜ್, ಬ್ಯಾಂಕ್ ಜನಾರ್ಧನ್ ಪ್ರಮುಖರು. ಫಿಲಂ ಛೇಂಬರಿನ ಅಧ್ಯಕ್ಷ ತಲ್ಲಂ ನಜುಂಡ ಶೆಟ್ಟಿ, ಪಾರ್ವತಮ್ಮ ರಾಜ್ ಕುಮಾರ್, ನಿದರ್ಶೇಕರಾದ ದುನಿಯಾ ಸೂರಿ, ನಂಜುಂಡೇಗೌಡ, ಬಿ. ಸುರೇಶ, 'ಹೊಡಿ ಮಗ ಹೊಡಿ ಮಗ' ಎನ್ನುತ್ತಲೇ ಮಾತನಾಡಿದ ಪ್ರೇಮ್, ಪುನೀತ್, ತರುಣ್ ಎಲ್ಲರ ಬಾಯಲ್ಲಿ ಜೈ ಕರ್ನಾಟಕ ಮಾತೆ ಜಯಘೋಷ.

  ಚೈನ್ನೈನಲ್ಲಿ ಪ್ರತಿಭಟನೆ : ತಮಿಳುನಾಡಿನ ಹೊಗೇನಕಲ್ ಯೋಜನೆ ವಿರುದ್ಧ ಕರ್ನಾಟಕದ ಜನತೆ ರೊಚ್ಚಿಗೆದ್ದಿದ್ದನ್ನು ವಿರೋಧಿಸಿ ನಡಿಗರ ಸಂಘಂ ಕರೆದಿದ್ದ ಪ್ರತಿಭಟನೆ ಸಭೆಯಲ್ಲಿ ಕನ್ನಡ ಮೂಲದ ಪ್ರಮುಖರಾದ ರಜನಿಕಾಂತ್, ಅರ್ಜುನ್ ಸರ್ಜಾ, ಪ್ರಕಾಶ್ ರೈ, ಮುರುಳಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು. ರಜನಿ, ಪ್ರಕಾಶ್ ಮತ್ತು ಮುರುಳಿ ತಮಿಳುನಾಡಿನ ಪರವಾಗಿ ಭಾಷಣ ಮಾಡಿದರು. 12 ಗಂಟೆಗೆ ತಮ್ಮ ಬೆಂಬಲಿಗರೊಡನೆ ಆಗಮಿಸಿದ ಕಲಾವಿದ ಕಂ ರಾಜಕಾರಣಿ ವಿಜಯಕಾಂತ್ ಕಾವೇರಿ ನೀರನ್ನು ತಂದುಕೊಡದ ರಾಜಕಾರಣಿಗೆ ಮತ ಹಾಕಬಾರದೆಂದು ಭಾಷಣ ಬಿಗಿದು ಕೆಲವೇ ನಿಮಿಷಗಳಲ್ಲಿ ಜಾಗ ಖಾಲಿ ಮಾಡಿದರು. ವಿಜಯಕಾಂತ್ ಅಷ್ಟೇ ಅಲ್ಲ ಯುವ ನಟರಾದ ವಿಜಯ್, ಸೂರ್ಯ, ಅಜಿತ್, ವಿಶಾಲ್ ಮೊದಲಾದವರು ಕಾಟಾಚಾರಕ್ಕೆ ಬಂದವರಂತೆ ಮುಖತೋರಿಸಿ ಹೊರಟುಹೋದರು.

  ಕನ್ನಡ ಚಿತ್ರೋದ್ಯಮದ ಸತ್ಯಾಗ್ರಹದ ಚಿತ್ರಸಂಪುಟ

  ಪೂರಕ ಓದಿಗೆ:
  ಕನ್ನಡ ನೆಲ,ಜಲ,ಭಾಷೆಗಾಗಿ ಬೀದಿಗಿಳಿದ ಕಲಾವಿದರು
  ನೆಲ,ಜಲ,ಭಾಷೆಗಾಗಿ ಸಂರಕ್ಷಣೆಗೆ ಚಿತ್ರರಂಗ ಕಂಕಣ
  ಹೊಗೇನಕಲ್ : ಕನ್ನಡದ ಮಕ್ಕಳೆಲ್ಲ ಒಂದಾಗಬನ್ನಿ
  ಬಂದ್‌ಗೆ ಕನ್ನಡ ಚಿತ್ರೋದ್ಯಮದ ಪೂರ್ಣಬೆಂ'ಬಲ'
  ಸೂಪರ್ ಸ್ಟಾರ್ ರಜನಿಗೆ ಸಿಇಟಿ ಪರೀಕ್ಷೆ
  ತಮಿಳುನಾಡಿನಲ್ಲಿ ಕನ್ನಡ ಚಾನೆಲ್‌ ಪ್ರಸಾರ ಬಂದ್
  ಹೊಗೇನಕಲ್ ಯೋಜನೆ ವಿರುದ್ಧ ಕರ್ನಾಟಕ ಬಂದ್
  ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more