ಶಂಕರ್ ನಾಗ್‌ರನ್ನು ನೆನೆದು ಕಣ್ಣೀರಿಟ್ಟ ಅನಂತ್ ನಾಗ್

ನೇರವಾಗಿ ಉಣಕಲ್ ಕೆರೆ ದಂಡೆಯ ಮೇಲಿನ ನವೀನ್ ಹೋಟೆಲಿಗೆ ಹೋದೆವು. ನಮ್ಮ ಮೂವರಿಗೊಂದು ಕೋಣೆ. ಅನಂತ್‌ಗೊಂದು ಕೋಣೆ. ಈ ನಡುವೆ ರವಿಬೆಳಗೆರೆ ಹಬ್ಬಳ್ಳಿಯ ತಮ್ಮ ಮನೆ ಕಡೆ ಹೊರಟರು. ನಾನು ಮತ್ತು ಉದಯ್ ನಾಳಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಿದೆವು. ಅಷ್ಟರಲ್ಲಿ ಬಾಗಿಲು ಬಡಿದ ಸದ್ದು, ಅನಂತ್ ಯಾವತ್ತೂ ಕಾಲಿಂಗ್ ಬೆಲ್ ಒತ್ತುತ್ತಿರಲಿಲ್ಲ, ನಾವು ಮೂವರೂ ಕೋಣೆ ತೊರೆದು ಬಾರ್ ಸೆಕ್ಷನ್‌ಗೆ ಕಾಲಿಟ್ಟೆವು. ಸ್ವಲ್ಪ ಹೊತ್ತಿನಲ್ಲೇ ರವಿ ಸೇರಿಕೊಂಡರು.
ಅವರವರಿಗೆ ಏನು ಬೇಕೋ ಅವರವರು ಸೇವಿಸುತ್ತಿರುವಂತೆಯೇ ಅನಂತ್ ಮತ್ತೆ ರಾಂಗಾದರು: "ರಾತ್ರಿ ಪಾರ್ಟಿ ಮುಗಿಸಿ ಹೊರಡಬೇಡ ಅಂತ ನಾನೇ ತಾಕೀತು ಮಾಡಿದೆ. ಶಂಕ್ರ ಯಾವತ್ತೂ ನನ್ನ ಮಾತು ಮೀರೋನಲ್ಲ. ಆದ್ರೆ ಮಾರನೇ ದಿನ ಲೋಕಾಪುರದಲ್ಲಿ 'ಜೋಕುಮಾರ ಸ್ವಾಮಿ' ಮುಹೂರ್ತವಿತ್ತಲ್ಲ, ಹೊರಡಲೇಬೇಕಿತ್ತು. ಕೆಲಸಕ್ಕೆ ತಪ್ಪಿಸಿಕೊಳ್ಳದ ಶಂಕ್ರ ಸ್ವಲ್ಪ ಅನುಮಾನಿಸಿದ. ಆದ್ರೆ ಆಕೆ ಬಿಡಬೇಕಲ್ಲಾ ಲಂಕಿಣಿ, ಶಾಕಿನಿ, ಢಾಕಿಣಿ...ಆಕೆ ಎಳೆದುಕೊಂಡು ಹೋದಳು. ನಾನೇನು ಮಾಡಲಿ? ಮತ್ತೂ ಕೂಗಿ ಹೇಳ್ದೆ...ಮುಂಜಾನೆ ಹೊರಡಪ್ಪಾ ಅಂತ... ಆದ್ರೆ ಮುಂಜಾವು ಬಂದ ಸುದ್ದಿ ಶಂಕ್ರ ಹೆಣವಾದದ್ದು."
ಅಯ್ಯೋ..ಹೇಗೆ ಸಹಿಸೋದು ನನ್ನ ಅರ್ಧಶಕ್ತಿಯೇ ಹೊರಟು ಹೋಯಿತು. "ಶಂಕ್ರ....ಶಂಕ್ರಾ...ಶಂಕ್ರಾ..." ಎನ್ನುತ್ತಾ ಒಮ್ಮೆ ಜೋರಾಗಿ ಟೇಬಲ್ ಬಡಿದರು ಅನಂತ್. ನಂತರ ಟೇಬಲ್ ಮೇಲಿನ ಬಟ್ಟೆಯನ್ನು ಎಳೆದುಬಿಟ್ಟರು. ಮೇಲಿದ್ದ ವಸ್ತುಗಳೆಲ್ಲಾ ಚೆಲಾಪಿಲ್ಲಿಯಾಗಿ ಬಿದ್ದವು. ಸ್ಟುವರ್ಟ್‌ಗಳೆಲ್ಲಾ ಓಡೋಡಿ ಬಂದರು. ಅನಂತ್ ವ್ಯಗ್ರರಾಗಿದ್ದರು. ಪದೇ ಪದೇ ಶಂಕರ್‌ನಾಗ್ ಹೆಸರು ಜಪಿಸುತ್ತಾ ಎದ್ದು ಹೊರಟೇ ಬಿಟ್ಟರು. ಪ್ರಾಯಶಃ ಅನಂತ್‌ನಾಗ್ ಕುಡಿದು ತೂರಾಡಿದ್ದನ್ನು ನಾವು ನೋಡಿದ್ದೇ ಅಂದು!
ಮಾರನೇ ದಿನ ಯಥಾ ಪ್ರಕಾರ ಫೋನ್ ಇನ್ ಕಾರ್ಯಕ್ರಮ ನಡೆಯಿತು. ಅದ್ಭುತ ರೆಸ್ಪಾನ್ಸ್. ರವಿಬೆಳಗೆರೆ, ಉದಯ ಮರಕಿಣಿ ಮತ್ತು ನನಗೆ ಟೇಬಲ್ ಮೇಲಿಟ್ಟಿದ್ದ ನಾಲ್ಕು ಟೆಲಿಫೋನ್ ರಿಸೀವರ್‌ಗಳನ್ನು ಎತ್ತುವುದೇ ಕೆಲಸ. ಆಯ್ಕೆ ಮಾಡಿದ ಕಾಲ್‍ನ್ನು ಅನಂತ್‌ಗೆ ರವಾನಿಸುತ್ತಲೇ ಇದ್ದೆವು. ಅದೊಂದು ಏಳೇಳು ಜನ್ಮಕ್ಕೂ ಮರೆಯಲಾಗದ ಅನುಭವ. ಅಖಂಡ ನಾಲ್ಕು ಗಂಟೆಗಳ ಕಾಲ ಅನಂತ್ ತಮ್ಮ ಅಭಿಮಾನಿಗಳಿಗೆ ಉತ್ತರಿಸಿದರು. ಆದರೂ ಅವರು ಸುಸ್ತಾಗಿರಲಿಲ್ಲ.


Click it and Unblock the Notifications











