ಕರ್ನಾಟಕವಾಯಿತು ಇಂದು, ಕನ್ನಡ ನಿರ್ಮಾಪಕರೆಲ್ಲ ಒಂದು

ಈ ಹಿಂದೆಯೇ ಹೇಳಿದಂತೆ ಕನ್ನಡ ಚಿತ್ರಕ್ಕೆ ಕನ್ನಡ ಚಿತ್ರಗಳೇ ಪೈಪೋಟಿ. ಹೈಪ್ ಇರುವ ಚಿತ್ರಗಳು ಒಂದೇ ವಾರದಲ್ಲಿ ಬಿಡುಗಡೆಯಾದರೆ ಪ್ರೇಕ್ಷಕ ಯಾವ ಚಿತ್ರಕ್ಕೆ ಮನ್ನಣೆ ನೀಡುತ್ತಾನೆ ಎನ್ನುವುದು ಯಾರ ಲೆಕ್ಕಾಚಾರಕ್ಕೂ ಬರದ ಸಂಗತಿ. ಹಾಗಾಗಿ ಒಂದು ಚಿತ್ರ ಗೆದ್ದರೆ ಇನ್ನೊಂದು ಚಿತ್ರ ಸೋಲುವುದು ಮಾಮೂಲಿ.
ಹೀಗಾಗಿ ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಸೂರಪ್ಪ ಬಾಬು ಮುಂತಾದವರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ನಮ್ಮಲ್ಲಿ ಪೈಪೋಟಿ ಬೇಡ, ಹೊಂದಾಣಿಕೆಯಿಂದ ಚಿತ್ರ ಬಿಡುಗಡೆ ಮಾಡೋಣ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಸೂರಪ್ಪ ಬಾಬು ಮತ್ತು ಕುಮಾರ್ ಕೊಬ್ಬರಿ ಮಂಜು ಮತ್ತು ಅಣಜಿ ನಾಗರಾಜ್ ಬಳಿ ಕೂಡಾ ಈ ಬಗ್ಗೆ ಚರ್ಚಿಸಿದ್ದಾರೆ.
ಇನ್ನು ಮೂರು ತಿಂಗಳ ಅವಧಿಯಲ್ಲಿ ಬಿಡುಗಡೆಗೊಳ್ಳುತ್ತಿರುವ ದೊಡ್ಡ ಬಜೆಟ್ ಚಿತ್ರಗಳು ಒಂದಕ್ಕೊಂದು ಕ್ಲ್ಯಾಶ್ ಆಗದಂತೆ ಎರಡು ವಾರದ ಅವಧಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಮುಖ್ಯವಾಗಿ ಪುನೀತ್ ಅಭಿನಯದ ಅಣ್ಣಾಬಾಂಡ್, ಶಿವರಾಜ್ ಕುಮಾರ್ ಅಭಿನಯದ ಶಿವ, ದುನಿಯಾ ವಿಜಯ್ ಅಭಿನಯದ ಭೀಮಾ ತೀರದಲಿ, ರವಿಚಂದ್ರನ್ ಅಭಿನಯದ ನರಸಿಂಹ ಮತ್ತು ದಶಮುಖ, ಮಮ್ಮುಟ್ಟಿ ಅಭಿನಯದ ಶಿಖಾರಿ ಚಿತ್ರಗಳನ್ನು ಆಯಾಯ ಚಿತ್ರಗಳ ನಿರ್ಮಾಪಕರ ಜೊತೆ ಮಾತುಕತೆ ನಡೆಸಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಇದಲ್ಲದೆ, ಪ್ರೀತಂ ಗುಬ್ಬಿ ನಿರ್ದೇಶನದ ಜಾನೂ, ಜಯಣ್ಣ ನಿರ್ಮಿಸುತ್ತಿರುವ ಪರಮಶಿವ, ಅಣಜಿ ನಾಗರಾಜ್ ಅವರ ಸಾಗರ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಬ್ರೇಕಿಂಗ್ ನ್ಯೂಸ್ ಚಿತ್ರಗಳು ಕೂಡ ಪೈಪೋಟಿಗೆ ಬೀಳದೆ ತೆರೆಗೆ ತರಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎನ್ನುವುದು ಗಾಂಧಿನಗರದ ಸುದ್ದಿ.
ತಡವಾದರೂ ಚಿತ್ರರಂಗದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರಕ್ಕೆ ಬಂದ ನಿರ್ಮಾಪಕರಿಗೆ ಆಲ್ ದಿ ಬೆಸ್ಟ್.


Click it and Unblock the Notifications











