ಬೇಸಿಗೆ ಬೇಗೆ ನೀಗಲು 'ಕೂಲ್' ಆಗಿ ಬರುತ್ತಿದ್ದಾನೆ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ಕೂಲ್. ಆರಂಭದಿಂದಲೂ ಈ ಚಿತ್ರ ಸಾಕಷ್ಟು ವಿಘ್ನಗಳನ್ನು ಎದುರಿಸುತ್ತಾ ಬಂದಿತ್ತು. ಈ ಎಲ್ಲಾ ವಿಘ್ನಗಳನ್ನು ಗಣೇಶ್ ನಿವಾರಿಸಿಕೊಳ್ಳುತ್ತಾ ಇದೇ ಗುರುವಾರ(ಮೇ.12) 'ಕೂಲ್' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಗಣೇಶನ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಚಿತ್ರ ಇದಾಗಿದೆ.
'ಏನೋ ಒಂಥರಾ' ಚಿತ್ರದ ಬಳಿಕ ತೆರೆಕಾಣುತ್ತಿರುವ ಗೋಲ್ಡನ್ ಸ್ಟಾರ್ ಚಿತ್ರ ಕೂಲ್. ಈ ಚಿತ್ರವನ್ನು ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಿಸಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ದುಬೈ, ಈಜಿಪ್ಟ್, ಜೋಡನ್ ಮುಂತಾದ ಕಡೆ ಚಿತ್ರದ ಚಿತ್ರೀಕರಣ ನಡೆದಿದೆ. ನಟನಾಗಿ ಅಭಿಮಾನಿಗಳ ಮನ ಗೆದ್ದಿರುವ ಗಣೇಶ್ ಈಗ ನಟನೊಂದಿಗೆ ನಿರ್ದೇಶಕ ಕೂಡ ಆಗಿದ್ದಾರೆ.
ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರ ನೋಡುಗರಿಗೆ ಮೆಚ್ಚುಗೆ ಆಗಲಿದೆ ಎನ್ನುತ್ತಾರೆ ಗಣೇಶ್. 'ಕೂಲ್'ಗೆ ಖ್ಯಾತ ಛಾಯಾಗ್ರಾಹಕ ರತ್ನವೇಲು ರವರ ಛಾಯಾಗ್ರಹಣವಿದೆ. 'ಘಜನಿ' ಖ್ಯಾತಿಯ ಸಂಕಲನಕಾರ ಆಂಟನಿಯವರ ಸಂಕಲನವಿದೆ. ರಮೇಶ್‌ದೇಸಾಯಿ ಕಲಾ ನಿರ್ದೆಶನ, ವಿ.ಹರಿಕೃಷ್ಣರ ಸಂಗೀತ, ರವಿಶಂಕರ್ ನಿರ್ಮಾಣ ನಿರ್ವಹಣೆ, ದತ್ತಣ್ಣ, ಯತೀಶ್‌ಕುಮಾರ್ ಮೇಲ್ವಿಚಾರಣೆ ಈ ಚಿತ್ರಕ್ಕಿದೆ. ಗಣೇಶ್, ಸನಾಖಾನ್, ಸಾಧುಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. (ದಟ್ಸ್ ಕನ್ನಡ ಸಿನಿ ವಾರ್ತೆ)


Click it and Unblock the Notifications











